ಶ್ರೀರಂಗಪಟ್ಟಣ ತಾಲೂಕಿನ ಬಾಬುರಾಯನಕೊಪ್ಪಲು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಕಸಾಪ ತಾಲೂಕು ಘಟಕ ಶನಿವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಂಕ್ರಾಂತಿ ಕವಿಗೋಷ್ಠಿಯನ್ನು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವಿ.ಹರ್ಷ ಪಣ್ಣೆದೊಡ್ಡಿ ಉದ್ಘಾಟಿಸಿದರು.
Published on:
Copied
Follow Us
ಶ್ರೀರಂಗಪಟ್ಟಣ:ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಅಧ್ಯಕ್ಷ ಮಹೇಶ್‌ಜೋಷಿ ಅವರು ತಮ್ಮ ಸ್ವಾರ್ಥ ಸಾಧನೆಗೆ ತೆಗೆದುಕೊಂಡ ಕೆಲ ತೀರ್ಮಾನಗಳಿಂದ ಕಸಾಪದ ಘನತೆಗೆ ಕಳಂಕ ತಂದರು ಎಂದು ಕಸಾಪ ಜಿಲ್ಲಾ ಅಧ್ಯಕ್ಷ ಪಣ್ಣೆದೊಡ್ಡಿ ಹರ್ಷ ಹೇಳಿದರು.
ತಾಲೂಕಿನ ಬಾಬುರಾಯನಕೊಪ್ಪಲು ಗ್ರಾಮದಲ್ಲಿ ಕಸಾಪ ತಾಲೂಕು ಘಟಕದಿಂದ ಶನಿವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಂಕ್ರಾಂತಿ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಕಳೆದ ವರ್ಷ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮುಗಿದ ತಕ್ಷಣ ಕಸಾಪ ಜಿಲ್ಲಾ ಘಟಕವನ್ನು ವಿಸರ್ಜಿಸಿದರು. ಕಸಾಪ ಬೈಲಾದಂತೆ ಜಿಲ್ಲಾ ಘಟಕದ ಅಧ್ಯಕ್ಷನಾಗಿದ್ದ ನನ್ನ ಸದಸ್ಯತ್ವ ರದ್ದುಪಡಿಸಿದರು. ಪ್ರೊ.ಬಿ.ಜಯಪ್ರಕಾಶಗೌಡ ಅವರ ವಿರುದ್ಧ ಮಾನ ನಷ್ಟ ಮೊಕೊದ್ದಮೆ ಹೂಡಿದರು. ಈಗ ಜೋಷಿ ಅವರ ವಿರುದ್ಧವೇ ಅವ್ಯವಹಾರ ನಡೆಸಿರುವ ಕುರಿತು ಸಾಕಷ್ಟು ಆರೋಪಗಳು ಕೇಳಿ ಬಂದಿದ್ದು, ನ್ಯಾಯಾಂಗ ತನಿಖೆಗೆ ಒತ್ತಾಯಿಸುತ್ತಿರುವುದು ಹಾಸ್ಯಾಸ್ಪದ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕವಿ ಕೊತ್ತತ್ತಿ ರಾಜು ಮಾತನಾಡಿ, ಗದ್ಯ ನಡಿಗೆಯಾದರೆ ಪದ್ಯ ನಾಟ್ಯ ಎನಿಸಿದೆ. ಪದ್ಯಗಳಲ್ಲಿ ಪ್ರತಿಮೆಯೇ ಪ್ರಧಾನವಾಗಿರುತ್ತದೆ. ಶಬ್ದ ಮತ್ತು ಅರ್ಥ ಮೇಳೈಸಿದರೆ ಕಾವ್ಯದ ರೂಪ ಪಡೆಯುತ್ತದೆ ಎಂದು ಹೇಳಿದರು. ಕಾವ್ಯ ನಿಚ್ಚಂ ಪೊಸದು ಎಂದು ಪಂಪ ಬಣ್ಣಿಸಿದ್ದಾನೆ. ಕವಿತೆ ಚಿಕಿತ್ಸಕ ದೃಷ್ಟಿಕೋನ ಹೊಂದಿರಬೇಕು ಎಂದರು.
ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಾಮನಹಳ್ಳಿ ಮಹದೇವಸ್ವಾಮಿ ಮಾತನಾಡಿ, ತಾಲೂಕು ಘಟಕದ ಕ್ರೀಯಾಶೀಲ ಕಾರ್ಯಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಕಸಾಪ ತಾಲೂಕು ಘಟಕದ ಅಧ್ಯಕ್ಷ ಸಿದ್ದಲಿಂಗು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಖಿಲ ಭಾರತ ಪಂಚಾಯತ್ ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಂ.ಸುಬ್ರಹ್ಮಣ್ಯ, ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಸಿ.ಜೆ.ಶ್ರೀನಿವಾಸ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಹೇಮಲತಾ ಹರಿಯಾಳ, ಪುರುಷೋತ್ತಮ, ಕೆ.ಬಿ.ಬಸವರಾಜು, ಕೆ.ಟಿ.ರಂಗಯ್ಯ, ಮರವೇ ಅಧ್ಯಕ್ಷ ಬಿ.ಶಂಕರಬಾಬು ಉಪಸ್ಥಿತರಿದ್ದರು.