ಮೇಷ ಮಾಸ, ಶುಕ್ಲಪಕ್ಷ, ಸಪ್ತಮಿ ದಿನದಂದು ಗೌತಮ ಋಷಿಗೆ ಶ್ರೀರಂಗನಾಥಸ್ವಾಮಿ ದರ್ಶನ ನೀಡಿದ ರಂಗಜಯಂತಿ ಪ್ರಯುಕ್ತ ಮೈಸೂರಿನ ರಂಗಮುಡಿ ಸಮಿತಿಯಿಂದ ಹಮ್ಮಿಕೊಂಡಿದ್ದ ಉತ್ಸವದ ಹಿನ್ನೆಲೆ ಯಲ್ಲಿ ವೈದಿಕರು ಆದಿಶೇಷ ಸ್ವರೂಪಿ ಶ್ರೀರಂಗನಾಥ ಸ್ವಾಮಿಯ ಸಾಲಿಗ್ರಾಮ ಮೂರ್ತಿಗೆ ವಿವಿಧ ಅಭಿಷೇಕ ನೆರವೇರಿಸಿ ಮಹಾಮಂಗಳಾರತಿ ಅರ್ಪಿಸಿ ವರ್ಷಕ್ಕೆ 3 ಬಾರಿ ಮಾತ್ರ ಸಿಗುವ ನಿಜ ಪಾದ ದರ್ಶನದೊಂದಿಗೆ ದೇವರ ವೀಕ್ಷಣೆಗೆ ಭಕ್ತರಿಗೆ ಅವಕಾಶ ಕಲ್ಪಿಸಿದರು. ಮಧ್ಯಾಹ್ನ ಸಹಸ್ರಾರು ಭಕ್ತರಿಗಾಗಿ ಪ್ರಸಾದ ವಿನಿಯೋಗ ಮಾಡಲಾಯಿತು. ಸಂಜೆ ತಾಲೂಕು ಆಡಳಿತದ ಖಜಾನೆಯಲ್ಲಿರುವ ಮೈಸೂರು ಮಹಾರಾಜರು ಕೊಡುಗೆ ನೀಡಿರುವ ರತ್ನಖಚಿತ ವಜ್ರದ ಕಿರೀಟ, ಮುತ್ತು-ನವರತ್ನದ ಹಾರ ಗಳು, ಅಮ್ಮನವರಿಗೆ ಆಭರಣ ಸೇರಿದಂತೆ ಒಡವೆಗಳ ಬುತ್ತಿಯನ್ನು ದೇವಾಲಯದ ಕಾರ್ಯನಿರ್ವಹಣಾ ಧಿಕಾರಿ ಉಮಾ, ಪ್ರಧಾನ ಅರ್ಚಕರಾದ ವಿಜಯ ಸಾರಥಿ ಹಾಗೂ ಪ್ರಸನ್ನ ಅವರೊಂದಿಗೆ ಸಿಬ್ಬಂದಿ ದೇಗುಲಕ್ಕೆ ಹೊತ್ತು ತಂದರು. ಸಂಪ್ರದಾಯದಂತೆ ಮೊದಲಿಗೆ ಪಟ್ಟಣದ ಪ್ರಮುಖ ರಾಜಬೀದಿಗಳಲ್ಲಿ ಪ್ರಖಾರ ಉತ್ಸವವನ್ನು ಕೊಂಡೊಯ್ದು ಮೆರವಣಿಗೆ ನಡೆಸಿದರು. ದೇವಾಲಯದ ಆವರಣದಲ್ಲಿ ಗೋಧೂಳಿ ಸಮ ಯದಲ್ಲಿ ವೈದಿಕರ ಪೂಜಾಕೈಂಕರ್ಯಗಳು ಆರಂಭವಾ ಯಿತು. ವೇದ ಪಾರಾಯಣ, ವಿಷ್ಣು ಸಹಸ್ರನಾಮ ಪಠಣ ಬಳಿಕ ಉತ್ಸವಮೂರ್ತಿಗೆ ನೈವೇದ್ಯ ಹಾಗೂ ಸಂಗೀತ ಉತ್ಸವವನ್ನು ಅರ್ಪಿಸಲಾಯಿತು. ಶ್ರೀದೇವಿ, ಭೂದೇವಿ ಸಮೇತ ವೈನತೇಯ (ಗರುಡ)ಸ್ವಾಮಿ ಆರೋಹಣಾ ಮಾಡಿದ ಶ್ರೀರಂಗನಾಥ ಸ್ವಾಮಿಯ ಪಂಚಲೋಹದ ಉತ್ಸವ ಮೂರ್ತಿಯನ್ನು ಅಲಂಕೃತ ವಿಶೇಷ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ಭಕ್ತರು ಹಾಗೂ ದೇವರ ಸೇವಕರು ಪಲ್ಲಕ್ಕಿಯನ್ನು ಹೊತ್ತು ತಂದರು. ಬಳಿಕ ರಂಗಮುಡಿ ಉತ್ಸವಕ್ಕೆ ಕ್ಷೇತ್ರದ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಚಾಲನೆ ನೀಡಿದರು. ಶಾಸಕರ ಪತ್ನಿ ಸುಮತಿ ರಮೇಶ ಬಂಡಿಸಿದ್ದೇಗೌಡ, ತಹಸೀಲ್ದಾರ್ ಚೇತನಾ ಯಾದವ್, ದೇವಾಲಯದ ಇಒ ಉಮಾ ಹಾಗೂ ಪ್ರಧಾನ ಅರ್ಚಕ ವಿಜಯ ಸಾರಥಿ ಇದ್ದರು. ದೇವಾಲಯದ ರಾಜಗೋಪುರದ ಮೂಲಕ ಶ್ರೀರಂಗಮುಡಿ ಉತ್ಸವ ಹೊರ ಬರುತ್ತಲೇ ಶ್ರೀರಂಗನಾಥ, ಮಹಾವಿಷ್ಣು, ಗೋವಿಂದ, ನಾರಾಯಣ ಎಂಬಿತ್ಯಾದಿ ಜಯಘೋಷಗಳು ಭಕ್ತರಿಂದ ಮೊಳಗಿದವು. ಈ ವೇಳೆ ಬಾಣ ಬಿರುಸುಗಳು, ಸಿಡಿಮದ್ದನ್ನು ಸಿಡಿಸಲಾಯಿತು. ಬಳಿಕ ಅಪಾರ ಸಂಖ್ಯೆಯ ಭಕ್ತರು ಹಾಗೂ ಪುರಜನರೊಂದಿಗೆ ಮಂಗಳವಾದ್ಯಗಳೊಂದಿಗೆ, ನಾಸಿಕ್ ಡೋಲು, ಕಂಸಾಲೆ ನೃತ್ಯ ಹಾಗೂ ವೀರಭದ್ರ ಕುಣಿತ ಜಾನಪದ ಕಲಾತಂಡಗಳೊಂದಿಗೆ ಶ್ರೀರಂಗಮುಡಿ ಪಲ್ಲಕ್ಕಿಯನ್ನು ಹೊತ್ತು ತಡರಾತ್ರಿವರೆಗೂ ಪಟ್ಟಣದ ಚತುರ್ಥ ರಾಜಬೀದಿಗಳಲ್ಲಿ ಉತ್ಸವ ಜರುಗಿತು. ಬಳಿಕ ಭಕ್ತರಿಗೆ ಅನ್ನ ಪ್ರಸಾದ ವಿನಿಯೋಗ ಮಾಡಲಾಯಿತು. ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ಕೇರಳ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯದಿಂದಲೂ ಭಕ್ತರು ಆಗಮಿಸಿದ್ದರು. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಉಮಾ, ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸೋಮಶೇಖರ್, ಸದಸ್ಯರಾದ ಆಶಾಲತಾ ಪುಟ್ಟೇಗೌಡ, ಕಮಲಮ್ಮ, ಗುರು ನಾಗೇಂದ್ರದತ್, ಸುಬ್ರಮಣ್ಯ, ಸೇತುವೆ ಸತೀಶ್, ಆನಂದ್ ಇತರರು ಇದ್ದರು.