ಶ್ರೀ ಸಿದ್ದರಾಮೇಶ್ವರ ದೇಗುಲದ ವಾರ್ಷಿಕೋತ್ಸವ

ಮಾದನಾಯಕನಹಳ್ಳಿ ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡಿರುವ ಪುರಾಣ ಪ್ರಸಿದ್ಧ ಶ್ರೀ ಸಿದ್ದರಾಮೇಶ್ವರ ದೇವಾಲಯದ ಮೊದಲನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಟ್ರಸ್ಟ್ ಅಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ ಅವರು ದೇವರಿಗೆ 1008 ಶಂಖಾಭಿಷೇಕ ನೆರವೇರಿಸಿದರು.
ಮಾದನಾಯಕನಹಳ್ಳಿ ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡಿರುವ ಪುರಾಣ ಪ್ರಸಿದ್ಧ ಶ್ರೀ ಸಿದ್ದರಾಮೇಶ್ವರ ದೇವಾಲಯದ ಮೊದಲನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಟ್ರಸ್ಟ್ ಅಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ ಅವರು ದೇವರಿಗೆ 1008 ಶಂಖಾಭಿಷೇಕ ನೆರವೇರಿಸಿದರು.
Published on
ಮದ್ದೂರು: ತಾಲೂಕಿನ ನಿಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದನಾಯಕನಹಳ್ಳಿ ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡಿರುವ ಪುರಾಣ ಪ್ರಸಿದ್ಧ ಶ್ರೀ ಸಿದ್ದರಾಮೇಶ್ವರ ದೇವಾಲಯದ ಮೊದಲನೇ ವರ್ಷದ ವಾರ್ಷಿಕೋತ್ಸವ ಸಡಗರ ಸಂಭ್ರಮದಿಂದ ಸೋಮವಾರ ನೆರವೇರಿತು.
ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ಬೆಳಗ್ಗೆಯಿಂದಲೇ ವಿಘ್ನನಿವಾರಕ ಗಣಪತಿ ಪೂಜೆಯೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಮಹಾ ಸಂಕಲ್ಪ ಕಳಸ ಮತ್ತು 1008 ಶಂಖು ಸ್ಥಾಪನೆ, ಗಣಪತಿ, ಸುಬ್ರಹ್ಮಣ್ಯ ಹಾಗೂ ನವಗ್ರಹ, ಕಾಲಭೈರವ, ಮಹಾಲಕ್ಷ್ಮೀ, ದುರ್ಗಾ, ರುದ್ರ ಹಾಗೂ ವಾಸ್ತು ಹೋಮ ಸೇರಿದಂತೆ ಸೋಮವಾರದವರೆಗೆ ವಿವಿಧ ಧಾರ್ಮಿಕ ಹಾಗೂ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಂಡು ದೇವರಿಗೆ ವಿಶೇಷ ಅಭಿಷೇಕ, ಹೋಮ-ಹವನ ಹಾಗೂ ವಿಶೇಷ ಅಲಂಕಾರ ಪೂಜೆಗಳು ಜರುಗಿದವು.
ಸೋಮವಾರ ಬೆಳಗ್ಗೆ 7 ಗಂಟೆಗೆ ಮಂಗಳವಾದ್ಯದೊಂದಿಗೆ ಮಹಾಗಣಪತಿ ಪೂಜೆ, ಸಿದ್ದರಾಮೇಶ್ವರ ಸ್ವಾಮಿಗೆ ಪಂಚಾಮೃತ ಅಭಿಷೇಕ, ವಿಶೇಷ ದ್ರವ್ಯ ಅಭಿಷೇಕ, ಶತರುದ್ರಾಭಿಷೇಕ ಸೇರಿದಂತೆ 1008 ಶಂಖಾಭಿಷೇಕ ನಡೆದ ಬಳಿಕ ಮಹಾಮಂಗಳಾರತಿಯೊಂದಿಗೆ ತೀರ್ಥ ಪ್ರಸಾದ ವಿತರಿಸಿದ ಬಳಿಕ ಸಹಸ್ರಾರು ಭಕ್ತರಿಗೆ ಹೋಳಿಗೆ ಊಟ ಉಣ ಬಡಿಸಲಾಯಿತು.
ತೈಲೂರು ಗ್ರಾಮದ ಶ್ರೀ ತೈಲೂರಮ್ಮ, ಶ್ರೀ ಮಂಚಮ್ಮ, ಬೂದನೂರು ಶ್ರೀ ಅಂಕನಾಥೇಶ್ವರ, ಶ್ರೀ ಸಿದ್ದರಾಮೇಶ್ವರ, ಮಲ್ಲಮ್ಮ ದೇವರ ಉತ್ಸವ ಸಾವಿರಾರು ಭಕ್ತರ ಜಯಘೋಷಗಳೊಂದಿಗೆ ಅದ್ದೂರಿಯಾಗಿ ನಡೆಯಿತು.
ವಾರ್ಷಿಕೋತ್ಸವ ಅಂಗವಾಗಿ ಮಾದನಾಯಕನಹಳ್ಳಿಯಲ್ಲಿ ಹಬ್ಬದ ವಾತಾವರಣ ಮನೆಮಾಡಿತ್ತು. ದೇಗುಲಕ್ಕೆ ಬಣ್ಣ ಬಣ್ಣದ ವಿದ್ಯುತ್ ದೀಪ ಹಾಗೂ ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು.
ಧಾರ್ಮಿಕ ಮಹೋತ್ಸವದಲ್ಲಿ ಬೆಂಗಳೂರು, ರಾಮನಗರ, ಕನಕಪುರ, ಮಳವಳ್ಳಿ, ಮೈಸೂರು ರಾಜ್ಯದ ವಿವಿಧೆಡೆ ಹಾಗೂ ಮಾದನಾಯಕನಹಳ್ಳಿ, ತೈಲೂರು, ಬ್ಯಾಡರಹಳ್ಳಿ, ನಿಡಘಟ್ಟ, ತಿಪ್ಪೂರು, ಮಾದಾಪುರದೊಡ್ಡಿ, ಕೊಂಗಬೋರನದೊಡ್ಡಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
ಶ್ರೀ ಪಟ್ಟಲದಮ್ಮ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ ಮಾತನಾಡಿ, ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಶ್ರೀ ಸಿದ್ದರಾಮೇಶ್ವರ ದೇವಾಲಯದ ಮೊದಲನೇ ವಾರ್ಷಿಕೋತ್ಸವವನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು. ದೇಗುಲಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಇಷ್ಟಾರ್ಥಗಳು ಈಡೇರುವುದರಿಂದ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದರು.
ದೇವಾಲಯದ ಟ್ರಸ್ಟ್ ಕಾರ್ಯದರ್ಶಿ ಮಹೇಶ್, ಖಜಾಂಚಿ ಗಿರೀಶ್, ಸಾಹಿತಿ ತೈಲೂರು ವೆಂಕಟಕೃಷ್ಣ, ನಂದೀಶ್, ಮಹರ್ನವಮಿದೊಡ್ಡಿ ಚಂದ್ರಣ್ಣ, ನಾಗೇಶ್, ಕೂಳಗೆರೆ ಶೇಖರ್, ಕೋಕಿಲಾ, ಅರುಣ್ ಕುಮಾರ್, ಬೊಮ್ಮಯ್ಯ, ಕೆ.ರಾಜೇಂದ್ರ ಕುಮಾರ್, ಸುನೀಲ್ ಕುಮಾರ್, ನಿರ್ವಹಣಾ ಸಮಿತಿಯ ಪುಟ್ಟರಾಮು, ರವಿ, ಆತ್ಮ, ಅಪ್ಪಾಜಿ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net