ಶ್ರೀ ಶಿವಕುಮಾರ ಸ್ವಾಮೀಜಿ ಕೊಡುಗೆ ಅಪಾರ

ತಾಲೂಕಿನ ಬಾಬುರಾಯನಕೊಪ್ಪಲಿನ ವೃತ್ತದಲ್ಲಿ ಬುಧವಾರ ಮರವೇ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಶಿವಕುಮಾರಸ್ವಾಮಿಗಳ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಲಾಯಿತು. ಆರ್.ರಾಘವೇಂದ್ರ, ಬಿ.ಶಂಕರ್ ಬಾಬು, ಬಳ್ಳೆಕೆರೆ ಶ್ರೀಕಾಂತ್, ವೀಣಾಭಾಯಿ ಇತರರು ಇದ್ದರು.
ತಾಲೂಕಿನ ಬಾಬುರಾಯನಕೊಪ್ಪಲಿನ ವೃತ್ತದಲ್ಲಿ ಬುಧವಾರ ಮರವೇ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಶಿವಕುಮಾರಸ್ವಾಮಿಗಳ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಲಾಯಿತು. ಆರ್.ರಾಘವೇಂದ್ರ, ಬಿ.ಶಂಕರ್ ಬಾಬು, ಬಳ್ಳೆಕೆರೆ ಶ್ರೀಕಾಂತ್, ವೀಣಾಭಾಯಿ ಇತರರು ಇದ್ದರು.
Published on
ಶ್ರೀರಂಗಪಟ್ಟಣ: ಇಂದಿಗೂ ಈ ಸಮಾಜದಲ್ಲಿ ಮಾನವೀಯತೆ, ಮೌಲ್ಯ ಹಾಗೂ ಮಾದರಿಯ ಆಡಳಿತ ಕನ್ನಡಿಗರಿಗೆ ಸಿಗುವಲ್ಲಿ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮಿಗಳ ಕೊಡುಗೆ ಅಪಾರ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಆರ್.ರಾಘವೇಂದ್ರ ತಿಳಿಸಿದರು.
ತಾಲೂಕಿನ ಬಾಬುರಾಯನಕೊಪ್ಪಲು ಗ್ರಾಮದ ಬ್ಯಾಂಕ್ ಆಫ್ ಬರೋಡಾ ಮುಂಭಾಗದಲ್ಲಿ ಬುಧವಾರ ಮಂಡ್ಯ ರಕ್ಷಣಾ ವೇದಿಕೆಯಿಂದ ಆಯೋಜಿಸಿದ್ದ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮಿಗಳ 119ನೇ ಜಯಂತ್ಯುತ್ಸವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಬಡ ಮತ್ತು ಮಧ್ಯಮ ವರ್ಗದ ಅಸಂಖ್ಯಾತ ಬಡ ಮಕ್ಕಳಿಗೆ ಯಾವುದೇ ಭೇದವಿಲ್ಲದೆ ಅನ್ನ, ಅಕ್ಷರ, ಆಶ್ರಯದೊಂದಿಗೆ ಸುಮಾರು 50 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬೆಳಕಾದ ಶ್ರೀಗಳು ಸಾಕಷ್ಟು ವರ್ಷಗಳ ಕಾಲ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಶ್ರೀಗಳು ಎಂದಿಗೂ ಪ್ರಚಾರ ಅಥವಾ ವೈಯಕ್ತಿಕ ಲಾಭಗಳಿಗೆ ಹಿಂದೆ ಹೋದವರಲ್ಲ, ಲೋಕಕಲ್ಯಾಣದ ಧ್ಯೇಯಕ್ಕಾಗಿ ತಮ್ಮ ಜೀವನ ಮುಡಿಪುಟ್ಟು ಮಾದರಿ ಹಾಗೂ ಆದರ್ಶಗಳನ್ನು ಬಿಟ್ಟುಹೋದ ಶತಾಯುಷಿ ನಮಗೆ ಸ್ಫೂರ್ತಿ ಎಂದರು.
ಅಖಿಲ ಭಾರತ ಕೃಷಿಕ ಸಮಾಜದ ಸದಸ್ಯ ಬಿ.ಎಂ.ಸುಬ್ರಮಣ್ಯ ಮಾತನಾಡಿ, ಪ್ರಸ್ತುತ ಸಮಾಜಕ್ಕೆ ಕೊಡುಗೆ ನೀಡಿದ ಹಾಗೂ ಮೌಲ್ಯಾಧಾರಿತ ಜೀವನ ನಡೆಸಿ ಆದರ್ಶ ಎನಿಸಿದ ಮಹನೀಯರನ್ನು ಮರೆಯುತ್ತಿದ್ದೇವೆ. ಮಂಡ್ಯ ರಕ್ಷಣಾ ವೇದಿಕೆ ಮಹನೀಯರ ಹೆಸರಲ್ಲಿ ಮಾದರಿ ಕಾರ್ಯಕ್ರಮ ಆಯೋಜಿಸುತ್ತಾ ಸದಾ ಜೀವಂತವಾಗಿರಿಸುತ್ತಿರುವುದು ಶ್ಲಾಘನೀಯ ಎಂದರು.
ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಶಂಕರ್ ಬಾಬು ಮಾತನಾಡಿ, ಶ್ರೀ ಶಿವಕುಮಾರ ಸ್ವಾಮೀಜಿಯ ಮಹತ್ಕಾರ್ಯಗಳನ್ನು ವರ್ಣಿಸಲು ಭಾಷಣ ಹಾಗೂ ಕಾರ್ಯಕ್ರಮಗಳು ಸಾಲದು. ಶ್ರೀಗಳು ಹಾಕಿಕೊಟ್ಟ ಆದರ್ಶದಡಿ ಜನಪರ ಕಾರ್ಯಕ್ರಮ ರೂಪಿಸಲಾಗುವುದು ಎಂದರು.
ವೇದಿಕೆಯ ಗೌರವ ಅಧ್ಯಕ್ಷ ಬಳ್ಳೆಕೆರೆ ಶ್ರೀಕಾಂತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಅಭಿನಂದಿಸಲಾಯಿತು. ರೈತ ಶಾಲೆಯ ಸಂಸ್ಥಾಪಕ ಮತ್ತು ಉಪನ್ಯಾಸಕ ಗಂಜಾಂ ಸತ್ಯಮೂರ್ತಿ, ಮಂಡ್ಯದ ಸಹಾಯಕ ಯುವಜನ ಸಮನ್ವಯ ಅಧಿಕಾರಿ ವಿಜಯಕುಮಾರ್, ಉದ್ಯಮಿ ಸಾಗರ್, ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ಹೇಮಲತಾ ಹರಿಯಾಳ, ಶಿಕ್ಷಕ ರಾಜೇಂದ್ರ ಬಾಬು, ಪತ್ರಕರ್ತರಾದ ರವೀಶ್ ಗೌಡ, ಎಂ.ಸಿ.ಪ್ರಕಾಶ್, ಶಿಕ್ಷಣ ಇಲಾಖೆ ಸಿಬ್ಬಂದಿ ನೂರ್‌ಹುಸೇನ್, ಗ್ರಾಮದ ಹಿರಿಯರಾದ ಜವರೇಗೌಡ, ಬಸವೇಗೌಡ, ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಗೌಡ, ಪದಾಧಿಕಾರಿಗಳಾದ ವೀಣಾಭಾಯಿ, ಭಾಗ್ಯ ಭಾಯಿ, ಜ್ಯೋತಿ, ನಂದಿನಿ, ಅಶ್ವಿನಿ ಮನೋಜ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net