ಹಲಗೂರು: ಸಮೀಪದ ಬಾಣಸಮುದ್ರ ಗ್ರಾಮದ ದ್ವಾರದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಶ್ರೀರಾಮನವಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಲಾಯಿತು.
ಶ್ರೀರಾಮನವಮಿ ಅಂಗವಾಗಿ ದೇವಸ್ಥಾನದ ಆವರಣವನ್ನು ವಿವಿಧ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಪ್ರಧಾನ ಅರ್ಚಕ ಶೈಲೇಂದ್ರ ಅವರ ನೇತೃತ್ವದಲ್ಲಿ ವಿಶೇಷ ಪೂಜೆ, ಮಹಾ ಮಂಗಳಾರತಿ ಮಾಡಿದ ನಂತರ ಬಂದ ಭಕ್ತರಿಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಲಾಯಿತು. ಹಬ್ಬದ ಅಂಗವಾಗಿ ಆಂಜನೇಯಸ್ವಾಮಿಯನ್ನು ಬೆಣ್ಣೆಯಿಂದ ಅಲಂಕರಿಸಲಾಗಿತ್ತು.
ಗ್ರಾಮದ ಮುಖಂಡ ಬಿ.ಟಿ.ರಮೇಶ್ ಮಾತನಾಡಿ, ನಮ್ಮ ಗ್ರಾಮದ ಬಳಿ ಆಕಸ್ಮಿಕವಾಗಿ ಕೋತಿಯೊಂದು ಮೃತಪಟ್ಟ ಹಿನ್ನೆಲೆಯಲ್ಲಿ ಆ ಕೋತಿಯನ್ನು ತಂದು ನಮ್ಮ ಗ್ರಾಮದ ಈಶಾನ್ಯ ಭಾಗದಲ್ಲಿ ಅಂತ್ಯಕ್ರಿಯೆ ನಡೆಸಿ ಅಲ್ಲಿ ಒಂದು ಗುಡಿಯನ್ನು ನಿರ್ಮಿಸಲಾಯಿತು. ಅಂದಿನಿಂದ ಗ್ರಾಮಕ್ಕೆ ಒಳಿತಾಗಲಿ ಎಂಬ ಉದ್ದೇಶದಿಂದ ದಿನನಿತ್ಯ ಪೂಜೆ ಪುನಸ್ಕಾರಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ ಎಂದರು.
ಶನಿವಾರ ಆಂಜನೇಯಸ್ವಾಮಿಯ ವಾರವಾಗಿರುವುದರಿಂದ ಗ್ರಾಮದ ಯಜಮಾನರು, ಮುಖಂಡರು ಸೇರಿ ರಾಮನವಮಿಯನ್ನು ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ರಮೇಶ, ಬಸವರಾಜು (ಬೋವಿ), ಮಹದೇವ ,ರಾಜಣ್ಣ, ವಿ.ಕೆ.ಬಸವರಾಜು, ಅರ್ಚಕರಾದ ಶೈಲೇಂದ್ರ, ಮಹೇಶ,ಮಾದೇಶ, ಹೊಂಬಾಳಯ್ಯ, ಮುತ್ತುರಾಜು ಸೇರಿದಂತೆ ಇತರರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.