ನಾಲ್ಕು ದಿನಗಳ ಕಾಲ ನಡೆದ ಜಾತ್ರಾ ಮಹೋತ್ಸವದಲ್ಲಿ ನಿತ್ಯ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು. ಗುರುವಾರ ವಿವಿಧ ಪೂಜೆ-ಪುನಸ್ಕಾರಗಳ ನಡೆದವು. ಶುಕ್ರವಾರ ಬೆಳಗ್ಗೆ ದೇವಸ್ಥಾನದ ಆವರಣದಲ್ಲಿ ಹೋಮ-ಹವನ ನಡೆಸಿ ದೇವರಿಗೆ ಅಭಿಷೇಕ, ಅಲಂಕಾರ, ನೈವೇದ್ಯ ಮಾಡಿ ಮಧ್ಯಾಹ್ನ 12ಗಂಟೆಗೆ ಮಹಾ ಮಂಗಳಾರತಿ ಸಲ್ಲಿಸಲಾಯಿತು. ಆ ದಿನ ಹರಕೆ ಹೊತ್ತ ಮುತ್ತೈದೆಯರು ಹೆಸರು ಬೇಳೆ ಕೋಸಂಬರಿ, ಪಾನಕ ಮಾಡಿಕೊಂಡು ಮುತ್ತೈದೆಯರಿಗೆ ಅರಿಶಿಣ, ಕುಂಕುಮ ವಿನಿಮಯ ಮಾಡಿಕೊಂಡರು. ಅದೇ ದಿನ ಸಂಜೆ ಕರಿ ಬೀದಿಯಲ್ಲಿರುವ ಕರಗದ ಮನೆಯಿಂದ ಓಲೆ ಬಂಡಿ ಎಳವಾರವನ್ನು ಮೆರವಣಿಗೆಯಲ್ಲಿ ಪ್ರಮುಖ ರಸ್ತೆಗಳ ಕರೆತರಲಾಯಿತು. ಪೂಜಾ ಕುಣಿತ, ವೀರಗಾಸೆ ಕುಣಿತ, ಬೊಂಬೆ ಕುಣಿತ, ಕರಡಿ ವೇಷಗಳು ಗಮನ ಸೆಳೆದವು.