ಶ್ರೀ ಕೃಷ್ಣರಾಜಮುಡಿ ಜಾತ್ರಾ ಮಹೋತ್ಸವ ಸಂಪನ್ನ

ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿಗೆ ಶನಿವಾರ ಸಂಜೆ ಕೃಷ್ಣರಾಜಮುಡಿ ಬ್ರಹ್ಮೋತ್ಸವದ ನಿಮಿತ್ತ ಪಟ್ಟಾಭಿಷೇಕ ಮಹೋತ್ಸವದ ಉತ್ಸವ ನೆರವೇರಿತು.
ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿಗೆ ಶನಿವಾರ ಸಂಜೆ ಕೃಷ್ಣರಾಜಮುಡಿ ಬ್ರಹ್ಮೋತ್ಸವದ ನಿಮಿತ್ತ ಪಟ್ಟಾಭಿಷೇಕ ಮಹೋತ್ಸವದ ಉತ್ಸವ ನೆರವೇರಿತು.
Published on

ಪ್ರಮುಖ ಮುಖ್ಯಾಂಶಗಳು

  • ಅವಭೃತ ತೀರ್ಥಸ್ನಾನ, ಪಟ್ಟಾಭಿಷೇಕದೊಂದಿಗೆ ತೆರೆ

ಮೇಲುಕೋಟೆ:

ಚೆಲುವನಾರಾಯಣಸ್ವಾಮಿಯ ಐತಿಹಾಸಿಕ ಶ್ರೀ ಕೃಷ್ಣರಾಜಮುಡಿ ಬ್ರಹ್ಮೋತ್ಸವ ಮಹಾವಿಷ್ಣುವಿನ ಆರಾಧನೆಗೆ ಪ್ರಶಸ್ತವಾದ ಶನಿವಾರ ರೋಹಿಣಿ ನಕ್ಷತ್ರದಂದು ಅವಭೃತ ತೀರ್ಥಸ್ನಾನ ಮತ್ತು ಪಟ್ಟಾಭಿಷೇಕ ನೆರವೇರುವುದರೊಂದಿಗೆ ಸಂಪನ್ನಗೊಂಡಿತು.

ಒಂಬತ್ತು ದಿನಗಳಿಂದ ನಡೆಯುತ್ತಿದ್ದ ಮಹಾರಾಜರ ಹೆಸರಿನ ಕೃಷ್ಣರಾಜಮುಡಿ ಜಾತ್ರಾ ಮಹೋತ್ಸವ ಲೋಕಕಲ್ಯಾಣದ ಪ್ರಾರ್ಥನೆಯೊಂದಿಗೆ ಸಮಾರೋಪಗೊಂಡಿದೆ. ಮೈಸೂರು ದೊರೆ ಮುಮ್ಮುಡಿ ಶ್ರೀ ಕೃಷ್ಣರಾಜ ಒಡೆಯರ್ ಸಮರ್ಪಿಸಿರುವ ವಜ್ರಖಚಿತ ಶ್ರೀ ಕೃಷ್ಣರಾಜಮುಡಿ ಕಿರೀಟ ಮತ್ತು ರಾಜಲಾಂಛನ ಗಂಡಬೇರುಂಡ ಪದಕ ಆ.3ರಂದು ರಾತ್ರಿ ಜರುಗಿದ ಶ್ರೀ ಕೃಷ್ಣರಾಜಮುಡಿ ಉತ್ಸವದ ನಂತರ ಪ್ರಹ್ಮಾದಪರಿಪಾಲನ, ಗಜೇಂದ್ರಮೋಕ್ಷ, ರಥೋತ್ಸವದ ಸಾಂಕೇತಿಕ ಉತ್ಸವ ಅಂತಿಮವಾಗಿ ಶನಿವಾರ ತೀರ್ಥಸ್ನಾನ, ಪಟ್ಟಾಭಿಷೇಕ ಮಹೋತ್ಸವದಲ್ಲಿ ಚೆಲುವನಾರಾಯಣಸ್ವಾಮಿಗೆ ಭವ್ಯ ಅಲಂಕಾರ ಕೈಗೊಳ್ಳಲಾಗಿತ್ತು.
ಚೆಲುವನಾರಾಯಣಸ್ವಾಮಿಗೆ ಬೆಳಗ್ಗೆ 6ಗಂಟೆಗೆ ಸಂಧಾನ ಸೇವೆ ನಂತರ ಮಧ್ಯಾಹ್ನ 1.30ರ ವೇಳೆಗೆ ಕಲ್ಯಾಣಿಯಲ್ಲಿ ತೀರ್ಥಸ್ನಾನ ಮಹೋತ್ಸವ ನೆರವೇರಿತು. ಸಂಜೆ 5ಗಂಟೆಗೆ ಕಲ್ಯಾಣಿ ತೀರದಲ್ಲಿರುವ ಪರಕಾಲಮಠದಲ್ಲಿ ಹೋಮ ಹವನಾದಿಗಳು ಶಾಸ್ತ್ರೋಕ್ತವಾಗಿ ನಡೆದು ಪಟ್ಟಾಭಿಷೇಕ ಮಹೋತ್ಸವ ನೆರವೇರಿತು. ನಂತರ ರಾಜಬೀದಿಯಲ್ಲಿ ಪಟ್ಟಾಭಿಷೇಕ ಉತ್ಸವ ಮಂಗಳವಾದ್ಯದೊಂದಿಗೆ ವೈಭವದಿಂದ ನೆರವೇರಿತು.
ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ಪಾರುಪತ್ತೇಗಾರ್ ಶ್ರೀನಿವಾಸ ನರಸಿಂಹನ್ ಗುರೂಜಿ, ಪಾರುಪತ್ತೇಗಾರ್ ಎಂ.ಎನ್ ಪಾರ್ಥಸಾರಥಿ ಸೇರಿದಂತೆ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಮೇಲುಕೋಟೆ ಪೊಲೀಸ್ ಇನ್‌ಸ್ಪೆಕ್ಟರ್ ಆನಂದಗೌಡ ನೇತೃತ್ವದಲ್ಲಿ ಜಾತ್ರಾ ಮಹೋತ್ಸವಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಬ್ರಹ್ಮೋತ್ಸವ ಮುಕ್ತಾಯವಾದ ಮರುದಿನ ಭಾನುವಾರ ಪುಷ್ಪಯಾಗ ಮಹೋತ್ಸವ ನೆರವೇರಲಿದೆ.
ಸ್ಥಾನಾಚಾರ್ಯರಿಗೆ ಮಾಲೆ ಮರ್ಯಾದೆ
ಜಾತ್ರಾಮಹೋತ್ಸವ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುವ ಸ್ಥಾನಾಚಾರ್ಯರಾದ ಸ್ಥಾನೀಕರುಗಳಿಗೆ ದೇವಾಲಯದ ಪಾತಾಳಾಂಕಣದಲ್ಲಿ ಪದ್ಧತಿಯಂತೆ ಮಾಲೆ, ಮರ್ಯಾದೆಗಳು ನಡೆದವು. ಸ್ಥಾನಾಚಾರ್ಯ ಶ್ರೀನಿವಾಸ ನರಸಿಂಹನ್ ಗುರೂಜಿ ಕರಗಂ ರಾಮಪ್ರಿಯ ಹಾಗೂ ಮೂರನೇ ಸ್ಥಾನೀಕರಿಗೆ ಈ ವರ್ಷ ಮಾಲೆ ಮರ್ಯಾದೆಗಳು ನೆರವೇರಿದವು. ನಂತರ ಪಡಿಮಾಲೆ ಪೂರ್ಣಾಹುತಿ ನೆರವೇರಿತು. ಇದರೊಂದಿಗೆ ಕೃಷ್ಣರಾಜಮುಡಿ ಜಾತ್ರಾಮಹೋತ್ಸವ ಮುಕ್ತಾಯವಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net