ಕಿಕ್ಕೇರಿಯಲ್ಲಿ ವಸಂತನ ಹಬ್ಬ ಆಚರಣೆ

ಕಿಕ್ಕೇರಿಯಲ್ಲಿಶುಕ್ರವಾರ ಜರುಗಿದಕಿಕ್ಕೇರಮ್ಮ ದೇವರ ವಸಂತನ ಹಬ್ಬದಲ್ಲಿ ಗುಡ್ಡಪ್ಪಧಾರಿ ಮರದಲ್ಲಿ ನಿರ್ಮಿಸಿದ ಪುರುಷ ಗುಪ್ತಾಂಗ ಕಟ್ಟಿ ಬರುತ್ತಿರುವುದು.
ಕಿಕ್ಕೇರಿಯಲ್ಲಿಶುಕ್ರವಾರ ಜರುಗಿದಕಿಕ್ಕೇರಮ್ಮ ದೇವರ ವಸಂತನ ಹಬ್ಬದಲ್ಲಿ ಗುಡ್ಡಪ್ಪಧಾರಿ ಮರದಲ್ಲಿ ನಿರ್ಮಿಸಿದ ಪುರುಷ ಗುಪ್ತಾಂಗ ಕಟ್ಟಿ ಬರುತ್ತಿರುವುದು.
Published on
ಕಿಕ್ಕೇರಿ : ಮಡಿಕೇರಿಯ ಬುಂಡೆ ಹಬ್ಬದ ತದ್ರೂಪದಂತೆ ಬೈದಾಡುವ ಬೈಗುಳ ಹಬ್ಬವಾದ ಕಿಕ್ಕೇರಮ್ಮನವರ ವಸಂತನ ಹಬ್ಬ ಸಂಭ್ರಮ ಸಡಗರದಿಂದ ಶುಕ್ರವಾರ ಜರುಗಿತು.
ವಸಂತನ ಹಬ್ಬ(ಬೈಗುಳ ಹಬ್ಬ) ಕಣ್ತುಂಬಿಕೊಳ್ಳಲು ದಾರಿಯುದ್ದಕ್ಕೂ ಜನವೋ ಜನ. ಯುವ ಜೋಡಿಗಳು ಹಬ್ಬದ ವಿಶೇಷತೆ ತಿಳಿದುಕೊಳ್ಳಲು ಕುತೂಹಲದಿಂದ ಕಾದು ಕುಳಿತಿದ್ದರು.
ಕಿಕ್ಕೇರಮ್ಮ ಗುಡಿಯಿಂದ ಆರಂಭವಾದ ವಸಂತನ ಹಬ್ಬಕ್ಕೆ ರಂಗೇನಹಳ್ಳಿಯ ಕೊಂತಪ್ಪ ಗುಡ್ಡಧಾರಿ ಹಾಗೂ ಪರಿವಾರದವರು ಮುಖ್ಯ ಆಕರ್ಷಣೆಯಾಗಿದ್ದರು. ಕೊಂತಧಾರಿ ಗುಡ್ಡಪ್ಪ ತಲೆಗೆ ರಂಗಿನ ಪೇಟ, ಹೊದೆಯಲು ಸುಂದರ ಶಾಲು, ಕಾಲಿಗೆ ಗೆಜ್ಜೆ ಕಟ್ಟಿ ಮರದಲ್ಲಿ ಮಾಡಿದ ಪುರುಷ ಗುಪ್ತಾಂಗವನ್ನು ದೇವಿಯ ಮುಂದೆ ಪೂಜೆ ಮಾಡಿ ಸೊಂಟಕ್ಕೆ ಕಟ್ಟಿಕೊಂಡರು. ಸಹ ಗುಡ್ಡಪ್ಪರು ಗುಡ್ಡಪ್ಪನ ಕುಣಿತಕ್ಕೆ ಚಕ್ರವಾದ್ಯ ಮೇಳವಾದರು. ಆರಂಭದಲ್ಲಿ ದೇವಿಯ ಗುಡಿ ಮುಂದೆ ಕೊಂತಪ್ಪ ಗುಡ್ಡಪ್ಪ ಕುಣಿಯುತ್ತ ಡುಮ್ಮಿ ಸಾಲಿರೆನ್ನಿರೇ ಎಂದು ಕೊಂತಪ್ಪನನ್ನು ತೋರಿಸಿ ಎಗರಿ ಕುಣಿದರು. ಇದೇ ರೀತಿ ದೇವಿಯ ಮೆರವಣಿಗೆಯ ಮುಂದೆ ಸಾಗುತ್ತ ಹೊಸಬೀದಿ, ಅಂಗಡಿಬೀದಿ, ಕೋಟೆ ಆಂಜನೇಯ ಬೀದಿ, ಕೆ.ಎಸ್. ನರಸಿಂಹಸ್ವಾಮಿ ಬೀದಿಗಳಲ್ಲಿ ನರ್ತಿಸಿದರು.
ಕೊಂತಪ್ಪಧಾರಿ ಹಸಿರು ಶಾಲು ಹೊದ್ದುಕೊಂಡು ಮರೆಮಾಚಿಕೊಂಡಿದ್ದ ಕೊಂತಪ್ಪನನ್ನು ಅಲ್ಲಲ್ಲಿ ತೋರಿಸುತ್ತ ಚಕ್ರವಾದ್ಯಕ್ಕೆ ತಕ್ಕಂತೆ ಕುಣಿಯುತ್ತಿದ್ದನು. ಯುವಕರ ಗುಂಪು ಈ ನೋಟವನ್ನು ವೀಕ್ಷಿಸಲು ಮುಗಿಬಿದ್ದರು. ಹರಕೆ ಹೊತ್ತ ಹಲವು ಭಕ್ತರು ದೇವರು ಸಾಗುವ ಬೀದಿಯಲ್ಲಿ ಮಲಗಿದರು. ದೇವಿಯ ಉತ್ಸವ ಭಕ್ತರ ಮೇಲೆ ಸಾಗಿತು. ಅಮ್ಮನವರ ಮೆರವಣಿಗೆ ಪಟ್ಟಣದ ಸುತ್ತ ಸಾಗಿ ಜ್ಯೋತಿಪಣದ ಬಯಲು ಲಕ್ಷ್ಮೀದೇವಿ ಗುಡಿ ಬಳಿ ಸಾಗಿತು. ದೇವಿಗೆ ಇಲ್ಲಿನ ಸದ್ಭಕ್ತರು ಮಹಾಮಂಗಳಾರತಿ ಎತ್ತಿದರು. ದಾರಿಯುದ್ದಕ್ಕೂ ರಾಮನವಮಿ ಪ್ರಯುಕ್ತ ನೀರು ಮಜ್ಜಿಗೆ, ಪಾನಕ, ಕೋಸುಂಬರಿಯನ್ನು ಮಹಾಪ್ರಸಾದವಾಗಿ ವಿತರಿಸಿದರು.
ಹರಕೆ ಹೊತ್ತು ಮಲಗಿದ್ದ ಭಕ್ತರ ಮೇಲೆ ದೇವಿ ಉತ್ಸವ ಸಾಗಿ, ಜನಾರ್ದನ ಬೀದಿಯ ಮಹಾಲಕ್ಷ್ಮೀಗುಡಿ, ಸೊಳ್ಳೇಪುರ ಬಳಿಯ ಗಂಗೆ(ಗೌರಿ) ಕಡಕ್ಕೆ ಸಾಗಿತು. ಇಲ್ಲಿಂದ ಭಕ್ತರ ಪೂಜೆ ಸ್ವೀಕರಿಸಿ, ದೇವಿ ಉತ್ಸವ ಲಕ್ಷ್ಮೀಪುರ ಗ್ರಾಮಕ್ಕೆ ತೆರಳಿತು. ಉಪವಾಸವಿದ್ದ ಭಕ್ತರು ತಮ್ಮ ಮನೆಯ ಬಳಿ ದೇವಿಯನ್ನು ಬರಮಾಡಿಕೊಂಡು ಭಕ್ತಿಯಿಂದ ಪೂಜಿಸಿದರು.
ಲಕ್ಷ್ಮೀಪುರ ಗ್ರಾಮದ ದೇವಿಯ ಒಕ್ಕಲಿನ ಬೂನಾಸಿ, ಕೆಂಚಮ್ಮ, ಮಾರಮ್ಮ, ದೊಡ್ಡಹಟ್ಟಿ ವಠಾರದ ಮುಖಂಡರು, ಸುತ್ತಮುತ್ತಲಿನ ಗ್ರಾಮಸ್ತರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net