ನಾಯಕತ್ವದ ಗುಣ ಬೆಳೆಸಲು ಕ್ರೀಡೆ ಸಹಕಾರಿ

ಮದ್ದೂರು ತಾಲೂಕಿನ ಶಿವಾರಗುಡ್ಡ ಗ್ರಾಮದ ಜವಾಹರ್ ನವೋದಯ ವಿದ್ಯಾಲಯದಲ್ಲಿ ಆಯೋಜಿಸಿದ್ದ 37ನೇ ವರ್ಷದ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಕ್ರೀಡೆಯಲ್ಲಿ ವಿಜೇತರಾದವರಿಗೆ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಬಹುಮಾನ ವಿತರಿಸಿದರು. ವಿ.ಪ್ರಸಾದ್, ಎಂ.ಸತ್ಯಲಿಂಗಂ, ಎಂ.ಮಹದೇವು, ವಿನೋದ್ ಮಾದೇಗೌಡ,  ಶಿವಕುಮಾರ್ ಇದ್ದರು.
ಮದ್ದೂರು ತಾಲೂಕಿನ ಶಿವಾರಗುಡ್ಡ ಗ್ರಾಮದ ಜವಾಹರ್ ನವೋದಯ ವಿದ್ಯಾಲಯದಲ್ಲಿ ಆಯೋಜಿಸಿದ್ದ 37ನೇ ವರ್ಷದ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಕ್ರೀಡೆಯಲ್ಲಿ ವಿಜೇತರಾದವರಿಗೆ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಬಹುಮಾನ ವಿತರಿಸಿದರು. ವಿ.ಪ್ರಸಾದ್, ಎಂ.ಸತ್ಯಲಿಂಗಂ, ಎಂ.ಮಹದೇವು, ವಿನೋದ್ ಮಾದೇಗೌಡ, ಶಿವಕುಮಾರ್ ಇದ್ದರು.
Published on
ಮದ್ದೂರು: ತಾಲೂಕಿನ ಶಿವಾರಗುಡ್ಡ ಗ್ರಾಮದ ಜವಾಹರ್ ನವೋದಯ ವಿದ್ಯಾಲಯದಲ್ಲಿ ಆಯೋಜಿಸಿದ್ದ 37ನೇ ವರ್ಷದ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ವಿಜೇತ ಕ್ರೀಡಾಪಟುಗಳಿಗೆ ಶನಿವಾರ ಬಹುಮಾನ ವಿತರಿಸಿ ಅಭಿನಂದಿಸಿದರು.
ಈ ಕ್ರೀಡಾಕೂಟದಲ್ಲಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬೆಂಗಳೂರು ದಕ್ಷಿಣ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು ಹಾಗೂ ತುಮಕೂರು ಜಿಲ್ಲೆಗಳ ಜವಾಹರ್ ನವೋದಯ ವಿದ್ಯಾಲಯಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದರು.
ಬಹುಮಾನ ವಿತರಿಸಿ ಮಾತನಾಡಿದ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಎರಡನ್ನೂ ಸಮಾನ ಮನೋಭಾವದಿಂದ ಸ್ವೀಕರಿಸುವ ಗುಣವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಕ್ರೀಡೆ ಕೇವಲ ದೈಹಿಕ ಆರೋಗ್ಯವನ್ನಷ್ಟೇ ಅಲ್ಲ, ಶಿಸ್ತು, ಆತ್ಮವಿಶ್ವಾಸ, ನಾಯಕತ್ವ ಮನೋಭಾವ ಬೆಳೆಸುವ ಅತ್ಯುತ್ತಮ ಸಾಧನವಾಗಿದೆ. ಇಂದಿನ ದಿನಗಳಲ್ಲಿ ಕ್ರೀಡಾ ಕ್ಷೇತ್ರದಲ್ಲಿಯೂ ಉತ್ತಮ ಅವಕಾಶಗಳು ಲಭ್ಯವಿದ್ದು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಉತ್ತಮ ಉದ್ಯೋಗ ಮತ್ತು ಗೌರವ ಗಳಿಸಬಹುದು ಎಂದು ಹೇಳಿದರು.
ವಿದ್ಯಾರ್ಥಿಗಳು ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರ, ಶಿಸ್ತು ಹಾಗೂ ಸಾಮಾಜಿಕ ಹೊಣೆಗಾರಿಕೆ ಮೈಗೂಡಿಸಿಕೊಳ್ಳಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚಿನ ಅಂಕಗಳನ್ನು ಪಡೆದರೂ ಎಲ್ಲರಿಗೂ ಉದ್ಯೋಗ ದೊರೆಯುವುದು ಕಷ್ಟವಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಕೌಶಲಗಳನ್ನು ಬೆಳೆಸಿಕೊಂಡು ಸ್ವಯಂ ಉದ್ಯೋಗದತ್ತ ಗಮನ ಹರಿಸಬೇಕು. ಆತ್ಮವಿಶ್ವಾಸ ಮತ್ತು ಆತ್ಮಸ್ಥೈರ್ಯ ಜೀವನದ ಯಶಸ್ಸಿಗೆ ಅತ್ಯಗತ್ಯವಾಗಿದ್ದು, ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಬಲ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಾಂಶುಪಾಲರಾದ ವಿ.ಪ್ರಸಾದ್ ವಹಿಸಿದ್ದರು. ಶಾಲೆಯ ಉಪಪ್ರಾಂಶುಪಾಲ ಎಂ.ಸತ್ಯಲಿಂಗಂ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಂ.ಮಹದೇವು, ರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟು ವಿನೋದ್ ಮಾದೇಗೌಡ, ದೈಹಿಕ ಶಿಕ್ಷಣ ಶಿಕ್ಷಕ ಶಿವಕುಮಾರ್, ಸಂಗೀತ ಶಿಕ್ಷಕರು, ಪಿಟಿಸಿ ಸದಸ್ಯರಾದ ಅಣ್ಣೂರು ಸತೀಶ್ ಹಾಗೂ ಅನುಪಮ, ಶಿಕ್ಷಕರಾದ ಬಸವರಾಜು ಬನ್ನೂರು, ಕಚೇರಿ ಅಧೀಕ್ಷಕ ಬಿ.ಕೆ.ಗಣೇಶ್ ಸೇರಿದಂತೆ ಶಾಲೆಯ ಶಿಕ್ಷಕರು, ಸಿಬ್ಬಂದಿ ಹಾಗೂ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಇದ್ದರು.
ವಿಜೇತರ ವಿವರ: ಕ್ರೀಡಾಕೂಟದಲ್ಲಿ ಮಂಡ್ಯ ಜವಾಹರ್ ನವೋದಯ ವಿದ್ಯಾಲಯ ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ಸಮಗ್ರ ಚಾಂಪಿಯನ್‌ಶಿಪ್ ಹಾಗೂ ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿತು. ತುಮಕೂರು ಜವಾಹರ್ ನವೋದಯ ವಿದ್ಯಾಲಯ ತಂಡವು ದ್ವಿತೀಯ ಸ್ಥಾನ ಗಳಿಸಿತು.
ಪಥ ಸಂಚಲನ ಸ್ಪರ್ಧೆಯಲ್ಲಿ ಹಾಸನ ಜವಾಹರ್ ನವೋದಯ ವಿದ್ಯಾಲಯ ತಂಡ ಪ್ರಥಮ ಸ್ಥಾನ ಪಡೆದರೆ, ತುಮಕೂರು ಜವಾಹರ್ ನವೋದಯ ವಿದ್ಯಾಲಯ ತಂಡ ದ್ವಿತೀಯ ಸ್ಥಾನ ಪಡೆದು ಗಮನ ಸೆಳೆಯಿತು.
ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಎಲ್ಲ ವಿದ್ಯಾರ್ಥಿಗಳು ಹಾಗೂ ವಿಜೇತ ಕ್ರೀಡಾಪಟುಗಳಿಗೆ ಗಣ್ಯರು ಅಭಿನಂದನೆ ಸಲ್ಲಿಸಿ, ಮುಂದಿನ ಹಂತದ ಸ್ಪರ್ಧೆಗಳಲ್ಲಿಯೂ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net