24ರಂದು ವಿಶೇಷ ಲೋಕ ಅದಾಲತ್

ನಾಗಮಂಗಲದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಧಿಕಾರಿಗಳು ಹಾಗೂ ವಕೀಲರು ಪಾಲ್ಗೊಂಡಿದ್ದರು. ಫೆಲಿಕ್ಸ್ ಅಲ್ಫೋನ್ಸ್ ಅಂಥೋಣಿ ಇದ್ದರು.
ನಾಗಮಂಗಲದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಧಿಕಾರಿಗಳು ಹಾಗೂ ವಕೀಲರು ಪಾಲ್ಗೊಂಡಿದ್ದರು. ಫೆಲಿಕ್ಸ್ ಅಲ್ಫೋನ್ಸ್ ಅಂಥೋಣಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾರ್ವಜನಿಕ ಹಿತದೃಷ್ಟಿಯಿಂದ ರೈತರ ಜಮೀನನ್ನು ಸ್ವಾಧೀನ
  • ಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸುವ ಉದ್ದೇಶ
  • ನ್ಯಾಯಾಲಯದ ನಿರ್ದೇಶನದ ಮೇರೆ
ನಾಗಮಂಗಲ: ಸಾರ್ವಜನಿಕ ಹಿತದೃಷ್ಟಿಯಿಂದ ರೈತರ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸುವ ಉದ್ದೇಶದಿಂದ ನ್ಯಾಯಾಲಯದ ನಿರ್ದೇಶನದ ಮೇರೆಗೆ ಜ.24ರಂದು ವಿಶೇಷ ಲೋಕ ಅದಾಲತ್ ಆಯೋಜಿಸಲಾಗಿದೆ ಎಂದು ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಫೆಲಿಕ್ಸ್ ಅಲ್ಫೋನ್ಸ್ ಅಂಥೋಣಿ ತಿಳಿಸಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಭೂ ಸ್ವಾಧೀನ ಪ್ರಕರಣಗಳ ಸಂಬಂಧ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ನ್ಯಾಯವಾದಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರಿಗಳ ನಿರ್ಲಕ್ಷೃದಿಂದ ರೈತರಿಗೆ ಮಾತ್ರವಲ್ಲದೆ ಸರ್ಕಾರಕ್ಕೂ ಹೊರೆಯಾಗಲಿದೆ.
ಸ್ವಾಧೀನಪಡಿಸಿಕೊಳ್ಳಲಾಗಿರುವ ಜಮೀನಿಗೆ ಪರಿಹಾರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಒಂದು ಸಾವಿರ ಕೋಟಿ ರೂ.ಗಳನ್ನು ಹಣಕಾಸು ಇಲಾಖೆಗೆ ಜಮಾ ಮಾಡಿವೆ. ಆದರೆ ಅಧಿಕಾರಿಗಳ ಧೋರಣೆಯಿಂದ ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ. ಸ್ವಾಧೀನಪಡಿಸಿಕೊಳ್ಳುವಾಗ ನಿಗದಿಪಡಿಸಲಾಗಿದ್ದ ಮೊತ್ತದ ಹಣವನ್ನು ಒಂದು ವರ್ಷದೊಳಗೆ ನ್ಯಾಯಾಲಯದ ಖಾತೆಗೆ ಜಮಾ ಮಾಡಿದರೆ ಉಭಯತ್ರರಿಗೂ ಸಮಸ್ಯೆಯಾಗುವುದಿಲ್ಲ. ಭೂಮಿ ಕಳೆದುಕೊಂಡ ರೈತರ ಪರವಾಗಿ ನ್ಯಾಯಾಲಯದಲ್ಲಿ ಆಗುವ ಆದೇಶದಿಂದ ಕಚೇರಿಗಳ ಪೀಠೋಪಕರಣ, ವಾಹನ ಅಥವಾ ಕಂಪ್ಯೂಟರ್ ವಶಪಡಿಸಿಕೊಳ್ಳುವುದರ ಜತೆಗೆ ನಿಮ್ಮ ಮೇಲೆ ಕಾನೂನಾತ್ಮಕ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಮಸ್ಯೆಗೆ ಅಧಿಕಾರಿಗಳೇ ಹೊಣೆ: ಕಾವೇರಿ ನೀರಾವರಿ ನಿಗಮ, ಪುರಸಭೆ ಅಥವಾ ಪಟ್ಟಣ ಪಂಚಾಯಿತಿಯಲ್ಲದೆ ರಾಷ್ಟ್ರೀಯ ಹೆದ್ದಾರಿ ಮತ್ತು ರೈಲ್ವೆಯಂತಹ ಕೇಂದ್ರ ಸರ್ಕಾರದ ಇಲಾಖೆಗಳ ಮೇಲೆ ಆಗುವ ವ್ಯತಿರಿಕ್ತ ಪರಿಣಾಮಗಳಿಗೆ ಇಲಾಖೆಯ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು. ರೈತರು ಕೂಲಿ ಮಾಡಿ ಜೀವನ ಸಾಗಿಸುವ ದುಸ್ಥಿತಿಗೆ ನೀವು ಕಾರಣರಾಗಬೇಡಿ. ಸರ್ಕಾರ ನಿಗದಿಪಡಿಸಲಾಗಿರುವ ಹಣವನ್ನು ಮೊದಲು ನ್ಯಾಯಾಲಯಕ್ಕೆ ಠೇವಣಿ ಮಾಡುವ ಮೂಲಕ ರೈತರ ಹಿತ ಕಾಯುವ ಕೆಲಸ ಮಾಡಿ ಎಂದು ಸೂಚನೆ ನೀಡಿದರು.
ಉದ್ದೇಶ ಸಾಕಾರವಾಗಲಿ: ಸಾಧಕ-ಬಾಧಕಗಳ ಮಾಹಿತಿ ಪಡೆದಿರುವ ನ್ಯಾಯಾಲಯ ಇಂತಹ ಪ್ರಕರಣಗಳ ಇತ್ಯಾರ್ಥಕ್ಕೆ ಜ.24 ರ ಮಧ್ಯಾಹ್ನ 2.30 ರಿಂದ ಸಂಜೆ 5.30 ರವರೆಗೆ ವಿಶೇಷ ಲೋಕ ಅದಾಲತ್ ನಡೆಸುವಂತೆ ಆದೇಶಿಸಿದೆ. ನಮ್ಮ ವ್ಯಾಪ್ತಿಯಲ್ಲಿರುವ ಪ್ರಕರಣಗಳು ಶೇ.100 ರಷ್ಟು ಇತ್ಯಾರ್ಥವಾಗಬೇಕಿದೆ. ಇಂದಿನಿಂದಲೇ ತಮ್ಮ ತಮ್ಮ ಇಲಾಖೆಗಳಲ್ಲಿ ಕಾರ್ಯಪ್ರವೃತ್ತರಾಗುವ ಮೂಲಕ ಅದಾಲತ್‌ನ ಉದ್ದೇಶ ಸಾಕಾರವಾಗಲು ಸಹಕರಿಸಬೇಕಿದೆ ಎಂದರು.
ಸಭೆಯಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ಹಾಗೂ ವಿಶೇಷ ಭೂ ಸ್ವಾಧೀನಾಧಿಕಾರಿ ಶ್ರೀನಿವಾಸ್, ನ್ಯಾಯಾಧೀಶರಾದ ನರಸಿಂಹಮೂರ್ತಿ, ಶಿವರಾಜು ಹಾಗೂ ಸಿದ್ದಾಪ್ಪಾಜಿ, ವಕೀಲರ ಸಂಘದ ಅಧ್ಯಕ್ಷ ಮಹದೇವ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net