ಮ್ಯಾಪಿಂಗ್ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

ಮಂಡ್ಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿದರು.
ಮಂಡ್ಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯಲ್ಲಿ ಮ್ಯಾಪಿಂಗ್ ಪ್ರಕ್ರಿಯೆ ಈಗಾಗಲೇ ಶೇ.96.59ರಷ್ಟು ಪ್ರಗತಿ
  • ನಗರದಲ್ಲಿ ಅಧಿಕಾರಿಗಳೊಂದಿಗೆ ಸಭೆ
ಮಂಡ್ಯ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯಾದ್ಯಂತ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮ್ಯಾಪಿಂಗ್ ಪ್ರಕ್ರಿಯೆ ಈಗಾಗಲೇ ಶೇ.96.59ರಷ್ಟು ಪ್ರಗತಿಯಾಗಿದೆ. ಅದರಂತೆ ಉಳಿದ ಮ್ಯಾಪಿಂಗ್ ಅನ್ನು ಶೀಘ್ರವೇ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ಮ್ಯಾಪಿಂಗ್ ಪ್ರಗತಿ ಹಾಗೂ ಗ್ರಾಮ ಪಂಚಾಯಿತಿ ಸಾರ್ವಜನಿಕ ಚುನಾವಣೆಯ ಮೀಸಲಾತಿ ಕುರಿತು ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೂತ್‌ಮಟ್ಟದ ಅಧಿಕಾರಿಗಳು ಮನೆ ಮನೆಗೆ ತೆರಳಿ ಸಂಗ್ರಹಿಸುವ ಮಾಹಿತಿ ದೋಷರಹಿತವಾಗಿರಬೇಕು. ಕರ್ತವ್ಯದಲ್ಲಿ ಲೋಪ ಎಸಗುವ ಅಥವಾ ಗೈರಾಗುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈಗಾಗಲೇ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೂತ್‌ಮಟ್ಟದ ಅಧಿಕಾರಿಗಳಿಗೆ ಬಗ್ಗೆ ತರಬೇತಿ ನೀಡಲಾಗುತ್ತದೆ. ಬೂತ್‌ಮಟ್ಟದ ಅಧಿಕಾರಿಗಳು ತರಬೇತಿಯಲ್ಲಿ ಮಾಡುವ ಕೆಲಸ ಕಾರ್ಯಗಳಿಗೆ ಮಾಹಿತಿ ನೀಡಬಹುದು. ಯಾವುದೇ ಒಬ್ಬ ಅರ್ಹ ಮತದಾರರು ಮತಪಟ್ಟಿಯಿಂದ ಹೊರಗುಳಿಯಬಾರದು. ಅನರ್ಹರ ಹೆಸರು ಮತಪಟ್ಟಿಯಲ್ಲಿ ಸೇರಿರಬಾರದು ಎಂಬುದು ಎಸ್‌ಐಆರ್ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
ಬೂತ್‌ಮಟ್ಟದ ಅಧಿಕಾರಿಗಳು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನೀಡಿದ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಬೇಕು. ಅಧಿಕಾರಿಗಳು ಭರ್ತಿ ಮಾಡಿದ ನಮೂನೆಯ ಒಂದು ಪ್ರತಿಗೆ ಸ್ವೀಕೃತಿ ನೀಡುತ್ತಾರೆ. ಜತೆಗೆ ಮತದಾರರು ಭರ್ತಿ ಮಾಡಿದ ನಮೂನೆಯನ್ನು ಆನ್‌ಲೈನ್ ಮೂಲಕವೂ ಅಪ್‌ಲೋಡ್ ಮಾಡಬಹುದು ಎಂದು ವಿವರಿಸಿದರು.
ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಮಾತನಾಡಿ, ಬೂತ್‌ಮಟ್ಟದ ಅಧಿಕಾರಿಗಳು ಪ್ರತಿ ಮನೆಗೆ ಭೇಟಿ ನೀಡಿ ಪೂರ್ವ ಮಾಹಿತಿಯುಳ್ಳ ಗಣತಿ ನಮೂನೆಯನ್ನು ದ್ವಿಪ್ರತಿಯಲ್ಲಿ ವಿತರಿಸಿ. ಅವುಗಳನ್ನು ಭರ್ತಿ ಮಾಡಲು ಮಾರ್ಗದರ್ಶನ ನೀಡಬೇಕು. ಭರ್ತಿ ಮಾಡಿದ ನಮೂನೆಯನ್ನು ಮತದಾರರಿಂದ ಪಡೆದುಕೊಳ್ಳಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ(ಅಭಿವೃದ್ಧಿ) ಪಿ.ಲಕ್ಷ್ಮೀ, ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ಹಾಗೂ ತಹಸೀಲ್ದಾರ್‌ಗಳು ಹಾಜರಿದ್ದರು.

ಎಸ್‌ಐಆರ್ ಉದ್ದೇಶ ಮನವರಿಕೆ ಮಾಡಿ
ಜನಸಾಮಾನ್ಯರಲ್ಲಿ ಎಸ್‌ಐಆರ್ ಬಗ್ಗೆ ತಪ್ಪು ಭಾವನೆ ಇದೆ. ಅವರಿಗೆ ಎಸ್‌ಐಆರ್ ಉದ್ದೇಶವನ್ನು ಮನವರಿಕೆ ಮಾಡಿಕೊಟ್ಟು ಅವರಲ್ಲಿರುವ ತಪ್ಪು ಭಾವನೆಯನ್ನು ಹೋಗಲಾಡಿಸಬೇಕು ಎಂದು ತಿಳಿಸಿದ ಜಿಲ್ಲಾಧಿಕಾರಿಗಳು ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ವ್ಯವಸ್ಥಿತವಾಗಿ ಪೂರ್ಣಗೊಳಿಸಲು ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ವಿಶೇಷ ಪರಿಷ್ಕರಣೆಯು ಕರಡು ಮತದಾರರ ಪಟ್ಟಿಯನ್ನು ಪರಿಶೀಲಿಸಿ. ಮೃತರು ಹಾಗೂ ಸ್ಥಳಾಂತರಗೊಂಡವರ ಹೆಸರನ್ನು ತೆಗೆದುಹಾಕಲು ಮತ್ತು ಅರ್ಹರನ್ನು ಸೇರಿಸಲು ಕೈಗೊಳ್ಳಲಾಗಿರುವ ಪ್ರಕ್ರಿಯೆಯಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net