ಫಿಟ್ ಇಂಡಿಯಾ ಜಾಗೃತಿ, ತ್ಯಾಜ್ಯಕ್ಕೆ ಮುಕ್ತಿ: ಜಿಪಂ ಸಿಇಒ ಕೆ.ಆರ್.ನಂದಿನಿ ನೇತೃತ್ವದಲ್ಲಿ ಅಭಿಯಾನ

ಮಂಡ್ಯ ತಾಲೂಕಿನ ಕಾಸರವಾಡಿ ಗ್ರಾಮದ ಶ್ರೀ ಮಹದೇಶ್ವರ ದೇವಾಲಯದ ಸಮೀಪದ ಜಾಗವನ್ನು ಸ್ವಚ್ಛಗೊಳಿಸಿ ಜಾಗೃತಿ ಮೂಡಿಸಲಾಯಿತು.
ಮಂಡ್ಯ ತಾಲೂಕಿನ ಕಾಸರವಾಡಿ ಗ್ರಾಮದ ಶ್ರೀ ಮಹದೇಶ್ವರ ದೇವಾಲಯದ ಸಮೀಪದ ಜಾಗವನ್ನು ಸ್ವಚ್ಛಗೊಳಿಸಿ ಜಾಗೃತಿ ಮೂಡಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಕೈಜೋಡಿಸಿದ ನೂರಾರು ಜನ
  • ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯಡಿ ಆಯೋಜನೆ
ಮಂಡ್ಯ: ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯಡಿ ಫಿಟ್ ಇಂಡಿಯಾ ಹಾಗೂ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾ ಪಂಚಾಯಿತಿಯಿಂದ ವಿಶೇಷ ಅಭಿಯಾನ ಆಯೋಜಿಸಲಾಗಿತ್ತು. ಸಿಇಒ ಕೆ.ಆರ್.ನಂದಿನಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮಕ್ಕೆ ನೂರಾರು ಜನರು ಸಾಥ್ ನೀಡಿದರು.
ಸೈಕಲ್ ಜಾಥಾ ಹಾಗೂ ವ್ಯಾಯಾಮದ ಮೂಲಕ ಜನರಲ್ಲಿ ಸದೃಢ ಆರೋಗ್ಯದ ಬಗ್ಗೆ ಕಾಳಜಿ ಮೂಡಿಸಿದರೆ, ಇನ್ನೊಂದೆಡೆ ತ್ಯಾಜ್ಯದಿಂದಲೇ ತುಂಬಿ ಹೋಗಿದ್ದ ಸ್ಥಳವನ್ನು ಸ್ವಚ್ಛತಾ ರೈಡ್‌ನೊಂದಿಗೆ ಶುಚಿಗೊಳಿಸುವ ಮೂಲಕ ಪರಿಸರದ ಜಾಗೃತಿ ಮೂಡಿಸಲಾಯಿತು. ಫಿಟ್ ಇಂಡಿಯಾ ಆಂದೋಲನ ಹಾಗೂ ವಿಶ್ವ ಬೈಸಿಕಲ್ ದಿನದ ಅಂಗವಾಗಿ ವಿಶೇಷ ಅಭಿಯಾನ ನಡೆಯಿತು. ಬಹುಮುಖ್ಯವಾಗಿ ಆರೋಗ್ಯಕರ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಫಿಟ್‌ನೆಸ್ ಅನ್ನು ದೈನಂದಿನ ಜೀವನದ ಭಾಗವಾಗಿಸುವುದು ಹಾಗೂ ತಮ್ಮ ಸುತ್ತಮುತ್ತಲಿನ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಜಾಗೃತಿ ಮೂಡಿಸುವ ಉದ್ದೇಶವಾಗಿತ್ತು.
ಫಿಟ್ ಇಂಡಿಯಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಂಜಾನೆಯೇ ನೂರಾರೂ ಜನರು ಬೈಸಿಕಲ್‌ನೊಂದಿಗೆ ಜಿಪಂ ಕಚೇರಿ ಎದುರು ಹಾಜರಾಗಿದ್ದರು. ಈ ಪೈಕಿ ಮಕ್ಕಳ ಸಂಖ್ಯೆಯೂ ಹೆಚ್ಚಿತ್ತು. ಸಿಇಒ ಕೆ.ಆರ್.ನಂದಿನಿ ಅವರು ಸೈಕಲ್ ಜಾಥಾಗೆ ಚಾಲನೆ ನೀಡುವ ಜತೆಗೆ ಮುಂದಾಳತ್ವ ವಹಿಸಿದ್ದರು. ಜಿ.ಪಂ ಕಚೇರಿಯಿಂದ ಹೊರಟ ಜಾಥಾ ಜಿಲ್ಲಾಧಿಕಾರಿ ಕಚೇರಿ, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಾಗಿ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಮಾನವ ಸರಪಳಿ ‘ಸದೃಢ ಭಾರತ’ದ ಬಗ್ಗೆ ಜಾಗೃತಿ ಮೂಡಿಸಲಾಯಿತು. ನಂತರ ಮಹಾವೀರ ವೃತ್ತ, ವಿ.ವಿ ರಸ್ತೆ, ಹೊಸಹಳ್ಳಿ ವೃತ್ತ, ಹೊಸಹಳ್ಳಿ-ಕಾರಸವಾಡಿ ರಸ್ತೆಯಲ್ಲಿ ಸಾಗಿ ಕಾರಸವಾಡಿ ಹೊರವಲಯದ ಶ್ರೀ ಮಹದೇಶ್ವರ ದೇವಾಲಯ ಬಳಿ ಅಂತ್ಯಗೊಂಡಿತು.
ಎಎಸ್ಪಿ ಸಿ.ಇ.ತಿಮ್ಮಯ್ಯ, ಜಿ.ಪಂ ಉಪ ಕಾರ್ಯದರ್ಶಿ ಡಾ.ಶಿವಲಿಂಗಯ್ಯ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕಿ ಕೆ.ಎನ್.ರೂಪಶ್ರೀ, ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ಪುಷ್ಪಾ, ಜಿ.ಪಂ ಯೋಜನಾ ನಿರ್ದೇಶಕ ಸುಂದರ್‌ರಾಜ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶ್ರೀನಿವಾಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಮಂಜುಳಾ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕತರಾದ ಬಿ.ಎಸ್.ಅನುಪಮಾ, ಕಾರಸವಾಡಿ ಮಹದೇವು ಇತರರಿದ್ದರು.

ಹೊಸ ರೂಪ ಕೊಟ್ಟ ಸ್ವಚ್ಛತಾ ರೈಡ್
ಜನರಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿಸುವುದು ಪ್ರಮುಖ ಉದ್ದೇಶವಾಗಿತ್ತು. ಅದರಂತೆ ನಡೆದ ಸ್ವಚ್ಛತಾ ರೈಡ್ ಮೂಲಕ ಕಾರಸವಾಡಿ ಹೊರವಲಯದ ಶ್ರೀ ಮಹದೇಶ್ವರ ದೇವಾಲಯ ಹಿಂಭಾಗದ ಸರ್ಕಾರಿ ಜಾಗಕ್ಕೆ ಹೊಸ ರೂಪ ಕೊಡಲಾಯಿತು. ಹಿಂದೆ ಈ ಜಾಗದಲ್ಲಿ ತ್ಯಾಜ್ಯ ಸುರಿಯಲಾಗುತ್ತಿತ್ತು. ಪರಿಣಾಮ ಸ್ಥಳೀಯರಿಗೆ ಕೆಟ್ಟ ವಾಸನ ಜತೆಗೆ ಕಿರಿಕಿರಿಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸ್ವಚ್ಛತಾ ಕಾರ್ಯ ಮಾಡಲಾಯಿತು.
ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಈ ಮೂಲಕ ರಸ್ತೆಯನ್ನು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಈ ಪ್ರದೇಶದಲ್ಲಿ ಕಲ್ಲುಬೆಂಚುಗಳು ಹಾಕಿ ಜನರು ಕುಳಿತುಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಯಿತು. ಸಿ.ಸಿ ಕ್ಯಾಮರಾ ಅಳವಡಿಸಿ ಜನರು ಆ ಪ್ರದೇಶದಲ್ಲಿ ತ್ಯಾಜ್ಯ ಹಾಕದಂತೆ ನಿಗಾ ವಹಿಸಲು ಹಾಗೂ ಪೊಲೀಸ್ ಬೀಟ್ ವ್ಯವಸ್ಥೆ ಮಾಡಿಸಲು ಕ್ರಮ ವಹಿಸಲಾಗಿದೆ.
ಇನ್ನು ಕ್ಷೇತ್ರ ಪ್ರವಾಸ ಹಿನ್ನೆಲೆಯಲ್ಲಿ ಕಾರಸವಾಡಿ ಹೊರವಲಯದ ಶ್ರೀ ಮಹದೇಶ್ವರ ದೇವಾಲಯ ಬಳಿಗೆ ಬಂದಿದ್ದ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಅವರು ಸೈಕಲ್ ಏರಿ ಜಾಥಾದಲ್ಲಿ ಪಾಲ್ಗೊಂಡು ಗಮನ ಸೆಳೆದರು. ಅಲ್ಲದೆ ಕೆ.ಆರ್.ನಂದಿನಿ ನೇತೃತ್ವದಲ್ಲಿ ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಮನುಜಶ್ರೀ, ಜಿ.ಪಂ ಸಹಾಯಕ ಯೋಜನಾಧಿಕಾರಿ ಜಿ.ಶ್ರೀಹರ್ಷ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಲೋಕೇಶ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಬೋರೇಗೌಡ ಸೇರಿದಂತೆ ಹಲವು ಅಧಿಕಾರಿಗಳು ಜಾಥಾದ ಮಾರ್ಗದುದ್ದಕ್ಕೂ ಸೈಕಲ್ ಚಾಲನೆ ಮಾಡಿದ್ದು ವಿಶೇಷವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net