ಹೃದಯಾಘಾತದಿಂದ ಸೈನಿಕ ಮಾದೇಗೌಡ ಸಾವು: ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ

ಮಂಡ್ಯ ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್) ಮೈದಾನದಲ್ಲಿ ಬಿಎಸ್‌ಎಫ್ ಸೈನಿಕ ಎಂ.ಬಿ.ಮಾದೇಗೌಡ ಪಾರ್ಥೀವ ಶರೀರಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ ಗೌರವ ವಂದನೆ ಸಲ್ಲಿಸಿದರು.
ಮಂಡ್ಯ ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್) ಮೈದಾನದಲ್ಲಿ ಬಿಎಸ್‌ಎಫ್ ಸೈನಿಕ ಎಂ.ಬಿ.ಮಾದೇಗೌಡ ಪಾರ್ಥೀವ ಶರೀರಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ ಗೌರವ ವಂದನೆ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಹೃದಯಾಘಾತದಿಂದ ಸೈನಿಕ ಮಾದೇಗೌಡ ಸಾವು
  • ಮಹಾರಾಷ್ಟ್ರದ ತರಬೇತಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು
  • ಮಂಡ್ಯದಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ
ಮಂಡ್ಯ: ಬಾರ್ಡರ್ ಸೆಕ್ಯೂರಿಟಿ ಫೋರ್ಸ್(ಬಿಎಸ್‌ಎಫ್) ಸೈನಿಕ ನಗರದ ತಾವರೆಗೆರೆ ಬಡಾವಣೆ ನಿವಾಸಿ ಎಂ.ಬಿ.ಮಾದೇಗೌಡ (44) ಅವರು ಮಂಗಳವಾರ ಹೃದಯಘಾತದಿಂದ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದ ಚಾಕೋರು ಜಿಲ್ಲೆಯ ಲಾತೂರ್‌ನಲ್ಲಿರುವ ತರಬೇತಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಸುನೀಗಿದ್ದಾರೆ.
2000ರಲ್ಲಿ ಮೈಸೂರಿನಲ್ಲಿ ನಡೆದ ಬಿ.ಎಸ್.ಎಫ್ ಸೇನಾ ನೇಮಕಾತಿ ರ‌್ಯಾಲಿಯಲ್ಲಿ ಮಾದೇಗೌಡ ಅವರು ಆಯ್ಕೆಯಾಗಿದರು. 25 ವರ್ಷ ದೇಶದ ಹಲವೆಡೆ ಸೇವೆ ಸಲ್ಲಿಸಿದ್ದ ಮಾದೇಗೌಡ ಅವರು, ಪ್ರಸ್ತುತ ಲಾತೂರ್‌ನಲ್ಲಿನ ತರಬೇತಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರಿಗೆ ಪತ್ನಿ ಎಸ್.ಶಿಲ್ಪಾ, ಒಬ್ಬ ಪುತ್ರ, ಒಬ್ಬಳು ಪುತ್ರಿ ಇದ್ದಾರೆ. ಅಂತೆಯೇ ಮಾದೇಗೌಡ ಅವರ ತಾಯಿ ಕಳೆದ ವರ್ಷ ಹಾಗೂ ನಿವೃತ್ತ ಸಬ್‌ಇನ್‌ಸ್ಪೆಕ್ಟರ್ ಆಗಿದ್ದ ತಂದೆ ಬಿ.ನಂದಬೋರಯ್ಯ 2022ರಲ್ಲಿ ಮೃತಪಟ್ಟಿದ್ದರು.
ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ: ಮಹಾರಾಷ್ಟ್ರದಿಂದ ಬುಧವಾರ ಬೆಳಗ್ಗೆ 10.30ಕ್ಕೆ ಮೃತ ಸೈನಿಕ ಮಾದೇಗೌಡ ಅವರ ಪಾರ್ಥೀವ ಶರೀರವನ್ನು ನಗರಕ್ಕೆ ತರಲಾಯಿತು. ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್) ಮೈದಾನದಲ್ಲಿರಿಸಿ ಪೊಲೀಸರು ಗೌರವ ಸಮರ್ಪಣೆ ಸಲ್ಲಿಸಿದರು.
ಶಾಸಕ ಪಿ.ರವಿಕುಮಾರ್ ಗಣಿಗ, ಜಿಲ್ಲಾಧಿಕಾರಿ ಡಾ.ಕುಮಾರ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಅವರು ಸರ್ಕಾರ ಹಾಗೂ ಜಿಲ್ಲಾಡಳಿತದ ಪರವಾಗಿ ಪುಷ್ಪಗುಚ್ಛವಿರಿಸಿ ಗೌರವ ಸಲ್ಲಿಸಿದರು. ಬಳಿಕ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಹುತಾತ್ಮ ಸೈನಿಕ ಮಾದೇಗೌಡ ಅವರಿಗೆ ಗೌರವ ಸಲ್ಲಿಸಲಾಯಿತು.
ಗೌರವ ಸಲ್ಲಿಸಿದ ಬಳಿಕ ಮೃತ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಜಿಲ್ಲಾಡಳಿತದ ವತಿಯಿಂದ ಗೌರವ ಸಲ್ಲಿಸಿದ ನಂತರ ಮೃತ ಕುಟುಂಬಕ್ಕೆ ಶಾಸಕ ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಶೋಭಾರಾಣಿ ಅವರು ಸಾಂತ್ವನ ಹೇಳಿದರು. ಮಧ್ಯಾಹ್ನ ನಗರದ ಯತ್ತಗದಹಳ್ಳಿಯ ರುದ್ರಭೂಮಿಯಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net