ಹಲಗೂರು: ಸಮೀಪದ ಧನಗೂರು ಗ್ರಾಮದ ಮಾರಮ್ಮ ದೇವಾಲಯದಲ್ಲಿ ಅನ್ನಸಂತರ್ಪಣೆ ಆಯೋಜಿಸುವ ಮೂಲಕ ಹಿಂದು-ಮುಸ್ಲಿಮರು ಸೌಹಾರ್ದತೆ ಮೆರೆದರು.
ಗ್ರಾಮ ದೇವತೆಯಾದ ಮಾರಮ್ಮನ ದೇವಾಲಯದಲ್ಲಿ ಮುಸ್ಲಿಂ ಸಮುದಾಯದವರು ಒಗ್ಗೂಡಿ ಪೂಜಾ ಕಾರ್ಯಕ್ರಮ ನಡೆಸಿ, ಭಕ್ತರಿಗೆ ಅನ್ನಸಂತರ್ಪಣೆ ಮಾಡಿದರು. ಧನಗೂರು ಗ್ರಾಮದಲ್ಲಿ ಗ್ರಾಮಸ್ಥರ ಸಹಕಾರದಿಂದ ನೂತನ ಮಾರಮ್ಮ ದೇವಾಲಯ ನ.2ರಂದು ಲೋಕಾರ್ಪಣೆಗೊಂಡಿತ್ತು. ನಂತರ 48 ದಿನಗಳ ಕಾಲ ಪ್ರತಿದಿನ ಪೂಜೆ ಹಾಗೂ ರಾತ್ರಿ ಅನ್ನಸಂತರ್ಪಣೆ ನಡೆಸಲಾಗುತ್ತಿತ್ತು.
ಇದನ್ನು ಗಮನಿಸಿದ ಗ್ರಾಮದ ಮುಸ್ಲಿಂ ಸಮುದಾಯದವರು ತಾವು ಸಹ ಸೇವಾ ಕಾರ್ಯದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವಂತೆ ಹಿಂದು ಮುಖಂಡರಿಗೆ ಮನವಿ ಮಾಡಿದ್ದರು. ಇದನ್ನು ಗೌರವಿಸಿದ ಹಿಂದು ಮುಖಂಡರು ಸೋಮವಾರದ ಪೂಜೆ ಮತ್ತು ಅನ್ನಸಂತರ್ಪಣೆಯ ಜವಾಬ್ದಾರಿಯನ್ನು ಮುಸ್ಲಿಂ ಸಮುದಾಯಕ್ಕೆ ನೀಡಿದರು. ಅದರಂತೆ ಮುಸ್ಲಿಂ ಸಮುದಾಯದವರು ಅಡುಗೆಗೆ ಬೇಕಾದ ಸಂಪೂರ್ಣ ವೆಚ್ಚ ಭರಿಸಿ, ಮುಂದಾಳತ್ವ ವಹಿಸಿ ಭಕ್ತರಿಗೆ ಅನ್ನಸಂತರ್ಪಣೆ ಮಾಡಿದರು.
ಮುಸ್ಲಿಂ ಮುಖಂಡ ಫಾರೂಕ್ ಪಾಷಾ ಮಾತನಾಡಿ, ನಮ್ಮ ಗ್ರಾಮದಲ್ಲಿ ಹಿಂದು-ಮುಸ್ಲಿಂ ಸಮುದಾಯಗಳು ಹಲವು ವರ್ಷಗಳಿಂದ ಸಹೋದರತ್ವದಿಂದ ಜೀವನ ನಡೆಸುತ್ತಿವೆ. ದೇವಿಗೆ ಪೂಜೆ ಸಲ್ಲಿಸಿ ಭಕ್ತರಿಗೆ ಪ್ರಸಾದ ನೀಡಲು ಅವಕಾಶ ದೊರೆತಿದ್ದು ಅತ್ಯಂತ ಸಂತೋಷ ತಂದಿದೆ. ಹಾಗೂ ಸಕಾಲಕ್ಕೆ ಮಳೆ ಬೆಳೆ ಆಗಲಿ ಆ ಮೂಲಕ ನಾಡಿನಲ್ಲಿ ಸುಖ ಸಮೃದ್ಧಿ ನೆಲೆಸಲಿ ಎಂದರು.
ಧನಗೂರು ಜಾಮೀಯಾ ಮಸೀದಿ ಅಧ್ಯಕ್ಷ ರಿಜ್ವಾನ್, ನಾಗೇಂದ್ರ, ಸಯ್ಯದ್ ಅಲ್ಲಾ ಬಕಾಷ್, ಮುಖಂಡರಾದ ಫಾರೂಕ್ ಪಾಷಾ, ಸಾಧಿಕ್ ಪಾಷಾ, ಅಬ್ಬಾಸ್, ಮುದಾಪೀರ್ ಪಾಷಾ, ಮುಷ್ತಾಕಿನ್ ಪಾಷಾ, ರಿಹಾನ್, ಇಲಿಯಾಜ್ ಪಾಷಾ ಇತರರು ಇದ್ದರು.