ಮಂಡ್ಯದಲ್ಲಿ ’ಸ್ತ್ರೀ ಮಾರ್ಟ್’ ನಿರ್ಮಾಣ: ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿಕೆ

ಮಂಡ್ಯದ ಗಾಂಧಿನಗರದಲ್ಲಿ ಸ್ತ್ರೀ ಮಾರ್ಟ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶಾಸಕ ಪಿ.ರವಿಕುಮಾರ್ ಗಣಿಗ ಸ್ಥಳ ಪರಿಶೀಲಿಸಿದರು.
ಮಂಡ್ಯದ ಗಾಂಧಿನಗರದಲ್ಲಿ ಸ್ತ್ರೀ ಮಾರ್ಟ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶಾಸಕ ಪಿ.ರವಿಕುಮಾರ್ ಗಣಿಗ ಸ್ಥಳ ಪರಿಶೀಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಗಾಂಧಿನಗರದಲ್ಲಿ ಸ್ಥಳ ಪರಿಶೀಲನೆ

ಮಂಡ್ಯ:

ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುವ ಜತೆಗೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪೂರಕವಾದ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಮಂಡ್ಯದ ಗಾಂಧಿನಗರದಲ್ಲಿ ನೂತನವಾಗಿ ಸ್ತ್ರೀ ಮಾರ್ಟ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿದರು.

ಸ್ಥಳ ಪರಿಶೀಲನೆ ನಡೆಸಿ ಯೋಜನೆಯ ರೂಪುರೇಷೆ, ಸ್ಥಳದ ಲಭ್ಯತೆ ಹಾಗೂ ಅಗತ್ಯ ಮೂಲಸೌಕರ್ಯದ ಕುರಿತು ಚರ್ಚಿಸಿದ ಬಳಿಕ ಮಾತನಾಡಿದ ಅವರು, ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಸ್ತ್ರೀ ಮಾರ್ಟ್ ಯೋಜನೆಯನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಮಹಿಳೆಯರು ಹಾಗೂ ಮಹಿಳಾ ಸ್ವಸಹಾಯ ಸಂಘಗಳು ತಯಾರಿಸುವ ವಿವಿಧ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವೇದಿಕೆ ಕಲ್ಪಿಸುವುದು ಮತ್ತು ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡುವುದು ಯೋಜನೆಯ ಪ್ರಮುಖ ಆಶಯವಾಗಿದೆ ಎಂದರು.
ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾದಾಗ ಕುಟುಂಬ ಮತ್ತು ಸಮಾಜ ಎರಡೂ ಬಲಿಷ್ಠವಾಗುತ್ತವೆ. ಮಹಿಳೆಯರಿಗೆ ಸ್ವಂತ ಉದ್ಯೋಗ ಹಾಗೂ ಆದಾಯದ ಅವಕಾಶಗಳನ್ನು ಕಲ್ಪಿಸುವುದು ಅತ್ಯಂತ ಮುಖ್ಯ. ಅವರು ತಯಾರಿಸುವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಸೌಲಭ್ಯ ದೊರೆತರೆ ಅವರ ಆರ್ಥಿಕ ಚಟುವಟಿಕೆಗೆ ಮತ್ತಷ್ಟು ಉತ್ತೇಜನ ಸಿಗಲಿದೆ. ಈ ದೃಷ್ಟಿಯಿಂದ ಮಂಡ್ಯ ನಗರದಲ್ಲಿ ಸ್ತ್ರೀ ಮಾರ್ಟ್ ನಿರ್ಮಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಮಹಿಳಾ ಸ್ವಸಹಾಯ ಸಂಘಗಳು ಮತ್ತು ಸಣ್ಣ ಪ್ರಮಾಣದ ಮಹಿಳಾ ಉದ್ಯಮಿಗಳು ತಯಾರಿಸುವ ಆಹಾರ ಪದಾರ್ಥಗಳು, ಕರಕುಶಲ ವಸ್ತುಗಳು, ಗೃಹೋಪಯೋಗಿ ಉತ್ಪನ್ನಗಳು ಸೇರಿದಂತೆ ವಿವಿಧ ಉತ್ಪನ್ನಗಳನ್ನು ಒಂದೇ ಸೂರಿನಡಿ ಗ್ರಾಹಕರಿಗೆ ತಲುಪಿಸಲು ’ಸ್ತ್ರೀ ಮಾರ್ಟ್’ ಸಹಕಾರಿಯಾಗುವ ನಿರೀಕ್ಷೆಯಿದೆ. ಮಹಿಳೆಯರು ವಿವಿಧ ಬಗೆಯ ಉತ್ಪನ್ನಗಳ ಉತ್ಪಾದನೆಗೆ ಮಾತ್ರ ಸೀಮಿತವಾಗದೆ, ಅವುಗಳ ಮಾರಾಟ ಮತ್ತು ಮಾರುಕಟ್ಟೆ ವ್ಯವಸ್ಥೆಯಲ್ಲಿಯೂ ನೇರವಾಗಿ ತೊಡಗಿಸಿಕೊಳ್ಳಲು ಅನುಕೂಲಕರವಾದ ವೇದಿಕೆಯನ್ನು ರೂಪಿಸುವುದು ಯೋಜನೆಯ ಆಶಯವಾಗಿದೆ. ಇದರಿಂದ ಮಹಿಳೆಯರಲ್ಲಿ ಉದ್ಯಮಶೀಲತೆ ಹೆಚ್ಚುವುದರ ಜತೆಗೆ ಸ್ಥಳೀಯವಾಗಿ ಉದ್ಯೋಗ ಮತ್ತು ಆದಾಯದ ಅವಕಾಶಗಳು ಸೃಷ್ಟಿಯಾಗಲಿವೆ ಎಂದರು.
ಯೋಜನೆಗೆ ಅಗತ್ಯವಿರುವ ಸೌಲಭ್ಯ ಹಾಗೂ ಮುಂದಿನ ಹಂತದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕ, ಯೋಜನೆಯ ಅನುಷ್ಠಾನದಲ್ಲಿ ಮಹಿಳೆಯರಿಗೆ ಹೆಚ್ಚಿನ ಅನುಕೂಲವಾಗುವಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸಮರ್ಪಕ ಯೋಜನೆ ರೂಪಿಸುವಂತೆ ಸಂಬಂಧಪಟ್ಟರಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ, ಪೌರಾಯುಕ್ತೆ ಪಂಪಶ್ರೀ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net