ಮಳವಳ್ಳಿ: ಪಟ್ಟಣದಲ್ಲಿ ಕಳೆದ ಏಳು ದಿನಗಳಿಂದ ಆಯೋಜನೆಗೊಂಡಿರುವ ಸುತ್ತೂರು ಶ್ರೀಶಿವರಾತ್ರಿಶ್ವರ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವದ ಸಮಾರೋಪ ಸಮಾರಂಭ ಕೊನೆಯದಿನವಾದ ಭಾನುವಾರ ಶಿವರಾತ್ರೀಶ್ವರರ ಬೆಳ್ಳಿ ಪಲ್ಲಕ್ಕಿ ಉತ್ಸವ ಹಾಗೂ ಬೃಹತ್ ಸದ್ಬಾವನಾ ಮೆರವಣಿಗೆಯೊಂದಿಗೆ ಆರಂಭಗೊಂಡಿತು.
ಬೆಳಗ್ಗೆ ಎಂಟು ಗಂಟೆಗೆ ಜಯಂತಿ ಮಹೋತ್ಸವ ವೇದಿಕೆ ಬಳಿ ನಿರ್ಮಿಸಲಾಗಿರುವ ಶ್ರೀ ಆದಿಜಗದ್ಗುರು ಶಿವಯೋಗಿ ಮಂಟಪದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಕನಕಪುರ ದೇಗುಲ ಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ಶಿವರಾತ್ರೀಶ್ವರ ಶಿವಯೋಗಿಗಳ ಬೆಳ್ಳಿ ಪಲ್ಲಕ್ಕಿ ಉತ್ಸವ ಮೆರವಣಿಗೆಗೆ ನಂದಿಕಂಭಗಳಿಗೆ ಪೂಜೆ ಸಲ್ಲಿಸಿ ವಾಟಾಳು ಮಠ ಶ್ರೀಸಿದ್ದಲಿಂದ ಶಿವಚಾರ್ಯ ಸ್ವಾಮೀಜಿ ನೂರಕ್ಕೂ ಹೆಚ್ಚು ಮಠಾಧೀಶರ ಸಮ್ಮುಖದಲ್ಲಿ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಶ್ರೀಮಠದ ಬಿರುದಾವಳಿಗಳು, ಮಂಗಳವಾದ್ಯ, ಜನಪದ ಕಲಾತಂಡಗಳು, ಡೊಳ್ಳು ಕುಣಿತ, ನಂದಿಕಂಬ ಕುಣಿತ, ಬಿದುರು ಬೊಂಬೆ, ಪೂರ್ಣಕುಂಬ ಹಿಡಿದ ಮಹಿಳೆಯರು ಹಾಗೂ ಎನ್‌ಸಿಸಿ ವಿದ್ಯಾರ್ಥಿಗಳ ಪಥ ಸಂಚಲನ ಮೆರವಣಿಗೆಯಲ್ಲಿ ಪಟ್ಟಣದ ಜನರ ಗಮನ ಸೆಳೆದವು.
ಜಯಂತಿ ಮಹೋತ್ಸವ ವೇದಿಕೆ ಬಳಿಯಿಂದ ಹೊರಟ ಮೆರವಣಿಗೆಯು ಪಟ್ಟಣದ ಮೈಸೂರು ಮಖ್ಯರಸ್ತೆಯಲ್ಲಿ ಸಾಗಿ ಅನಂತ್‌ರಾಂ ವೃತ್ತ, ಕುಪ್ಪುಸ್ವಾಮಿ ವೃತ್ತದ ಮೂಲಕ ಸುಲ್ತಾನ್ ರಸ್ತೆಯಲ್ಲಿ ತೆರಳಿ ಅನಿತಾ ಕಾನ್ವೆಂಟ್ ರಸ್ತೆಯ ಮೂಲಕ ವೇದಿಕೆ ಬಳಿ ಅಗಮಿಸಿತು.
ಜಿಲ್ಲಾಧಿಕಾರಿ ನಂದಿಕಂಬ ಕುಣಿತ: ಮೆರವಣಿಗೆ ಪ್ರಾರಂಭದಲ್ಲಿ ಸಂಸ್ಕೃತಿಯ ಪ್ರತೀಕ ನಂದಿಕಂಭಕ್ಕೆ ಪೂಜೆ ಸಲ್ಲಿದಾಗ ನೆರೆದ ಹಲವು ಮುಖಂಡರು ಹೆಗಲು ಕೊಟ್ಟು ಪುಳಕಿತರಾದರು. ಈ ವೇಳೆ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಡಾ.ಕುಮಾರ ಅವರು ನಂದಿಕಂಬದ ಕುಣಿಕೆ ಹಿಡಿದು ಹೆಜ್ಜೆ ಹಾಕುವ ಮೂಲಕ ನೆರೆದ ಭಕ್ತರ ಗಮನ ಸೆಳೆದರು.
ಜಯಂತ್ಯುತ್ಸವದ ಸಾನ್ನಿಧ್ಯ:ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವ ಕಾರ್ಯಕ್ರಮದ ಯಶಸ್ಸಿಗಾಗಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಪಟ್ಟಣದಲ್ಲೇ ವಾಸ್ತವ್ಯ ಹೂಡುವ ಮೂಲಕ ಧಾರ್ಮಿಕ ಸಂಸ್ಕೃತಿ ಮೆರುಗನ್ನು ಹೆಚ್ಚಿಸಿದರು.
ಪ್ರತಿದಿನದ ಪಟ್ಟಣದ ವಿವಿಧೆಡೆ ಬೆಳಗಿನ ಧ್ವಜಾರೋಹಣ ನೆರವೇರಿಸುವುದು, ಉತ್ಸವ ಮೂರ್ತಿ ಮೆರವಣಿಯಲ್ಲಿ ಭಕ್ತರ ಜತೆಗೂಡಿ ಧಾರ್ಮಿಕ ಯಾತ್ರೆಯಲ್ಲಿ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದರು. ನಂತರ ಬೇಡಿಕೆಯ ಆಹ್ವಾನದ ಮೇರೆಗೆ ಭಕ್ತರ ಮನೆಗಳಿಗೆ ತೆರಳಿ ಶಿವಪೂಜೆಯಲ್ಲಿ ಪಾಲ್ಗೊಳ್ಳುವುದು. ನಂತರ ಸಂಜೆ ವೇದಿಕೆ ಸಾನ್ನಿಧ್ಯ ವಹಿಸಿ ಕಾರ್ಯಕ್ರಮ ಪೂರ್ಣಗೊಳಿಸಿ ಸ್ಥಳೀಯ ಭಕ್ತರ ಮನೆಗಳಲ್ಲಿ ವಾಸ್ತವ್ಯ ಹೂಡುವ ಮೂಲಕ ಸಮಾರಂಭ ಇತಿಹಾಸ ಪುಟದಲ್ಲಿ ಸೇರುವಂತೆ ಯಶಸ್ವಿಗೊಳಿದರು.
ಇದಕ್ಕೆ ಪೂರಕವಾಗಿ ಜೆಎಸ್‌ಎಸ್ ವಿದ್ಯಾಪೀಠದ ಕಾರ್ಯದರ್ಶಿ ಮಂಜುನಾಥ್ ಮತ್ತು ಸಾವಿರಕ್ಕೂ ಹೆಚ್ಚು ನೌಕರ ವರ್ಗ ಜವಾಬ್ದಾರಿಯುತವಾಗಿ ಕಾರ್ಯಕ್ರಮಗಳಲ್ಲಿ ಯಾವುದೇ ಲೋಪವಾಗದ ನಿಟ್ಟಿನಲ್ಲಿ ಶ್ರಮಿಸಿರುವುದು ಕಂಡು ಬಂತು.
ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ:
ಭಾನುವಾರ ಮೈಸೂರು ಜೆಪಿಐಇಆರ್ ತಂಡದಿಂದ ಮಂಟೇಸ್ವಾಮಿ ಕಥಾ ಪ್ರಸಂಗ, ನವೀನ್ ಸಜ್ಜು ತಂಡದಿಂದ ಸಂಗೀತ ಸಂಭ್ರಮ, ಮೈಸೂರಿನ ಜೆಎಸ್‌ಎಸ್ ಕಲಾ ಮಂಟಪ ಕಾಲವಿದರಿಂದ ಶ್ರೀ ಶಿವರಾತ್ರೀಶ್ವರ ವಿಜಯ ನಾಟಕ ಪ್ರದರ್ಶನಗೊಳ್ಳುವ ಮೂಲಕ ನೆರೆದ ಸಹಸ್ರಾರು ಜನರನ್ನು ರಂಜಿಸಿದರು.