ಫೆ.1ರಂದು ನಿಮಿಷಾಂಬ ದೇವಸ್ಥಾನದಲ್ಲಿ ಶುದ್ಧ ಪೌರ್ಣಮಿ: ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿಕೆ

ಮಂಡ್ಯದಲ್ಲಿ ಶ್ರೀರಂಗಪಟ್ಟಣ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿತ್ತು.
ಮಂಡ್ಯದಲ್ಲಿ ಶ್ರೀರಂಗಪಟ್ಟಣ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿತ್ತು.
Published on

ಪ್ರಮುಖ ಮುಖ್ಯಾಂಶಗಳು

  • ಫೆ.1ರಂದು ನಿಮಿಷಾಂಬ ದೇವಸ್ಥಾನದಲ್ಲಿ ಶುದ್ಧ ಪೌರ್ಣಮಿ
  • ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿ
  • ಶಾಸಕ ರಮೇಶ ಬಂಡಿಸಿದ್ದೇಗೌಡ ನೇತೃತ್ವದಲ್ಲಿ ಸಭೆ
ಮಂಡ್ಯ: ಶ್ರೀರಂಗಪಟ್ಟಣದ ನಿಮಿಷಾಂಬ ದೇವಸ್ಥಾನದಲ್ಲಿ ಫೆ.1ರಂದು ನಡೆಯಲಿರುವ ಮಾಘ ಶುದ್ಧ ಹುಣ್ಣಿಮೆ ಪ್ರಯುಕ್ತ ಹೆಚ್ಚು ಸಾರ್ವಜನಿಕರು ಸೇರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಅಧ್ಯಕ್ಷರು ಹಾಗೂ ಶ್ರೀರಂಗಪಟ್ಟಣ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂದು ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುವ ನಿರೀಕ್ಷೆಯಲ್ಲಿ ಇರುವುದರಿಂದ ಸೂಕ್ತ ಭದ್ರತೆಗಾಗಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ. ಮೊಜೊ ಬ್ಯಾರಿಕೇಡ್ ಹಾಕಿಸಿ ಹಾಗೂ ಭಕ್ತರು ಸರಾಗವಾಗಿ ದೇವರ ದರ್ಶನ ಪಡೆಯುವಂತೆ ಮಾಡಲು ಸಿದ್ಧತೆ ಮಾಡಿಕೊಳ್ಳಿ. ಕಾವೇರಿ ನದಿಯಲ್ಲಿ ಸ್ನಾನ ಮಾಡಿದ ನಂತರ ಬಟ್ಟೆ ಬದಲಾಯಿಸಲು ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಕೋಣೆ ತೆರೆಯಬೇಕು. ಮುಖ್ಯವಾಗಿ ಮಹಿಳೆಯರು ಬಟ್ಟೆ ಬದಲಾಯಿಸುವ ಸ್ಥಳದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಭದ್ರತಾ ದೃಷ್ಟಿಯಿಂದ ಕಾವೇರಿ ನದಿ ಹಾಗೂ ನಿಮಿಷಾಂಬ ದೇವಾಲಯದಲ್ಲಿ ಅಗತ್ಯವಿರುವ ಸ್ಥಳಗಳಲ್ಲಿ ತಾತ್ಕಾಲಿಕ ಸಿ.ಸಿ ಕ್ಯಾಮೆರಾ ಅಳವಡಿಸಿ. ದೇವಸ್ಥಾನದ ಸುತ್ತಲೂ ಸೂಕ್ತ ದೀಪಾಲಂಕಾರಗಳ ವ್ಯವಸ್ಥೆ ಕಲ್ಪಿಸಿ. ರಾತ್ರಿಯ ವೇಳೆಯೂ ಭಕ್ತರು ದೇವಾಲಯಕ್ಕೆ ಬರುವುದರಿಂದ ಬೆಳಕಿನ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ವಿದ್ಯುತ್ ಸಂಪರ್ಕವನ್ನು ನಿರಂತರವಾಗಿ ನೀಡಬೇಕು. ತುರ್ತು ಸಂದರ್ಭದಲ್ಲಿ ಜನರೇಟರ್ ಇಟ್ಟಿರಬೇಕು. ದೇವಸ್ಥಾನದ ಸಮೀಪದಲ್ಲಿಯೇ ಅಗ್ನಿಶಾಮಕ ದಳ, ಅಗತ್ಯ ಔಷಧಗಳೊಂದಿಗೆ ತಾತ್ಕಾಲಿಕ ಆರೋಗ್ಯ ಕೇಂದ್ರ ಮತ್ತು ಆಂಬುಲೆನ್ಸ್ ಸೇವೆ ಹಾಗೂ ಭಕ್ತರು ಸ್ನಾನ ಮಾಡುವ ಸ್ಥಳದಲ್ಲಿ ನುರಿತ ಈಜುಗಾರರ ತಂಡ ಸಿದ್ಧವಾಗಿರಬೇಕು ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಭಕ್ತರ ವಾಹನಗಳನ್ನು ದೇವಸ್ಥಾನದ ಸಮೀಪಕ್ಕೆ ಬಿಡದೇ ನಿಗದಿತ ದೂರದಲ್ಲಿ ಸೂಕ್ತ ಸ್ಥಳ ಗುರುತಿಸಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ನೂಕು ನುಗ್ಗಲು ತಪ್ಪಿಸಲು ಅಗತ್ಯ ಬ್ಯಾರಿಕೇಡ್ ವ್ಯವಸ್ಥೆ ಮಾಡಬೇಕು. ವಾಹನಗಳಿಗೆ ಮಾರ್ಗ ಸೂಚನಾ ಫಲಕ, ಪಾರ್ಕಿಂಗ್ ಫಲಕಗಳನ್ನು ಅಳವಡಿಸಿಕೊಳ್ಳಬೇಕು. ಪ್ರಮುಖ ಸ್ಥಳಗಳನ್ನು ಗುರುತಿಸಿ ರಾತ್ರಿ ವೇಳೆಯಲ್ಲಿ ವಿದ್ಯುತ್ ದೀಪಾಲಂಕಾರ ಜತೆಗೆ ನಿರಂತರವಾಗಿ ವಿದ್ಯುತ್ ವ್ಯವಸ್ಥೆ ಮಾಡಬೇಕು. ಭಕ್ತರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕು. ತಾತ್ಕಾಲಿಕ ಬಯೋ ಶೌಚಗೃಹ ನಿರ್ಮಿಸಬೇಕು. ದೇವಸ್ಥಾನದ ಆವರಣ ಸೇರಿದಂತೆ ಸುತ್ತಮುತ್ತ ಹಾಗೂ ಸ್ನಾನ ಮಾಡುವ ಕೊಳದ ಬಳಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಅಗತ್ಯ ಪೌರ ಕಾರ್ಮಿಕರನ್ನು ನೇಮಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಮಾತನಾಡಿ, ದೇವಾಲಯಕ್ಕೆ ಭಕ್ತರು ಬರಲು ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಬೇಕು. ಶ್ರೀರಂಗಪಟ್ಟಣದಿಂದ ಗಂಜಾಂವರೆಗೆ ನಿಗದಿತ ಅವಧಿಯೊಳಗೆ ಬಸ್‌ಗಳು ಸಂಚಾರ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ದೇವಸ್ಥಾನ ಆವರಣದಲ್ಲಿ ಧೂಳನ್ನು ನಿಯಂತ್ರಿಸಲು ಟ್ಯಾಂಕರ್ ಮೂಲಕ ನೀರನ್ನು ಸಿಂಪಡಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಶ್ರೀರಂಗಪಟ್ಟಣ ತಹಸೀಲ್ದಾರ್ ಚೇತನಾ ಯಾದವ್, ಮುಜರಾಯಿ ಇಲಾಖೆ ತಹಸೀಲ್ದಾರ್ ತಮ್ಮೇಗೌಡ, ಜಿಲ್ಲಾಧಿಕಾರಿ ಕಚೇರಿ ತಹಸೀಲ್ದಾರ್ ರವಿಶಂಕರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net