ಕೆ.ಆರ್.ಪೇಟೆ ಪಟ್ಟಣದ ಎಪಿಎಂಸಿ ಆವರಣದಲ್ಲಿ ಕರ್ನಾಟಕ ನಾಗರೀಕ ಸರಬರಾಜು ಮಂಡಳಿಯ ವತಿಯಿಂದ ಆಯೋಜಿಸಿದ್ದ ರಾಗಿ ಖರೀದಿ ಕೇಂದ್ರವನ್ನು ಶಾಸಕ ಹೆಚ್.ಟಿ.ಮಂಜು ಉದ್ಘಾಟಿಸಿ ಮಾತನಾಡಿದರು. ತರ‌್ನೇನಹಳ್ಳಿ ಬಲದೇವ್, ಹೊನ್ನೇನಹಳ್ಳಿ ನಾಗರಾಜೇಗೌಡ, ವಿದ್ಯಾಶ್ರೀ, ಮನೋಹರ್, ಮಹೇಶ್ ಇದ್ದರು.
Published on:
Copied
Follow Us
ಕೆ.ಆರ್.ಪೇಟೆ: ರೈತರು ದಲ್ಲಾಳಿಗಳಿಗೆ ರಾಗಿ ಮಾರಾಟ ಮಾಡದೆ ಖರೀದಿ ಕೇಂದ್ರದಲ್ಲಿಯೇ ಬೆಂಬಲ ಬೆಲೆಗೆ ಮಾರಾಟ ಮಾಡುವಂತೆ ಶಾಸಕ ಎಚ್.ಟಿ.ಮಂಜು ಕಿವಿಮಾತು ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ಮಂಡಳಿಯ ವತಿಯಿಂದ ಸೋಮವಾರ ಆಯೋಜಿಸಿದ್ದ ರಾಗಿ ಖರೀದಿ ಕೇಂದ್ರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕಳೆದ ಬಾರಿ ನಮ್ಮ ತಾಲೂಕಿನ ನ್ಯಾಯಬೆಲೆ ಅಂಗಡಿಗಳಿಗೆ ಕಳಪೆ ಗುಣಮಟ್ಟದ ರಾಗಿಯನ್ನು ಹಾಸನ ಜಿಲ್ಲೆಯ ಜಾವಗಲ್‌ನ ಗೋಡೌನ್‌ನಿಂದ ತರಿಸಿಕೊಂಡು ಹಂಚಲಾಗಿದೆ ಎಂದು ರೈತ ಸಂಘದ ಮುಖಂಡರು ಪ್ರತಿಭಟನೆ ನಡೆಸಿದ್ದರು. ಆಹಾರ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ ಬಂದು ಸಭೆಯನ್ನೂ ನಡೆಸಿದ್ದರು. ಈ ಬಾರಿ ಮಳೆಯು ಕೂಡ ಅಂತಹ ಚೆನ್ನಾಗಿ ಬಂದಿಲ್ಲ. ಇದರಿಂದಾಗಿ ರಾಗಿಯು ಸ್ವಲ್ಪ ಸಣ್ಣದಾಗಿರುತ್ತದೆ. ಇದನ್ನು ಕೂಡ ತೆಗೆದುಕೊಳ್ಳಿ. ಆದರೆ ಗುಣಮಟ್ಟದಲ್ಲಿ ಮಾತ್ರ ರಾಜಿಯಾಗಬೇಡಿ. ರೈತರು ಇಂತಹ ವಿಷಯಗಳಿಗೆಲ್ಲ ಶಾಸಕರ ಬಳಿಗೆ ಬರಬೇಡಿ. ಗುಣಮಟ್ಟಕ್ಕೆ ಆದ್ಯತೆ ನೀಡಿ. ಇಲ್ಲದಿದ್ದರೆ ಸಂಘಟನೆಗಳಿಗೆ ಪ್ರತಿಭಟಿಸಲು ದಾರಿ ಮಾಡಿಕೊಟ್ಟಂತಾಗುತ್ತದೆ. ಇದರಿಂದ ಮೇಲಧಿಕಾರಿಗಳಿಗೂ ಮುಜುಗರವಾಗುತ್ತದೆ. ನಮ್ಮ ತಾಲೂಕು ವ್ಯಾಪ್ತಿಯಲ್ಲಿ ಕೆ.ಆರ್.ಪೇಟೆ ಖರೀದಿ ಕೇಂದ್ರದಲ್ಲಿ 3,563 ರೈತರು ರಾಗಿ ಖರೀದಿ ನೋಂದಾಯಿಸಿಕೊಂಡಿದ್ದು ಬಲ್ಲೇನಹಳ್ಳಿ ಖರೀದಿ ಕೇಂದ್ರದಲ್ಲಿ 1043 ರೈತರು ನೋಂದಾಯಿಸಿಕೊಂಡಿದ್ದಾರೆ. ಒಟ್ಟಾರೆ ನಮ್ಮ ತಾಲೂಕಿನಲ್ಲಿ 4606 ನೊಂದಾಯಿತ ರೈತರಿಂದ 1,07,670 ಕ್ವಿಂಟಾಲ್ ರಾಗಿಯನ್ನು ಸರ್ಕಾರ ಖರೀದಿಸಲಿದೆ. ಇನ್ನೂ ಸಮಯವಿದ್ದು ರೈತರು ಗೊಂದಲಕ್ಕೊಳಗಾಗದೆ ಗುಣಮಟ್ದ ರಾಗಿಯನ್ನು ಮಾರಾಟ ಮಾಡಿ ಎಂದು ಹೇಳಿದರು.
ಹಿಂದೆ ಪಟ್ಟಣದಲ್ಲಿ ಮಾತ್ರ ಖರೀದಿ ಕೇಂದ್ರವಿತ್ತು. ಡಿಸಿ ಜತೆಗೆ ಮಾತನಾಡಿ ಕಿಕ್ಕೇರಿಯಲ್ಲಿ ಕೇಂದ್ರ ಪ್ರಾರಂಭಿಸಿದ್ದೇನೆ. ರೈತರಿಗೆ ಸಾಗಾಣಿಕೆ ವೆಚ್ಚ ಆಗದಂತೆ, ಮಾರಾಟಕ್ಕೆ ಒತ್ತಡ ಆಗದಂತೆ ತೆಂಡೇಕೆರೆ ಎಪಿಎಂಸಿಯಲ್ಲಿ ಮತ್ತೊಂದು ಕೇಂದ್ರ ತೆರೆಯುವಂತೆ ಡಿಸಿ ಜತೆಗೆ ಮಾತನಾಡುತ್ತೇನೆ. ಅಲ್ಲಿನ ರೈತರಿಗೆ ಮಾರಾಟಕ್ಕೆ ತೊಂದರೆಯಾಗದಂತೆ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷ ತರ‌್ನೇನಹಳ್ಳಿ ಬಲದೇವ್, ಎಪಿಎಂಸಿ ಮಾಜಿ ಅಧ್ಯಕ್ಷ ಹೊನ್ನೇನಹಳ್ಳಿ ನಾಗರಾಜೇಗೌಡ, ಎಪಿಎಂಸಿ ಕಾರ್ಯದರ್ಶಿ ವಿದ್ಯಾಶ್ರೀ, ಕೆಎಸ್‌ಎಫ್‌ಸಿ ವ್ಯವಸ್ಥಾಪಕ ಮನೋಹರ್, ಮುಖಂಡ ಪಿ.ಕೆ.ಜಿ.ಮಹೇಶ್ ಮತ್ತಿತರರು ವೇದಿಕೆಯಲ್ಲಿದ್ದರು.