ದಲಿತರ ಅಭಿವೃದ್ಧಿಗೆ ಎಸ್‌ಸಿಪಿ, ಟಿಎಸ್‌ಪಿ ಬಳಕೆಯಾಗಲಿ

ಪಾಂಡವಪುರದ ತಾಪಂ ಸಭಾಂಗಣದಲ್ಲಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನ ಬಳಕೆ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಹರಗಲವಾಡಿ ನಾಗೇಂದ್ರ ಮಾತನಾಡಿದರು. ಶಾಸಕ ದರ್ಶನ್ ಪುಟ್ಟಣ್ಣಯ್ಯ, ಎಸಿ ಕೆ.ಆರ್.ಶ್ರೀನಿವಾಸ್ ತಹಸೀಲ್ದಾರ್ ಆದರ್ಶ ಇತರರು ಇದ್ದರು.
ಪಾಂಡವಪುರದ ತಾಪಂ ಸಭಾಂಗಣದಲ್ಲಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನ ಬಳಕೆ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಹರಗಲವಾಡಿ ನಾಗೇಂದ್ರ ಮಾತನಾಡಿದರು. ಶಾಸಕ ದರ್ಶನ್ ಪುಟ್ಟಣ್ಣಯ್ಯ, ಎಸಿ ಕೆ.ಆರ್.ಶ್ರೀನಿವಾಸ್ ತಹಸೀಲ್ದಾರ್ ಆದರ್ಶ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • SCP and TSP
ಪಾಂಡವಪುರ: ಎಸ್ಸಿ, ಎಸ್ಟಿ ಸಮುದಾಯಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ 2013ರಿಂದ ಈವರೆಗೆ 2.94 ಲಕ್ಷ ಕೋಟಿ ರೂ. ಅನುದಾನ ನೀಡಿದೆ ಎಂದು ಸಿಆರ್‌ಪಿಎಫ್ ಸಂಸ್ಥಾಪಕ ಅಧ್ಯಕ್ಷ ಹರಗಲವಾಡಿ ನಾಗೇಂದ್ರ ತಿಳಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನ ಬಳಕೆ ಕುರಿತು ಅರಿವು ಮೂಡಿಸುವ ಸಂಬಂಧ ಶನಿವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನದಿಂದಾಗಿ ನಾವೆಲ್ಲರೂ ನೆಮ್ಮದಿಯಿಂದ ಬದುಕುತ್ತಿದ್ದೇವೆ. ಆದರೆ, ದಲಿತರು ಇನ್ನೂ ಹೆಚ್ಚಿನ ರೀತಿಯಲ್ಲಿ ಆರ್ಥಿಕ ಮತ್ತು ಶೈಕ್ಷಣಿಕ ಪ್ರಗತಿ ಸಾಧಿಸಬೇಕಿದೆ ಎಂದರು.
ಪಂಚವಾರ್ಷಿಕ ಯೋಜನೆಗಳ ಮೂಲಕ ದಲಿತರನ್ನು ಆರ್ಥಿಕವಾಗಿ ಅಭಿವೃದ್ಧಿಪಡಿಸಬೇಕು ಎನ್ನುವ ಪ್ರಯತ್ನ ನಡೆಯಿತು. ಆದರೆ, ಅಲ್ಲಿ ಕೃಷಿ, ನೀರಾವರಿ, ನಗರೀಕರಣಕ್ಕೆ ಆದ್ಯತೆ ನೀಡಿದ ಹಿನ್ನೆಲೆಯಲ್ಲಿ ದಲಿತರ ಅಭಿವೃದ್ಧಿ ಸಾಧ್ಯವಾಗಲಿಲ್ಲ. ಆ ನಂತರ ಯೋಜನಾ ಆಯೋಗವು 2005ರಲ್ಲಿ ಎಸ್‌ಸಿಪಿ ಹಾಗೂ ಎಸ್‌ಟಿಪಿ ಯೋಜನೆಯನ್ನು ಜಾರಿಗೆ ತಂದು ದಲಿತರು, ದಲಿತ ಕೇರಿಗಳು, ಸಮುದಾಯವನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡಲಾಯಿತು. ಸರ್ಕಾರ ಪ್ರತಿವರ್ಷ ಸಾವಿರಾರು ಕೋಟಿ ರೂ. ಹಣವನ್ನು ದಲಿತರ ಅಭಿವೃದ್ಧಿಗಾಗಿ ಮೀಸಲಿಡುತ್ತಿದ್ದು, ದಲಿತರ ಅನುದಾನಗಳು ಸಾಕಷ್ಟು ದರ್ಬಳಕೆಯೂ ಆಗುತ್ತಿದೆ, ಜತೆಗೆ ಗ್ಯಾರೆಂಟಿ ಯೋಜನೆಗೂ ದಲಿತರ ಅನುದಾನ ಬಳಕೆಯಾಗಿದೆ ಎಂಬ ಆರೋಪ ಇದೆ. ದಲಿತರ ವೈಯುಕ್ತಿಕ ಅಭಿವೃದ್ಧಿ, ಬಡತನ ನಿರ್ಮೂಲನೆ, ಶಿಕ್ಷಣ, ಸಾಮಾಜಿಕ, ಸಮುದಾಯ ಅಭಿವೃದ್ಧಿಗಾಗಿ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಗಾಂಧಿ ಕಂಡ ಗ್ರಾಮ ಸ್ವರಾಜ್ಯದ ಕನಸ್ಸನ್ನು ಈಡೇರಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸರ್ಕಾರ ರೂಪಿಸುವ ಯೋಜನೆಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲೀಕರಣಗೊಳ್ಳಬೇಕು. ಸರ್ಕಾರ ಈವರೆಗೂ 2600ಕ್ಕೂ ಹೆಚ್ಚು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಕೆಲವು ಯೋಜನೆಗಳನ್ನು ಮಾತ್ರ ನಾವು ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಹಾಗಾಗಿ ಸರ್ಕಾರದಿಂದ ದೊರೆಯುವ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಇನ್ನೂ 4 ಲಕ್ಷ ಸರ್ಕಾರಿ ಉದ್ಯೋಗಗಳು ಭರ್ತಿಯಾಗಿಲ್ಲ. ಈ ಭಾರಿ ಬಜೆಟ್ ನಲ್ಲಿ 50 ಸಾವಿರ ಉದ್ಯೋಗ ಭರ್ತಿಮಾಡುವುದಾಗಿ ಸರಕಾರ ಹೇಳಿದೆ. ಇನ್ನೂ 3.50 ಲಕ್ಷ ಉದ್ಯೋಗ ಖಾಲಿ ಇದೆ, ಸ್ವಯಂ ಉದ್ಯೋಗದ ಮೂಲಕ ಯುವಕರು ಬದುಕು ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು.
ಈ ವೇಳೆ ಉಪವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್, ತಹಸೀಲ್ದಾರ್ ಆದರ್ಶ, ದಸಂಸ ಮುಖಂಡರಾದ ಗಿರಿಯಾರಹಳ್ಳಿ ಮೂರ್ತಿ, ಅಂಕಯ್ಯ, ಟಿ.ಎ.ಸ್.ಹಾಳಯ್ಯ. ಟಿಎಚ್‌ಓ ಡಾ.ಸಿ.ಎ.ಅರವಿಂದ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net