ಚಿಕ್ಕರಸಿನಕೆರೆ ಕ್ಷೇತ್ರ ಅಭಿವೃದ್ಧಿಗೆ ಕಾರ್ಯಯೋಜನೆ

ಕೆ.ಎಂ.ದೊಡ್ಡಿ ಸಮೀಪದ ಚಿಕ್ಕರಸಿನಕೆರೆಯ ಶ್ರೀಕಾಲಭೈರವೇಶ್ವರ ಪುಣ್ಯಕ್ಷೇತ್ರದಲ್ಲಿ 50ವರ್ಷ ಪೂರೈಸಿದ 50 ಹಿರಿಯ ದಂಪತಿಗೆ ಶ್ರೀಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವತಿಯಿಂದ ಸನ್ಮಾನ ಹಾಗೂ ಬಾಗಿನ ಕಾರ್ಯಕ್ರಮದಲ್ಲಿ ಶಾಸಕ ಕದಲೂರು ಉದಯ್, ವಿನೂತಾ ಉದಯ್ ದಂಪತಿಯನ್ನು ಸನ್ಮಾನಿಸಲಾಯಿತು. ಡಾ.ಪ್ರಸನ್ನನಾಥ ಸ್ವಾಮೀಜಿ, ಯಜಮಾನ ಶಿವಲಿಂಗೇಗೌಡ, ಪದಾಧಿಕಾರಿಗಳಾದ ಚನ್ನೇಗೌಡ, ಪುಟ್ಟರಾಜು, ರಘು, ಲೋಕೇಶ್, ಶಿವಣ್ಣ, ಮರಿಲಿಂಗಮ್ಮ, ಜೋಗಿಗೌಡ ಇತರರು ಇದ್ದರು.
ಕೆ.ಎಂ.ದೊಡ್ಡಿ ಸಮೀಪದ ಚಿಕ್ಕರಸಿನಕೆರೆಯ ಶ್ರೀಕಾಲಭೈರವೇಶ್ವರ ಪುಣ್ಯಕ್ಷೇತ್ರದಲ್ಲಿ 50ವರ್ಷ ಪೂರೈಸಿದ 50 ಹಿರಿಯ ದಂಪತಿಗೆ ಶ್ರೀಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವತಿಯಿಂದ ಸನ್ಮಾನ ಹಾಗೂ ಬಾಗಿನ ಕಾರ್ಯಕ್ರಮದಲ್ಲಿ ಶಾಸಕ ಕದಲೂರು ಉದಯ್, ವಿನೂತಾ ಉದಯ್ ದಂಪತಿಯನ್ನು ಸನ್ಮಾನಿಸಲಾಯಿತು. ಡಾ.ಪ್ರಸನ್ನನಾಥ ಸ್ವಾಮೀಜಿ, ಯಜಮಾನ ಶಿವಲಿಂಗೇಗೌಡ, ಪದಾಧಿಕಾರಿಗಳಾದ ಚನ್ನೇಗೌಡ, ಪುಟ್ಟರಾಜು, ರಘು, ಲೋಕೇಶ್, ಶಿವಣ್ಣ, ಮರಿಲಿಂಗಮ್ಮ, ಜೋಗಿಗೌಡ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಕದಲೂರು ಉದಯ್ ಭರವಸೆ
  • 50 ವರ್ಷ ಪೂರೈಸಿದ 50 ಹಿರಿಯ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮ
ಕೆ.ಎಂ. ದೊಡ್ಡಿ: ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಸೇರಿರುವ ಪುರಾಣ ಪ್ರಸಿದ್ಧ ಚಿಕ್ಕರಸಿನಕೆರೆ ಪುಣ್ಯ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಕಾರ್ಯಯೋಜನೆ ರೂಪಿಸಲು ನಾನೂ ಕೈ ಜೋಡಿಸುವುದಾಗಿ ಶಾಸಕ ಕದಲೂರು ಉದಯ್ ಭರವಸೆ ನೀಡಿದರು.
ಸಮೀಪದ ಚಿಕ್ಕರಸಿನಕೆರೆಯ ಶ್ರೀಕಾಲಭೈರವೇಶ್ವರ ಪುಣ್ಯಕ್ಷೇತ್ರದಲ್ಲಿ 50 ವರ್ಷ ಪೂರೈಸಿದ 50 ಹಿರಿಯ ದಂಪತಿಗೆ ಶ್ರೀಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವತಿಯಿಂದ ಸನ್ಮಾನ ಹಾಗೂ ಬಾಗಿನ ಕಾರ್ಯಕ್ರಮದಲ್ಲಿ ಅಭಿನಂದಿಸಿ ಮಾತನಾಡಿ, ಭಕ್ತರ ಪಾಲಿನ ಆಶಾಕಿರಣವಾಗಿರುವ ಶ್ರೀ ಕಾಲಭೈರವೇಶ್ವರ ಪುಣ್ಯಕ್ಷೇತ್ರದಲ್ಲಿ ಬಸಪ್ಪ ಹಲವಾರು ಪವಾಡಗಳನ್ನು ಸೃಷ್ಟಿಸಿ ಭಕ್ತರ ಆಶೋತ್ತರಗಳನ್ನು ಈಡೇರಿಸುತ್ತಿದ್ದು, ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಕ್ಷೇತ್ರಕ್ಕೆ ಬರುವ ಭಕ್ತರ ಹಿತದೃಷ್ಟಿಯಿಂದ ಹಾಗೂ ಅವರಿಗೆ ಮೂಲಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಿ ಮಾದರಿ ಪುಣ್ಯಕ್ಷೇತ್ರ ಮಾಡುವ ನಿಟ್ಟಿನಲ್ಲಿ ಶ್ರೀಕ್ಷೇತ್ರದ ಆಡಳಿತ ಮಂಡಳಿ ಜತೆ ಕೈಜೋಡಿಸಲಾಗುವುದು ಎಂದು ತಿಳಿಸಿದರು.
ಆದಿಚುಂಚನಗಿರಿ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಉನ್ನತ ಉದ್ಯೋಗಾವಕಾಶಗಳನ್ನು ಪಡೆದುಕೊಂಡು ಎಲ್ಲ ಕ್ಷೇತ್ರಗಳಲ್ಲೂ ಛಾಪು ಮೂಡಿಸಿದ್ದಾರೆ. ಆದಿಚುಂಚನಗಿರಿ ಕ್ಷೇತ್ರದಲ್ಲಿ ನಿರಂತರವಾಗಿ ಅನ್ನದಾಸೋಹ ಮಾಡುವುದರ ಮುಖಾಂತರ ಹಸಿದವರ ಹೊಟ್ಟೆ ತುಂಬಿಸುವ ಕಾರ್ಯ ನಡೆದು ಬರುತ್ತಿದ್ದು, ಅದೇ ಮಾದರಿಯಲ್ಲಿ ಗ್ರಾಮೀಣ ಭಾಗದಲ್ಲಿ ಹಸಿದು ಬರುವ ಭಕ್ತರಿಗೆ ಚಿಕ್ಕರಸಿನಕೆರೆಯ ಶ್ರೀ ಕಾಲಭೈರವೇಶ್ವರ ಪುಣ್ಯಕ್ಷೇತ್ರದಲ್ಲಿ ಅನ್ನದಾನ ಮಾಡುವ ಕೈಂಕರ್ಯದಲ್ಲಿ ತೊಡಗಿರುವುದು ತಾಲೂಕಿನ ಕೀರ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಚಿಕ್ಕರಸಿನಕೆರೆ ಹೆಬ್ಬಾಳಕ್ಕೆ ತಡೆಗೋಡೆ ನಿರ್ಮಾಣ ಮಾಡಲಾಗಿದ್ದು ರೈತರ ಹಿತಕಾಯುವ ದೃಷ್ಟಿಯಿಂದ ಸೂಳೆಕೆರೆ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಭಾಗದ ಸಾವಿರಾರು ಎಕರೆ ಜಮೀನುಗಳಿಗೆ ಸರಾಗವಾಗಿ ನೀರು ಒದಗಿಸಲು ಕ್ರಮ ವಹಿಸಲಾಗುತ್ತಿದೆ ಎಂದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಡಾ.ಪ್ರಸನ್ನನಾಥ ಸ್ವಾಮೀಜಿ ಭಕ್ತರಿಗೆ ಆಶೀರ್ವಚನ ನೀಡಿದರು. 50 ವರ್ಷ ಪೂರೈಸಿದ 50ಕ್ಕೂ ಹೆಚ್ಚು ಹಿರಿಯ ದಂಪತಿಗಳಿಗೆ ಶಾಸಕ ಕದಲೂರು ಉದಯ್ ಹಾಗೂ ಪತ್ನಿ ವಿನೂತಾ ಉದಯ್ ಮೈಸೂರು ಪೇಟ ತೊಡಿಸಿ ಮಡಿಲು ಅಕ್ಕಿ ತುಂಬಿಸಿ ಅಭಿನಂದಿಸಿದರು.
ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಮಹಿಳಾ ಘಟಕದ ಅಧ್ಯಕ್ಷೆ ವಿನುತಾ ಉದಯ್, ಕಾಲಭೈರವೇಶ್ವರ ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆದ ಯಜಮಾನ ಶಿವಲಿಂಗೇಗೌಡ, ಪದಾಧಿಕಾರಿಗಳಾದ ಚನ್ನೇಗೌಡ, ಪುಟ್ಟರಾಜು, ರಘು, ಲೋಕೇಶ್, ಶಿವಣ್ಣ, ಮರಿಲಿಂಗಮ್ಮ, ಜೋಗಿಗೌಡ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net