ಮಂಡ್ಯ:ಹಿಂದುಳಿದ ಸಮುದಾಯ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಇದಕ್ಕೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಆಯೋಜಿಸಿದ್ದ ಸವಿತಾ ಮಹರ್ಷಿ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಸವಿತಾ ಮಹರ್ಷಿ ಸಮಾಜದ ಉದ್ದಾರಕ್ಕಾಗಿ ಅಪಾರ ಜ್ಞಾನವನ್ನು ರೂಡಿಸಿಕೊಂಡು ಪಸರಿಸುವ ಮೂಲಕ ಬೆಳಕಾದವರು. ಅವರ ಆದರ್ಶಗಳನ್ನು ಮೌಲ್ಯಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಪೌರಾಣಿಕ ವ್ಯಕ್ತಿಯಾಗಿ ದೇವತಾ ಪುರುಷನಾಗಿ ಸಮಾಜಕ್ಕೆ ನೀಡಿರುವ ಕೊಡುಗೆಗಳು ಮತ್ತು ಸಂದೇಶಗಳು ಅಪಾರ. ದೇಶದ ಸಂಸ್ಕೃತಿಗೆ ಸಾಮ ವೇದವನ್ನು ಬರೆದವರು. ಗಾಯತ್ರಿ ಮಂತ್ರವನ್ನು ಉಪದೇಶ ಮಾಡಿದವರು. ಜ್ಞಾನದ ಮೂಲಕ ಮಾತ್ರ ಸಾಧನೆ ಮಾಡಬಹುದು. ಸವಿತಾ ಮಹರ್ಷಿ ಸಮುದಾಯದವರು ಕಾಯಕ ಯೋಗಿಗಳು. ಸವಿತಾ ಸಮಾಜದ ಪ್ರತಿಯೊಬ್ಬರೂ ಕೂಡ ಕೌಶಲ ಮತ್ತು ಕಾಯಕವನ್ನು ಬಹಳ ನಿಷ್ಠೆ ಮತ್ತು ಪ್ರಾಮಾಣಿಕತೆ, ಸಮಾನತೆಯಿಂದ ಕಾರ್ಯವನ್ನು ನಿರ್ವಹಿಸುತ್ತಾರೆ. ಯಾವುದೇ ತಾರತಮ್ಯ ವಿಲ್ಲದೆ ಸೇವಾ ಮನೋಭಾವದಿಂದ, ತಾರತಮ್ಯ ರಹಿತವಾಗಿ ನಿಸ್ಕಲ್ಮಷ ಹೃದಯದಿಂದ ಕೆಲಸವನ್ನು ಮಾಡುತ್ತಾರೆ ಎಂದರು.
ಕಲೆ ಮತ್ತು ಕೌಶಲ್ಯ ಹೊಂದಿರುವವರಿಗೆ ಹೆಚ್ಚು ಉತ್ತೇಜನವನ್ನು ಕೊಡಬೇಕು. ಆಯುರ್ವೇದ ಗಿಡ ಮುಲಿಕೆಗಳಿಂದ ಔಷಧ ನೀಡಿ ರೋಗಗನ್ನು ಗುಣಪಡಿಸಿದ್ದಾರೆ. ಆದ್ದರಿಂದ ಹಿಂದಿನ ಪರಂಪರೆಯನ್ನು ಮತ್ತು ಸಂಪ್ರದಾಯವನ್ನು ಮುರಿಯಬಾರದು. ಮೌಢ್ಯ ಮತ್ತು ಮೂಢನಂಬಿಕೆಗಳನ್ನು ಹೋಗಲಾಡಿಸಿ ಅವರವರ ವೃತ್ತಿಯನ್ನು ಗೌರವಿಸಬೇಕು ಎಂದರು.
ಪಿಇಎಸ್ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕಿ ಎಂ.ಎಸ್.ಅನಿತಾ ಮಾತನಾಡಿ, ಸಮಾಜದ ಬದಲಾವಣೆಯು ಸವಿತಾ ಮಹರ್ಷಿ ಜಯಂತಿಯ ಆಶಯ. ಜಾತಿ, ವರ್ಗ, ಧರ್ಮ ಲಿಂಗ ತಾರತಮ್ಯವನ್ನು ಸಹಿಷ್ಣುತೆಯ ಸಮಾನತೆಯ ನಿರ್ಮಾಣ ಮಾಡಲು ಸವಿತಾ ಮಹರ್ಷಿ ಆಚರಣೆ ಮೂಲಕ ಸಮಾಸಮಾಜದ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕು. ಪುರಾಣ ಪುರುಷ ನಮ್ಮ ಸಮುದಾಯದ ಮೂಲ ಪುರುಷ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ಸಮುದಾಯದ ಮುಖಂಡರಾದ ಕೆಂಪರಾಜು, ಸುರೇಶ, ಮಂಜುನಾಥ್, ಸಂದೇಶ್, ಜಗದೀಶ್, ರಾಮಲಿಂಗಯ್ಯ ಇತರರಿದ್ದರು.