ಬೊಪ್ಪಸಮುದ್ರ ಗ್ರಾಮದಲ್ಲಿ ಮಹೇಶ್ವರ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಎಸ್.ಜಾನಕಿ ಅವರ ಸವಿನನಪಿನಲ್ಲಿ ಏರ್ಪಡಿಸಿದ್ದ ಜಾನಪದ ಕಲೆ ಕಲಿಸಿ ಸರ್ಕಾರಿ ಶಾಲೆ ಉಳಿಸಿ ಕಾರ್ಯಕ್ರಮವನ್ನು ಪೊಲೀಸ್ ಇನ್ಸ್‌ಪೆಕ್ಟರ್ ಜಿ.ಎಸ್ ಅನಿಲ್‌ಕುಮಾರ್ ಉದ್ಘಾಟಿಸಿದರು. ಡಾ. ಮಳವಳ್ಳಿ ಮಹದೇವಸ್ವಾಮಿ, ಜಿ.ಎಸ್. ಅನಿಲ್ ಕುಮಾರ್ ಇತರರರು ಇದ್ದರು.
ಕೆ.ಎಂ.ದೊಡ್ಡಿ: ನಾಡಿನ ಸಂಸ್ಕೃತಿಯ ಮೂಲ ಬೇರಾದ ಜಾನಪದ ಮತ್ತು ಸರ್ಕಾರಿ ಶಾಲೆಗಳನ್ನು ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಜಿ.ಎಸ್. ಅನಿಲ್‌ಕುಮಾರ್ ತಿಳಿಸಿದರು.
ಸಮೀಪದ ಬೊಪ್ಪಸಮುದ್ರ ಗ್ರಾಮದಲ್ಲಿ ಮಹೇಶ್ವರ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಎಸ್.ಜಾನಕಿ ಅವರ ಸವಿನನಪಿನಲ್ಲಿ ಏರ್ಪಡಿಸಿದ್ದ ಜಾನಪದ ಕಲೆ ಕಲಿಸಿ ಸರ್ಕಾರಿ ಶಾಲೆ ಉಳಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಾನಪದ ಕಲೆಗಳು ನಮ್ಮ ನಾಡಿನ ಸೊಗಡು. ಇವು ಜೀವನಕ್ಕೆ ಬೇಕಾದ ನೀತಿಗಳು, ಮಾನವೀಯ ಮೌಲ್ಯಗಳನ್ನು ತಿಳಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಯಾವುದೇ ತಾರತಮ್ಯವಿಲ್ಲದೇ ಪ್ರತಿ ಮಗುವಿಗೂ ಉತ್ತಮ ಶಿಕ್ಷಣ ನೀಡುವ ಕಾರ್ಯವನ್ನು ಸರ್ಕಾರಿ ಶಾಲೆಗಳು ಮಾಡುತ್ತಿವೆ. ಹೀಗಾಗಿ ಜಾನಪದ ಮತ್ತು ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಸರ್ಕಾರಿ ಶಾಲೆಯಲ್ಲಿ ಓದಿದ ಸಹಸ್ರಾರು ಜನ ಇಂದು ಉನ್ನತ ಹುದ್ದೆಗಳಲ್ಲಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಉತ್ತಮ ಪ್ರತಿಭೆ ಇದ್ದು, ಕೀಳರಿಮೆ ಬಿಟ್ಟು ಸಾಧನೆಯತ್ತ ಮುಖ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂತಾರಾಷ್ಟ್ರೀಯ ಜಾನಪದ ಕಲಾವಿದ ಡಾ. ಮಳವಳ್ಳಿ ಮಹದೇವಸ್ವಾಮಿ ಮಾತನಾಡಿ, ನಮ್ಮ ಮಣ್ಣಿನ ಕಲೆ ಜಾನಪದ ಹಾಗೂ ಅರಿವಿನ ದೇಗುಲ ಸರ್ಕಾರಿ ಶಾಲೆ ಎರಡು ಒಟ್ಟಾಗಿ ಬೆಳೆದಾಗ ಮಾತ್ರ ನಾಡುನುಡಿಯ ನಿಜವಾದ ವಿಕಾಸ ಸಾಧ್ಯವಾಗುತ್ತದೆ ಎಂದರು.
ದಿ. ಎಸ್. ಜಾನಕಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜಿ.ಎಸ್. ಅನಿಲ್‌ಕುಮಾರ್ ಸೇರಿದಂತೆ ಇತರೆ ಸಾಧಕರನ್ನು ಗೌರವಿಸಲಾಯಿತು. ಡಾ. ಮಹದೇವಸ್ವಾಮಿ ಹಾಡಿದ ಜಾನಪದ ಗೀತೆಗಳು ಎಲ್ಲರ ಗಮನ ಸೆಳೆದವು.
ಗ್ರಾಮದ ಮುಖಂಡರಾದ ಶ್ರೀಕಂಠೇಗೌಡ, ಪುಟ್ಟಸ್ವಾಮಿ. ಬಿ.ಸಿ ಸಂತೋಷ್, ಎಸ್.ಲಿಂಗಯ್ಯ, ಪುಟ್ಟರಾಮು, ಚಂದ್ರಶೇಖರಯ್ಯ, ಚಿಕ್ಕಹೈದೇಗೌಡ, ಗೆಂಡಗಯ್ಯ, ಶಿವಕುಮಾರ್, ಸೋಮಚಾರಿ, ಎಸ್‌ಡಿಎಂಸಿ ಅಧ್ಯಕ್ಷ ಪುಟ್ಟಸ್ವಾಮಿ, ಕಲಾವಿದರಾದ ಪ್ರಕಾಶ್, ಮಹೇಂದ್ರ, ಸೋಮಜಮ್ಮ, ಮುಖ್ಯ ಶಿಕ್ಷಕರಾದ ಮಲ್ಲಿಕಾರ್ಜುನಸ್ವಾಮಿ, ಕರಿ ಹನುಮಯ್ಯ ಸೇರಿದಂತೆ ಇತರರು.