ಮುಜರಾಯಿ ಅಧಿಕಾರಿಗಳಿಂದಲೇ ಹಣ ದುರ್ಬಳಕೆ

ಕಿಕ್ಕೇರಿ ಹೋಬಳಿಯ ಸಾಸಲು ಗ್ರಾಮದ ಸೋಮೇಶ್ವರ ದೇಗುಲ ಮುಂದೆ ಗ್ರಾಮಸ್ಥರು ಪ್ರತಿಭಟಿಸಿದರು. ಮಹದೇವು, ಗುರುಮೂರ್ತಿ, ಸುರೇಶ್, ರವಿ, ಶ್ರೀನಾಥ್, ಮನು, ಜಗದೀಶ್, ಮಹೇಶ್, ಮೋಹನ್ ಮತ್ತಿತರರಿದ್ದರು.
ಕಿಕ್ಕೇರಿ ಹೋಬಳಿಯ ಸಾಸಲು ಗ್ರಾಮದ ಸೋಮೇಶ್ವರ ದೇಗುಲ ಮುಂದೆ ಗ್ರಾಮಸ್ಥರು ಪ್ರತಿಭಟಿಸಿದರು. ಮಹದೇವು, ಗುರುಮೂರ್ತಿ, ಸುರೇಶ್, ರವಿ, ಶ್ರೀನಾಥ್, ಮನು, ಜಗದೀಶ್, ಮಹೇಶ್, ಮೋಹನ್ ಮತ್ತಿತರರಿದ್ದರು.
Published on
ಕಿಕ್ಕೇರಿ: ಹೋಬಳಿಯ ಸಾಸಲು ಗ್ರಾಮದ ಶ್ರೀ ಸೋಮೇಶ್ವರ, ಶ್ರೀ ಶಂಭುಲಿಂಗೇಶ್ವರ ದೇಗುಲದಲ್ಲಿ ಭಕ್ತರ ಕಾಣಿಕೆ ಹಣವನ್ನು ಮುಜರಾಯಿ ಇಲಾಖೆ ಅಧಿಕಾರಿಗಳೇ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಕೆಲ ಗ್ರಾಮಸ್ಥರು ಪ್ರತಿಭಟಿಸಿದರು.
ಗ್ರಾಮದ ಸೋಮೇಶ್ವರ ದೇಗುಲದ ಮುಂದೆ ಸೋಮವಾರ ಸೇರಿದ ಗ್ರಾಮಸ್ಥರು, ಭಕ್ತರ ಲಕ್ಷಾಂತರ ರೂ.ಹಣ ದುರ್ಬಳಕೆ ಆಗಿರುವ ದಾಖಲೆಗಳನ್ನು ಪ್ರದರ್ಶಿಸಿದರು. ಭಕ್ತರು ಕಾಣಿಕೆ ರೂಪದಲ್ಲಿ ಹಣ, ಚಿನ್ನಾಭರಣವನ್ನು ಹುಂಡಿಗೆ ಹಾಕುತ್ತಾರೆ. ಭಕ್ತರಿಗೆ ಕನಿಷ್ಠ ಸೌಲಭ್ಯವನ್ನು ಇಲಾಖೆ ನೀಡುತ್ತಿಲ್ಲ. ಮುಜರಾಯಿ ಇಲಾಖೆ ಬ್ಯಾಂಕ್ ಖಾತೆಯಲ್ಲಿರುವ ಲಕ್ಷಾಂತರ ರೂ.ಗಳನ್ನು ಬೋಗಸ್ ಬಿಲ್ ತಯಾರಿಸಿಕೊಂಡು ದೇಗುಲದ ಖಜಾನೆ ಹಣವನ್ನು ಅಧಿಕಾರಿಗಳು ಲೂಟಿ ಮಾಡುತ್ತಿದ್ದಾರೆ. ಕೋವಿಡ್ ವೇಳೆ ಹಾಗೂ ರಥ ಹಳೆಯದಾದ ರಥ ನವೀಕರಣವಾಗದೆ ಜಾತ್ರೆ ನಡೆಯದಿದ್ದರೂ ಜಾತ್ರೆ ನೆಪದಲ್ಲಿ ಐದಾರು ವರ್ಷಗಳಿಂದ ಪ್ರತಿ ವರ್ಷ ಜಾತ್ರೆ ನಿರ್ವಹಣಾ ವೆಚ್ಚದ ನೆಪದಲ್ಲಿ ಸುಮಾರು 5ಲಕ್ಷಕ್ಕೂ ಹೆಚ್ಚು ಹಣವನ್ನು ಖರ್ಚು ತೋರಿಸಿದ್ದಾರೆ ಎಂದು ಕಿಡಿಕಾರಿದರು.
ಗ್ರಾಮ ಮುಖಂಡ ಮಹದೇವು ಮಾತನಾಡಿ, ದೇಗುಲ ಜೀರ್ಣೋದ್ಧಾರಕ್ಕಾಗಿ 2ವರ್ಷಗಳ ಹಿಂದೆ ಕಾಮಗಾರಿ ಆರಂಭವಾಗಿ 2 ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ. ಭಕ್ತರಿಗೆ ದೇವರ ಪೂಜೆಗೆ ಅಡಚಣೆಯಾಗದಂತೆ ಬಾಲಾಲಯ ನಿರ್ಮಿಸಬೇಕಿತ್ತು. ಗ್ರಾಮಸ್ಥರು ಭಕ್ತರ ಸಹಕಾರದಲ್ಲಿ ಮುಜರಾಯಿ ಇಲಾಖೆ ಹಣ ಬಳಸದೆ ಒಂದು ಸಣ್ಣ ಕೊಠಡಿ ನಿರ್ಮಿಸಿ ದೇವರಿಗೆ ಕಳಾಕರ್ಷಣೆಯನ್ನು ಮಾಡಿದ್ದಾರೆ. ಆದರೆ, ಬಾಲಾಲಯವನ್ನು ಮುಜರಾಯಿ ಇಲಾಖೆಯೇ ನಿರ್ಮಿಸಿದೆ ಎಂದು ಪಾಯ, ಮಣ್ಣು ತೆಗೆಯಲು, ವಿದ್ಯುತ್ ಸಂಪರ್ಕಕ್ಕಾಗಿ 5ಲಕ್ಷ ರೂ., ಕಳಾಕರ್ಷಣೆಗೆ 2ಲಕ್ಷ ರೂ.ಬಿಡುಗಡೆ ಮಾಡಿಕೊಂಡಿದ್ದಾರೆ. ನಕಲಿ ಬಿಲ್ ತಯಾರಿಸಿಕೊಂಡು ಹಣ ಪಡೆದಿದ್ದಾರೆ. ದೇಗುಲ ನವೀಕರಣವಾಗುತ್ತಿದ್ದರೂ ಕಾರ್ತಿಕ ಮಾಸದ ವಿದ್ಯುತ್ ದೀಪಾಲಂಕಾರ ಎಂದು ಲಕ್ಷಾಂತರ ರೂ.ಹಣ ಡ್ರಾ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಕರವೇ ಜಿಲ್ಲಾ ಉಪಾಧ್ಯಕ್ಷ ಸಾಸಲು ಗುರುಮೂರ್ತಿ ಮಾತನಾಡಿ, ದೇಗುಲ ದುರಸ್ತಿ ನಡೆಯುತ್ತಿದ್ದು ಕಾರ್ತಿಕ ಮಾಸದಲ್ಲಿ ಯಾವುದೇ ದೀಪಾಲಂಕಾರ ನಡೆದಿಲ್ಲ. ಆದರೂ, ವಿದ್ಯುತ್ ದೀಪ ಅಲಂಕಾರ, ನೆರಳಿನ ವ್ಯವಸ್ಥೆ, ಭಕ್ತರ ಸರತಿ ದರ್ಶನಕ್ಕಾಗಿ ಸಾರ್ವೆ ನಿರ್ಮಾಣಕ್ಕೆ 1 ಲಕ್ಕ ರೂ.ಮಿಗಿಲಾಗಿ ಹಣ ಬಿಡುಗಡೆ ಮಾಡಿಕೊಂಡಿದ್ದಾರೆ. ದೇಗುಲದ ಇತಿಹಾಸದಲ್ಲೇ ವರಮಹಾಲಕ್ಷ್ಮೀ ಹಬ್ಬ, ಸ್ವಾತಂತ್ರ್ಯ ದಿನಾಚರಣೆ ಮಾಡಿಲ್ಲ. ಆದರೆ, ವರಮಹಾಲಕ್ಷ್ಮೀ ಹಬ್ಬಕ್ಕೆ ಹಾಗೂ ಸ್ವಾತಂತ್ರ್ಯ ದಿನಕ್ಕಾಗಿ ವಿದ್ಯುತ್ ದೀಪಾಲಂಕರ ಎಂದು 25 ಸಾವಿರಕ್ಕೂ ಹೆಚ್ಚು ಲೆಕ್ಕ ತೋರಿಸಲಾಗಿದೆ. ಸೋಮೇಶ್ವರ, ಶಂಭುಲಿಂಗೇಶ್ವರ 2 ದೇಗುಲ ಸೇರಿ ಒಂದೇ ರಸೀದಿ ಇದ್ದರೂ, ದೇವಸ್ಥಾನದ ರಸೀದಿ ಮುದ್ರಣಕ್ಕಾಗಿ ಸೋಮೇಶ್ವರ, ಶಂಭುಲಿಂಗೇಶ್ವರ ಹೆಸರಿನಲ್ಲಿ ಪ್ರತ್ಯೇಕವಾಗಿ ಹಣ ದುರ್ಬಳಕೆಯಾಗಿದೆ ಎಂದು ದಾಖಲೆ ಪ್ರದರ್ಶಿಸಿದರು.
ಗ್ರಾಮ ಮುಖಂಡ ಸುರೇಶ್ ಮಾತನಾಡಿ, ಪೂಜಾ ಸ್ಟೋರ್ಸ್‌ ಹೆಸರಲ್ಲಿ 12ಲಕ್ಷ ರೂ., ಶಿವಕುಮಾರ್ ಹೆಸರಿಗೆ 5 ಲಕ್ಷ ರೂ. ಬಿಡುಗಡೆ, ದೇಗುಲದ ಒಂದೇ ರಸ್ತೆ ಕಾಮಗಾರಿಗೆ ದೇಗುಲದ ಬ್ಯಾಂಕ್ ಖಾತೆ ಹಾಗೂ ನರೇಗಾ ಯೋಜನೆಯಲ್ಲಿ ಲಕ್ಷಗಟ್ಟಲೆ ಹಣ ಬಿಡುಗಡೆಯಾಗಿದೆ. ಯಾವುದಕ್ಕೂ ಕ್ರಿಯಾ ಯೋಜನೆ, ಅನುಮೋದನೆ, ಜಿಎಸ್‌ಟಿ ಬಿಲ್ ಇಲ್ಲವಾಗಿದೆ. ಎಲ್ಲವೂ ಬೋಗಸ್ ಆಗಿದೆ. ಆರ್‌ಟಿಐ ಮೂಲಕ ಮಾಹಿತಿ ಕೇಳಲಾಗಿದ್ದು ಎಲ್ಲ ದಾಖಲೆಗಳನ್ನು ನೀಡಲು ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಅವ್ಯವಹಾರದ ಸಮಗ್ರ ತನಿಖೆ ಆಗಲೇಬೇಕು. ಇಲ್ಲವಾದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಸುರೇಶ್, ರವಿ, ಶ್ರೀನಾಥ್, ಮನು, ಜಗದೀಶ್, ಮಹೇಶ್, ಮೋಹನ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net