ಪರಿಸರ ರಕ್ಷಣೆಗೆ ಎಲ್ಲರೂ ಸ್ಪಂದಿಸಲಿ: ವಲಯ ಅರಣ್ಯಾಧಿಕಾರಿ ಶೈಲಜಾ ಮನವಿ

ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯ ಮಮತೆಯ ಮಡಿಲು ಆವರಣದಲ್ಲಿ ವಿಶ್ವ ಭೂ ದಿನದ ಅಂಗವಾಗಿ ಸಸಿ ವಿತರಿಸಲಾಯಿತು.
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯ ಮಮತೆಯ ಮಡಿಲು ಆವರಣದಲ್ಲಿ ವಿಶ್ವ ಭೂ ದಿನದ ಅಂಗವಾಗಿ ಸಸಿ ವಿತರಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಮಮತೆಯ ಮಡಿಲು ಆವರಣದಲ್ಲಿ ಆಚರಣೆ
  • ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಆಯೋಜನೆ
ಮಂಡ್ಯ: ಪರಿಸರ ಸಂರಕ್ಷಣೆಗೆ ಸಾರ್ವಜನಿಕರು ಸಾಮೂಹಿಕವಾಗಿ ಸ್ಪಂದಿಸಬೇಕು ಎಂದು ವಲಯ ಅರಣ್ಯಾಧಿಕಾರಿ ಶೈಲಜಾ ಮನವಿ ಮಾಡಿದರು.
ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ವತಿಯಿಂದ ವಿಶ್ವ ಭೂ ದಿನದ ಅಂಗವಾಗಿ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯ ಮಮತೆಯ ಮಡಿಲು ಆವರಣದಲ್ಲಿ ಆಯೋಜಿಸಿದ್ದ ಸಸಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವ ವೈವಿಧ್ಯತೆಯ ಉಳಿವಿಗೆ ಪ್ರಕೃತಿಯಲ್ಲಿ ಸಾಕಷ್ಟು ಹಸಿರು ಹೊದಿಸುವ ಕಾಯಕವನ್ನು ಜನರು ಮಾಡಬೇಕಾಗಿದೆ. ಆ ಮೂಲಕ ಜಾಗತಿಕ ತಾಪಮಾನವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮಹಿಳೆಯರು ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಗಟ್ಟುವಲ್ಲಿ ಬಹುಮುಖ್ಯವಾದ ಪಾತ್ರವನ್ನು ವಹಿಸಬೇಕು. ಆ ಮೂಲಕ ಸುಸ್ಥಿರ ಜೀವನಶೈಲಿಯನ್ನು ಹೊಂದಬೇಕು. ಭೂಮಿಯನ್ನು ಸಂರಕ್ಷಿಸಲು ಬಹುಮುಖ್ಯವಾಗಿ ಪ್ಲಾಸ್ಟಿಕ್ ಕಡಿಮೆ ಮಾಡಬೇಕು. ಹೆಚ್ಚು ಮರ ಗಿಡಗಳನ್ನು ಬೆಳೆಸಬೇಕು. ವಿದ್ಯುತ್ ಮತ್ತು ನೀರನ್ನು ಮಿತವಾಗಿ ಬಳಸುವ ಕಾಯಕವನ್ನು ಮಾಡಬೇಕು. ಸರ್ಕಾರಿ ಅಥವಾ ಬೇರೆ ಜಾಗಗಳಲ್ಲಿ ಸಸಿ ನೆಡುವ ಹವ್ಯಾಸವನ್ನು ಮಹಿಳೆಯರು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿ, ನವೀಕರಿಸಬಹುದಾದ ಇಂಧನ ಉತ್ಪಾದನೆಯನ್ನು ಹೆಚ್ಚಳ ಮಾಡಿದರೆ ಪ್ರಕೃತಿಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಬಹುದಾಗಿದೆ. ಮಹಿಳೆಯರು ಮತ್ತು ಮಕ್ಕಳ ಮುಖಾಂತರ ಪರಿಸರ ಸಂರಕ್ಷಣಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ.ಹೂಗಾರ್, ಕೆಡಿಪಿ ಸದಸ್ಯ ಸಿ.ಎಂ.ದ್ಯಾವಪ್ಪ, ಸಾಮಾಜಿಕ ಕಾರ್ಯಕರ್ತ ಕೆ.ಪಿ. ಗುಣಶೇಖರ್, ಉಪ ವಲಯ ಅರಣ್ಯಾಧಿಕಾರಿ ಕುಮಾರ್ ಉಪಸ್ಥಿತರಿದ್ದರು. ಇದೇ ವೇಳೆ ಸಮುದಾಯ ಆರೋಗ್ಯ ವಿಭಾಗದಿಂದ ನಿರ್ಮಿಸುತ್ತಿರುವ ಔಷಧ ವನ, ಜಿಲ್ಲಾ ರಕ್ತನಿಧಿ ಕೇಂದ್ರಕ್ಕೆ ಸಸಿ ವಿತರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net