ಅಟ್ಟುಣ್ಣುವ ಜಾತ್ರೆ ಸಂಪನ್ನ: ಸಂತೆಕಸಲಗೆರೆಯಲ್ಲಿ ಧಾರ್ಮಿಕ ಕೈಂಕರ್ಯ

ಮಂಡ್ಯ ತಾಲೂಕು ಸಂತೆಕಸಲಗೆರೆ ಗ್ರಾಮದ ಭೂಮಿ ಸಿದ್ದೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಪೂಜೆ ಸಲ್ಲಿಸಿದರು.
ಮಂಡ್ಯ ತಾಲೂಕು ಸಂತೆಕಸಲಗೆರೆ ಗ್ರಾಮದ ಭೂಮಿ ಸಿದ್ದೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಪೂಜೆ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಮೈಸೂರು-ಮರಾಠ ನಡುವಿನ ಯುದ್ಧದ ಪ್ರತೀಕ
  • ಉಂಡ ಎಲೆಗಳನ್ನು ಅಲ್ಲೇ ಬಿಡಬೇಕು
  • ರಾತ್ರಿ ಯಾರೊಬ್ಬರೂ ಸುಳಿಯಲ್ಲ
ಮಂಡ್ಯ: ಮೈಸೂರು-ಮರಾಠ ನಡುವಿನ ಯುದ್ಧದ ಪ್ರತೀಕವೆಂಬಂತೆ ಇರುವ ಸ್ಥಳದಲ್ಲಿ ಉದ್ಭವಿಸಿದ ತಾಲೂಕಿನ ಸಂತೆಕಸಲಗೆರೆ ಗ್ರಾಮದ ಹೊರವಲಯದಲ್ಲಿರುವ ಭೂಮಿ ಸಿದ್ದೇಶ್ವರಸ್ವಾಮಿಯ ಅಟ್ಟುಣ್ಣುವ ಜಾತ್ರೆ ವಿಜೃಂಭಣೆಯಿಂದ ನಡೆಯಿತು.
ಭೂಮಿಸಿದ್ದೇಶ್ವರಸ್ವಾಮಿ ದೇವರ ದರ್ಶನ ಪಡೆದ ಸಹಸ್ರಾರು ಜನರು ಅಟ್ಟುಣ್ಣುವ ಜಾತ್ರೆಯನ್ನು ಅದ್ದೂರಿಯಾಗಿ ನಡೆಸಿದರು. ಅಟ್ಟುಣ್ಣುವ ಜಾತ್ರೆ ಅಂಗವಾಗಿ ಬೆಳಗ್ಗೆಯೇ ದೇವರಿಗೆ ಹೋಮ, ಹವನ, ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ಪೂಜಾ ವಿಧಿ-ವಿಧಾನಗಳನ್ನು ಅನುಸರಿಸಿ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು.
ಪ್ರತಿ ವರ್ಷದಂತೆ ಈ ವರ್ಷವೂ ಸಂತೆಕಸಲಗೆರೆ, ಹನಿಯಂಬಾಡಿ, ಕಾರಸವಾಡಿ, ಕೊತ್ತತ್ತಿ, ಮೊತ್ತಹಳ್ಳಿ, ಮಂಗಲ, ಬೇವಿನಹಳ್ಳಿ, ಹುಲ್ಕೆರೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರು ಈ ಜಾತ್ರೆಯಲ್ಲಿ ಭಾಗವಹಿಸಿದ್ದರು. ಹೊರ ಜಿಲ್ಲೆಗಳಿಂದ ನೂರಾರು ಸಂಖ್ಯೆಯ ಶ್ರೆ ಭೂಮಿಸಿದ್ದೇಶ್ವರ ಸ್ವಾಮಿಯ ಒಕ್ಕಲಿನವರು ಜಾತ್ರೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಯುಗಾದಿ ಹಬ್ಬದ ನಂತರ ನಡೆಯುವ ಈ ಜಾತ್ರೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಗುರುವಾರ ಸಂಜೆಯೇ ಬಾಯಿ ಬೀಗ ಆಚರಣೆ ನಡೆಯಿತು. ಮರುದಿನ ದೇವಾಲಯ ಆವರಣದಲ್ಲಿ ಸಾವಿರಾರು ಜನರು ಸೇರಿ ದೇವರ ದರ್ಶನ ಪಡೆದರು. ಬಳಿಕ ಭಕ್ತರು ಪಾನಕ, ಮಜ್ಜಿಗೆ ಹಾಗೂ ರಸಾಯನ ವಿತರಿಸಿದರು. ಜಾತ್ರೆಗೆ ಬಂದ ಮಹಿಳೆಯರು ಅಡುಗೆ ಸಾಮಗ್ರಿಗಳನ್ನು ಬುಟ್ಟಿಯಲ್ಲಿ ತಂದು ದೇವರ ಮುಂದಿಟ್ಟು ಪೂಜೆ ಸಲ್ಲಿಸಿದರು. ನಂತರ ದೇವಾಲಯದ ಹೊರ ಆವರಣಕ್ಕೆ ತೆರಳಿ ಅಡುಗೆ ಮಾಡಿದರು. ಸಸ್ಯಾಹಾರದ ಜತೆಗೆ ಮಾಂಸಾಹಾರವನ್ನೂ ತಯಾರಿಸಿ ಬಂಧು-ಮಿತ್ರರು, ನೆಂಟರು, ಸ್ನೇಹಿತರನ್ನು ಆಹ್ವಾನಿಸಿ ಊಟ ಬಡಿಸಿದರು.
ಉಂಡ ಎಲೆಗಳನ್ನು ಅಲ್ಲೇ ಬಿಡಬೇಕು  
ಈ ಜಾತ್ರೆಯಲ್ಲಿ ಮಾಂಸಾಹಾರವನ್ನು ದೇವರಿಗೆ ಅರ್ಪಿಸುವುದಿಲ್ಲ. ದೇವಾಲಯದ ಹೊರ ಆವರಣದಲ್ಲಿ ಮಾಂಸಾಹಾರ ತಯಾರಿಸಲಾಗುತ್ತದೆ. ದೇವರಿಗೆ ಪೂಜೆ ಸಲ್ಲಿಸಿ ತಂದ ತೀರ್ಥವನ್ನು ಪ್ರೋಕ್ಷಣೆ ಮಾಡಿ ಊಟ ಬಡಿಸುವ ಮೂಲಕ ಸಂಪ್ರದಾಯ ಆಚರಣೆ ಮಾಡಲಾಗುತ್ತದೆ. ಜಾತ್ರೆಗೆ ಬಂದ ಸಹಸ್ರಾರು ಸಂಖ್ಯೆಯ ಜನರು ಮಾಂಸಾಹಾರ ಸೇವಿಸಿದರು. ಊಟ ಮಾಡಿದ ನಂತರ ಎಲೆಗಳನ್ನು ತೆರವುಗೊಳಿಸದೆ ಉಂಡ ಸ್ಥಳದಲ್ಲಿಯೇ ಬಿಡುವುದು ಆಚರಣೆಯಾಗಿದೆ. ರಾತ್ರಿ ಸುಮಾರು 8 ಗಂಟೆಯ ವೇಳೆಗೆ ಜಾತ್ರೆ ಸಂಪನ್ನಗೊಂಡಿತು.
ರಾತ್ರಿ ಯಾರೊಬ್ಬರೂ ಸುಳಿಯಲ್ಲ 
ಇಲ್ಲಿನ ವಿಶೇಷವೆಂದರೆ ಜಾತ್ರೆ ಮುಗಿದ ಬಳಿಕ ರಾತ್ರಿ ವೇಳೆ ದೇವರ ಸನ್ನಿಧಿ ಅಂಗಳದಲ್ಲಿ ಯಾರೊಬ್ಬರೂ ಸುಳಿಯುವುದಿಲ್ಲ. ಬೆಳಗ್ಗೆ ವೇಳೆಗೆ ಜನರು ಉಂಡ ಎಲೆಗಳು ಒಂದೆಡೆ ಸೇರಿರುತ್ತವೆ ಎಂಬ ಪ್ರತೀತಿ ಇದೆ.  ಪ್ರತಿ ಗುರುವಾರ ಮತ್ತು ಭಾನುವಾರ ದೇವರಿಗೆ ವಿಶೇಷ ಪೂಜೆ ಇರುತ್ತದೆ. ಮಕ್ಕಳಿಲ್ಲದವರು, ಮದುವೆಯಾಗದವರು ಸೇವೆ ಮಾಡುವ ಮೂಲಕ ದೇವರಿಗೆ ಹರಕೆ ತೀರಿಸುವರು.
ಭೂಮಿ ಸಿದ್ದೇಶ್ವರಸ್ವಾಮಿ ಟ್ರಸ್ಟ್ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛತೆ, ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ, ಪೊಲೀಸ್ ಬಂದೋಬಸ್ತ್ ಸೇರಿದಂತೆ ವಿವಿಧ ಮೂಲಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಟ್ರಸ್ಟ್ ಅಧ್ಯಕ್ಷ ಕೆ. ಸಿದ್ದರಾಮು ಮಾತನಾಡಿ, ದೇವಾಲಯದ ರಾಜಗೋಪುರ ನಿರ್ಮಾಣದ ಕಾರ‌್ಯ ಕೈಗೆತ್ತಿಕೊಂಡಿದ್ದು, ಭಕ್ತರು ಧನಸಹಾಯ ಮಾಡುವಂತೆ ಮನವಿ ಮಾಡಿದರು.
ಟ್ರಸ್ಟ್‌ನ ಕಾರ್ಯದರ್ಶಿ ಚನ್ನಸಿದ್ದೇಗೌಡ, ಉಪಾಧ್ಯಕ್ಷ ಎಸ್. ಕೆಂಪೇಗೌಡ, ಖಜಾಂಚಿ ಟಿ.ಕೆ. ಜಗದೀಶ್, ಜಂಟಿ ಕಾರ‌್ಯದರ್ಶಿ ಬಸವರಾಜು, ಟ್ರಸ್ಟಿಗಳಾದ  ಚೇತನ್‌ಕುಮಾರ್, ಶಿವರಾಜು, ಕೆಂಪೇಗೌಡ, ಮಾಜಿ ಕಾರ್ಯದರ್ಶಿ ಕೆ.ಸಿ.ಶ್ರೆನಿವಾಸ್, ಸಂತೆಕಸಲಗೆರೆ ಗ್ರಾಪಂ ಮಾಜಿ ಅಧ್ಯಕ್ಷ ರುದ್ರಪ್ಪ  ಸೇರಿದಂತೆ ಹಲವರು ಸ್ಥಳದಲ್ಲಿ ಹಾಜರಿದ್ದು, ಜಾತ್ರೆಯ ವ್ಯವಸ್ಥೆಗಳು ಸುಗಮವಾಗಿ ನಡೆಯುವುದಕ್ಕೆ ನೆರವಾದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net