ಸಮ ಸಮಾಜದ ಕನಸು ಬಿತ್ತಿದ ಸರ್ವಜ್ಞ: ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ ಹೇಳಿಕೆ

ಮಂಡ್ಯ ಗಾಂಧಿಭವನದಲ್ಲಿ ಆಯೋಜಿಸಿದ್ದ ಸಂತ ಕವಿ ಸರ್ವಜ್ಞ ಜಯಂತ್ಯುತ್ಸವದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.
ಮಂಡ್ಯ ಗಾಂಧಿಭವನದಲ್ಲಿ ಆಯೋಜಿಸಿದ್ದ ಸಂತ ಕವಿ ಸರ್ವಜ್ಞ ಜಯಂತ್ಯುತ್ಸವದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ನಗರದ ಗಾಂಧಿಭವನದಲ್ಲಿ ಜಯಂತ್ಯುತ್ಸವ
  • ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ
ಮಂಡ್ಯ: ಸಮ ಸಮಾಜದ ಕನಸು ಬಿತ್ತಿದವರು ಸಂತ ಕವಿ ಸರ್ವಜ್ಞ. ಅವರ ಆದರ್ಶ, ಮೌಲ್ಯಗಳನ್ನು ಯುವಜನತೆ ಅನುಸರಿಸಬೇಕು ಎಂದು ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ ಹೇಳಿದರು.
ನಗರದ ಗಾಂಧಿಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಸಂತ ಕವಿ ಸರ್ವಜ್ಞ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಸಮಾನ ಮನಸ್ಕರು ಹೆಚ್ಚಬೇಕು ಎಂದು ಅಭಿಪ್ರಾಯಪಟ್ಟರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ಸಂತ ಕವಿ ಕೇವಲ ಒಂದು ಸಮುದಾಯದ ಆಸ್ತಿಯಲ್ಲ, ಕನ್ನಡದ ಆಸ್ತಿ. ಸರ್ವಜ್ಞರ ವಚನಗಳನ್ನು ಯುವ ಜನತೆಗೆ ತಲುಪಿಸುವ ಕೆಲಸವಾಗಬೇಕಿದೆ ಎಂದು ಹೇಳಿದರು.
ಮೈಸೂರು ಕ್ರೆಡಿಟ್ ಐ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಂ.ಪಿ.ವರ್ಷ ಮಾತನಾಡಿ, ಸರ್ವಜ್ಞ ಎಂದರೆ ಸರ್ವವನ್ನೂ ತಿಳಿದವನು ಎಂದರ್ಥ. ಅವರು ಹುಟ್ಟುತ್ತಲೇ ಎಲ್ಲವನ್ನೂ ತಿಳಿದವರಲ್ಲ. ಪ್ರತಿಯೊಬ್ಬರಿಂದ ಒಂದೊಂದು ಕಲಿತು ಸರ್ವಜ್ಞರಾದವರು. ಕಲಿಕೆಗೆ ಮಿತಿ ಇಲ್ಲ, ಕಲಿಕೆ ನಿರಂತರ ಪ್ರಕ್ರಿಯೆ ಎಂದು ಸರ್ವಜ್ಞ ಸಾರಿದ್ದಾರೆ ಎಂದರು.
ನಿಜವಾದ ಮಣ್ಣಿನ ಮಗ ಸರ್ವಜ್ಞ. ತಮ್ಮ ತತ್ವ-ಆದರ್ಶ, ಸಿದ್ಧಾಂತಗಳ ಮೂಲಕ ಸಮಾಜವನ್ನು ತಿದ್ದಿದ್ದವರು. ತಮಿಳರು ತಿರುವಳ್ಳುವರ್ ಹಾಗೂ ತೆಲುಗಿನವರು ವೇಮನ ಅವರಿಗೆ ದೇವರ ಸ್ಥಾನ ನೀಡಿದ್ದಾರೆ. 500 ವರ್ಷಗಳ ಹಿಂದೆಯೇ ತಮ್ಮ ವಚನಗಳ ಮೂಲಕ ಇವತ್ತಿನ ಸಮಾಜದ ಕುರಿತು ಬರೆದಿದ್ದಾರೆ. ಅವರು ನಮ್ಮ ಕನ್ನಡಿಗರು ಎಂಬುದು ನಮ್ಮ ಹೆಮ್ಮೆ. ಸರ್ವಜ್ಞ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಅವರ ಆದರ್ಶ, ವಚನಗಳು ಎಲ್ಲರಿಗೂ ಅನುಕರಣೀಯ. ಸರ್ವಜ್ಞ ಸಮಾಜದ ಪ್ರತಿ ಒಬ್ಬ ವ್ಯಕ್ತಿಗೂ ಆದರ್ಶ, 1520ರಲ್ಲಿ ಹಾವೇರಿ ಜಿಲ್ಲೆಯ ಅಂಬಲುರು ಮಾಸೂರಿನಲ್ಲಿ ಸಂತ ಕವಿ ಸರ್ವಜ್ಞ ಜನಿಸಿದರು. 2009ರಲ್ಲಿ ತಮಿಳುನಾಡಿನಲ್ಲಿ ಸಂತ ಸರ್ವಜ್ಞರ ಪ್ರತಿಮೆಯನ್ನು ಅಂದಿನ ಮುಖ್ಯಮಂತ್ರಿ ಕರುಣಾನಿಧಿ ಹಾಗೂ ಯಡಿಯೂರಪ್ಪ ಅವರು ಸ್ಥಾಪಿಸಿದರು ಎಂದು ತಿಳಿಸಿದರು.
ಸರ್ವಜ್ಞ ಬದುಕಿದ್ದು ಅಲ್ಪ ಕಾಲ. ಆದರೂ ಸುಮಾರು 7 ಸಾವಿರಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಸರ್ವಜ್ಞ ಎಲ್ಲರನ್ನೂ ಸ್ನೇಹ ಪೂರ್ವಕವಾಗಿ ಕಾಣಬೇಕು, ಪರಸ್ಪರ ಗೌರವದಿಂದ ಕಾಣಬೇಕು ಎಂಬ ಸಂದೇಶವನ್ನು ತಮ್ಮ ವಚನಗಳ ಮೂಲಕ ನೀಡಿದ್ದಾರೆ ಎಂದು ಹೇಳಿದರು.
ಜಿಲ್ಲಾ ಕುಂಬಾರರ ಜಾಗೃತಿ ಸಂಘದ ಅಧ್ಯಕ್ಷ ಕೃಷ್ಣ ಮಾತನಾಡಿ, ಜಯಂತಿಗಳಲ್ಲಿ ಜನರ ಆಸಕ್ತಿ ಕಡಿಮೆಯಾಗಿದೆ. ಎಲ್ಲ ಸಂಘ ಸಂಸ್ಥೆಗಳ ಮುಖಂಡರು ಒಗ್ಗೂಡಿ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಸರ್ವಜ್ಞ ಅವರ ತತ್ವ ಆದರ್ಶಗಳನ್ನು ನಾವೆಲ್ಲರೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ಜೈ ಕರ್ನಾಟಕ ಪರಿಷತ್ ಅಧ್ಯಕ್ಷ ನಾರಾಯಣ, ಪಶ್ಚಿಮ ವಲಯದ ಆರಕ್ಷಕ ಉಪನಿರೀಕ್ಷಕ ರಂಗಪ್ಪ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ ಇತರರಿದ್ದರು. ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಪೌರಕಾರ್ಮಿಕರಿಗೆ ಸಮವಸ್ತ್ರ ವಿತರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net