ಗ್ರಾಮೀಣ ವಿದ್ಯಾರ್ಥಿಗಳು ಹಿಂಜರಿಕೆಯಿಂದ ಹೊರಬನ್ನಿ

ಕೆ.ಆರ್.ಪೇಟೆ ಪಟ್ಟಣದ ಕಲ್ಪತರು ವಿದ್ಯಾಸಂಸ್ಥೆಯಲ್ಲಿ ಆರಂಭಿಸಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಂಡವಪುರ ಎಸಿ ಡಾ.ಕೆ.ಆರ್.ಶ್ರೀನಿವಾಸ್ ಅವರಿಗೆ ಪುಸ್ತಕ ನೀಡಿ ಸನ್ಮಾನಿಸಲಾಯಿತು.
ಕೆ.ಆರ್.ಪೇಟೆ ಪಟ್ಟಣದ ಕಲ್ಪತರು ವಿದ್ಯಾಸಂಸ್ಥೆಯಲ್ಲಿ ಆರಂಭಿಸಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಂಡವಪುರ ಎಸಿ ಡಾ.ಕೆ.ಆರ್.ಶ್ರೀನಿವಾಸ್ ಅವರಿಗೆ ಪುಸ್ತಕ ನೀಡಿ ಸನ್ಮಾನಿಸಲಾಯಿತು.
Published on
ಕೆ.ಆರ್.ಪೇಟೆ: ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇದೆ. ಆದರೆ ಸಾಧನಾ ಕ್ಷೇತ್ರದಲ್ಲಿ ಮುನ್ನಡೆಯಲು ಬೇಕಾದ ಆತ್ಮವಿಶ್ವಾಸದ ಕೊರತೆಯಿದೆ. ಗ್ರಾಮೀಣ ವಿದ್ಯಾರ್ಥಿಗಳು ತಮ್ಮ ಹಿಂಜರಿಕೆ ಗುಣದಿಂದ ಹೊರಬರಬೇಕು ಎಂದು ಪಾಂಡವಪುರ ಉಪವಿಭಾಗಾಧಿಕಾರಿ ಡಾ.ಕೆ.ಆರ್.ಶ್ರೀನಿವಾಸ ಸಲಹೆ ನೀಡಿದರು.
ಪಟ್ಟಣದ ಕಲ್ಪತರು ವಿದ್ಯಾಸಂಸ್ಥೆಯಲ್ಲಿ ಬೆಂಗಳೂರಿನ ಅಕ್ಕ ಐ.ಎ.ಎಸ್. ಅಕಾಡೆಮಿ, ದ ಸಿಟಿಜನ್ಸ್ ಆಫ್ ಇಂಡಿಯಾ ಕ್ವಾಲಿಟಿ ಎಜುಕೇಷನ್ ಟ್ರಸ್ಟ್ ಮತ್ತು ಕಲ್ಪತರು ಕಾಲೇಜು ಸಹಯೋಗದಲ್ಲಿ ಆರಂಭಿಸಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.
ಹಳ್ಳಿಯ ಮಕ್ಕಳಲ್ಲಿ ಹಿಂಜರಿಕೆ ಗುಣವಿದೆ. ಖಾಸಗಿ ಶಾಲೆಗಳಲ್ಲಿ ಕಲಿತವರ ಮುಂದೆ ನಾವು ನಿಲ್ಲಲು ಸಾಧ್ಯವಿಲ್ಲ, ನಾನು ಇಂಗ್ಲೀಷ್ ಕಲಿಕೆಯಲ್ಲಿ ಹಿಂದುಳಿದಿದ್ದೇನೆ ಎನ್ನುವ ಭಾವನೆ ಬಹುತೇಕರ ಮನದಲ್ಲಿದೆ. ಇದು ತೊಲಗಬೇಕು. ಕಲಿಕೆಯ ಹಂತದಲ್ಲಿಯೇ ಸಾಧನೆಯ ಕನಸು ಕಾಣಬೇಕು. ಧೈರ್ಯ ಮತ್ತು ಆತ್ಮ ವಿಶ್ವಾಸದ ಮೂಲಕ ಕನಸುಗಳನ್ನು ನನಸು ಮಾಡಿಕೊಳ್ಳಲು ಪ್ರಯತ್ನಿಸಬೇಕು. ಐಎಎಸ್, ಕೆಎಎಸ್ ನಂತಹ ಸಿವಿಲ್ ಸರ್ವೀಸ್ ಸೇವೆಗೆ ಸೇರುವುದರಿಂದ ನೀವು ಸಮಾಜಕ್ಕೆ ಉತ್ತಮವಾದುದನ್ನು ಕೊಡಲು ಸಾಧ್ಯ. ಗ್ರಾಮೀಣ ಮಕ್ಕಳಿಗೆ ರೈತ ಸಮುದಾಯದ ಕಷ್ಟ, ಸುಖಗಳ ಅರಿವಿದೆ. ರೈತರ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಿದರೆ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಗ್ರಾಮೀಣ ಮಕ್ಕಳು ತಮ್ಮಲ್ಲಿನ ಕೀಳರಿಮೆ ಗುಣದಿಂದ ಹೊರಬಂದು ನನ್ನಿಂದ ಎಲ್ಲವೂ ಸಾಧ್ಯವಿದೆ ಎನ್ನುವ ಆತ್ಮವಿಶ್ವಾಸ ಹೊಂದಬೇಕು ಎಂದರು.
ಅಕ್ಕಾ ಐಎಎಸ್ ಅಕಾಡೆಮಿಯ ಸಂಪನ್ಮೂಲ ವ್ಯಕ್ತಿ ರಘು ಮಾತನಾಡಿ, ನಮ್ಮ ಸಂಸ್ಥೆ ಗುಣಮಟ್ಟದ ತರಬೇತಿಗೆ ಹೆಸರಾಗಿದೆ. ತರಬೇತಿಗೆ ಬರುವವರು ನಾವು ಹೇಳಿದ ವಿಚಾರಗಳನ್ನು ತಪ್ಪದೆ ಪಾಲಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಮುಂದಾಗುವವರಿಗೆ ಮೊದಲು ಆತ್ಮವಿಶ್ವಾಸವಿರಬೇಕು. ನಿಮ್ಮನ್ನು ನೀವು ನಂಬಿ. ಶಿಸ್ತು ಬದ್ಧವಾಗಿ ಅಧ್ಯಯನ ಮಾಡಿ. ಯಶಸ್ಸು ತಾನಾಗಿಯೇ ನಿಮಗೆ ಒಲಿಯುತ್ತದೆ. ನೀವು ಅರಳಿ ಸಮಾಜಕ್ಕೆ ಬೆಳಕಾಗಲು ತರಬೇತಿ ಕೇಂದ್ರದ ನಿಯಮಗಳನ್ನು ಪಾಲಿಸಿ, ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕೆಂದರು.
ಕಲ್ಪತರು ವಿದ್ಯಾಸಂಸ್ಥೆಯ ಅಧ್ಯಕ್ಷ ವಿಠಲಾಪುರ ಜಯರಾಂ, ಜೀನ ಕೌಶಲ್ಯ ತರಬೇತುದಾರ ಮಂಜುನಾಥ್, ಪ್ರಜ್ವಲ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net