ಮಳವಳ್ಳಿ ತಾಲೂಕಿಗೆ 679.24 ಕೋಟಿ ರೂ. ಬಿಡುಗಡೆ

ಮಳವಳ್ಳಿ ಪಟ್ಟಣದಲ್ಲಿ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ ಆಯೋಜಿಸಲಾಗಿತ್ತು. ತಹಸೀಲ್ದಾರ್ ಲೋಕೇಶ್, ತಾಪಂ ಇಒ ಶ್ರೀನಿವಾಸ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಚಿಕ್ಕಲಿಂಗಯ್ಯ, ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ, ತಾಲೂಕು ಅಧ್ಯಕ್ಷ ಮಾದೇಶ ಇತರರಿದ್ದರು.
ಮಳವಳ್ಳಿ ಪಟ್ಟಣದಲ್ಲಿ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ ಆಯೋಜಿಸಲಾಗಿತ್ತು. ತಹಸೀಲ್ದಾರ್ ಲೋಕೇಶ್, ತಾಪಂ ಇಒ ಶ್ರೀನಿವಾಸ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಚಿಕ್ಕಲಿಂಗಯ್ಯ, ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ, ತಾಲೂಕು ಅಧ್ಯಕ್ಷ ಮಾದೇಶ ಇತರರಿದ್ದರು.
Published on
ಮಳವಳ್ಳಿ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಕೇವಲ ಕಾರ್ಯಕ್ರಮಗಳಲ್ಲ. ಬದಲಿಗೆ, ಅವು ಜನ ಸಾಮಾನ್ಯರ ಬದುಕಿಗೆ ಆಶಾಕಿರಣ. ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ತಾಲೂಕಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ 679.24 ಕೋಟಿ ರೂ. ವೆಚ್ಚ ಮಾಡಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ತಾಲೂಕು ಮಟ್ಟದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರ 1.36 ಲಕ್ಷ ಕೋಟಿ ರೂ. ವೆಚ್ಚ ಮಾಡಿದೆ. ಸರ್ಕಾರ ಜನರ ತೆರಿಗೆ ಹಣವನ್ನು ಮತ್ತೆ ಜನರ ಕಲ್ಯಾಣಕ್ಕೇ ಬಳಸುತ್ತಿದೆ ಎಂಬುದಕ್ಕೆ ಈ ಯೋಜನೆಗಳು ಸಾಕ್ಷಿ ಎಂದು ಹೇಳಿದರು.
ತಾಲೂಕಿನ ಶೇ.96ರಷ್ಟು ಜನರು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಶಕ್ತಿ ಯೋಜನೆ ಜಾರಿ ಬಳಿಕ ತಾಲೂಕಿನಲ್ಲಿ ದುಡಿಯುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಪ್ರತಿ ಮನೆಯಲ್ಲೂ ಗ್ಯಾರಂಟಿ ಫಲಾನುಭವಿಗಳಿದ್ದಾರೆ. ತಾಲೂಕಿಗೆ 35 ಹೆಚ್ಚುವರಿ ನ್ಯಾಯಬೆಲೆ ಅಂಗಡಿಗಳ ಬೇಡಿಕೆ ಇದೆ. ಹಾಗೂ ಅಂತೆಯೇ ಹೆಚ್ಚುವರಿ ಬಸ್‌ಗಳ ಕುರಿತು ಪ್ರಸ್ತಾವನೆ ಇದೆ. ಈ ಸಂಬಂಧ ರಾಜ್ಯ ಸರ್ಕಾರದ ಗಮನಕ್ಕೆ ತರಲಾಗುವುದು. ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟವಾಗದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ತಾಲೂಕು ಗ್ಯಾರಂಟಿ ಯೋಜನಾ ಸಮಿತಿಯ ಸದಸ್ಯರು ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರತಿ ಮನೆಯವರಿಗೂ ಮನದಟ್ಟು ಮಾಡಿಕೊಡಬೇಕು. ಅರ್ಹರಿಗೆ ಈ ಯೋಜನೆಗಳು ತಲುಪುತ್ತಿವೆಯೇ ಎಂಬುದರ ಕುರಿತು ಮೇಲ್ವಿಚಾರಣೆ ಮಾಡಬೇಕು. ಯೋಜನೆಗಳ ಅನುಷ್ಠಾನದಲ್ಲಿ ಎದುರಾಗುವ ಸಮಸ್ಯೆಗಳು, ತಾಂತ್ರಿಕ ಅಡಚಣೆಗಳು ಹಾಗೂ ಸಾರ್ವಜನಿಕರ ಅಹವಾಲುಗಳನ್ನು ಸಂಗ್ರಹಿಸಿ ಜಿಲ್ಲಾ ಸಮಿತಿಗೆ ತಿಳಿಸಿದರೆ ಸರ್ಕಾರದ ಹಂತದಲ್ಲಿ ಅದನ್ನು ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ತಹಸೀಲ್ದಾರ್ ಲೋಕೇಶ್ ಮಾತನಾಡಿ, ತಾಲೂಕಿನಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಲಾಗಿದೆ. ಅನ್ನಭಾಗ್ಯ ಅಕ್ಕಿ ಮಾರಾಟ ಮಾಡಿದರೆ ಅಂತಹವರ ವಿರುದ್ಧ ಪ್ರಕರಣ ದಾಖಲು ಮಾಡಲಾಗುವುದು. ಪಡಿತರ ಚೀಟಿದಾರರು ಅಕ್ಕಿ ಮಾರಾಟ ಮಾಡಿದರೆ ಅವರ ಕಾರ್ಡ್ ರದ್ದುಗೊಳಿಸಲಾಗುವುದು ಎಂಬ ಎಚ್ಚರಿಕೆ ಫಲಕವನ್ನು ನ್ಯಾಯಬೆಲೆ ಅಂಗಡಿ ಮುಂದೆ ಒಂದು ವಾರದೊಳಗೆ ಹಾಕುವಂತೆ ಸೂಚಿಸಲಾಗುವುದು ಎಂದು ಹೇಳಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಪ್ರಚಾರ ಕಾರ್ಯ ಕೈಗೊಳ್ಳಲಾಗುವುದು. 39 ಗ್ರಾಮ ಪಂಚಾಯಿತಿಯಲ್ಲಿ ಬ್ಯಾನರ್, ಬೋರ್ಡಿಂಗ್ ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಚಿಕ್ಕಲಿಂಗಯ್ಯ, ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ, ತಾಲೂಕು ಅಧ್ಯಕ್ಷ ಮಾದೇಶ ಸೇರಿದಂತೆ ತಾಲೂಕು ಸಮಿತಿ ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net