ಮಂಡ್ಯ ಜನರ ಸೇವೆಗಾಗಿ ಮರುಜೀವ

ಪಟ್ಟಣದ ಬೆಂಗಳೂರು-ಮೈಸೂರು ಹಳೆಯ ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜನುಮ ದಿನಾಚರಣೆಯ ಸರಳ ಕಾರ್ಯಕ್ರಮದ ವೇದಿಕೆಯಲ್ಲಿ ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಕ್ಷೇತ್ರದ ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನು ಕುರಿತು ಮಾತನಾಡಿದರು.
ಪಟ್ಟಣದ ಬೆಂಗಳೂರು-ಮೈಸೂರು ಹಳೆಯ ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜನುಮ ದಿನಾಚರಣೆಯ ಸರಳ ಕಾರ್ಯಕ್ರಮದ ವೇದಿಕೆಯಲ್ಲಿ ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಕ್ಷೇತ್ರದ ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನು ಕುರಿತು ಮಾತನಾಡಿದರು.
Published on
ಶ್ರೀರಂಗಪಟ್ಟಣ: ಮಂಡ್ಯದ ಋಣ ತೀರಿಸಿ ಸೇವೆ ಮಾಡಲು ದೇವರೇ ನನಗೆ ಮರುಜೀವ ನೀಡಿ ಕಳುಹಿಸಿದ್ದು, ಜಿಲ್ಲೆಯ ಜನತೆ ನನ್ನ ಮೇಲಿಟ್ಟಿರುವ ನಂಬಿಕೆಯನ್ನು ಹುಸಿಯಾಗಲು ಅವಕಾಶ ನೀಡುವುದಿಲ್ಲ. ಇದು ನನ್ನ ಜನ್ಮ ದಿನದಂದೇ ನಿಮ್ಮೆದುರು ಮಾಡುವ ಪ್ರಮಾಣ ಎಂದು ಕೇಂದ್ರ ಬೃಹತ್ ಕೈಗಾರಿಕಾ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಮಂಗಳವಾರ ಮೈಸೂರಿಗೆ ತೆರಳುತ್ತಿದ್ದ ಮಾರ್ಗಮಧ್ಯೆ ಪಟ್ಟಣದ ಬೆಂಗಳೂರು-ಮೈಸೂರು ಹಳೆಯ ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತಕ್ಕೆ ಆಗಮಿಸಿದ ಅವರು ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ನೇತೃತ್ವದಲ್ಲಿ ಆಯೋಜಿಸಿದ್ದ ತಮ್ಮ ಹುಟ್ಟುಹಬ್ಬ ಆಚರಣೆಯ ಸರಳ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಅಭಿಮಾನದ ಶುಭಹಾರೈಕೆ ಹಾಗೂ ಸಿಹಿ ಸ್ವೀಕರಿಸಿ ಮಾತನಾಡಿದರು.
ರಾಜ್ಯದಲ್ಲಿ ಜೆಡಿಎಸ್ ಕಟ್ಟಿಬೆಳೆಸುವಲ್ಲಿ ನಾಡಿನ ಜನರ ಪಾತ್ರ ಹಾಗೂ ಕೊಡುಗೆ ಅತ್ಯಂತ ಮಹತ್ವವಾದದ್ದು. ಚುನಾವಣೆಯಲ್ಲಿ ಮೈತ್ರಿಯೊಂದಿಗೆ ಗೆದ್ದು ಕೇಂದ್ರ ಮಂತ್ರಿಯಾದ ಬಳಿಕ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡು ನಾಡಿನ ಅಭ್ಯುದಯಕ್ಕಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಕೇಂದ್ರ ರಾಜ್ಯದಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರದ ಹಲವು ರೀತಿಯ ಅನುಮತಿಗಳು ಅತಿಮುಖ್ಯ. ಜತೆಗೆ ಬಂಡವಾಳ ಹೂಡಿಕೆ ಮಾಡಲು ಮುಂದೆ ಬರುವ ಯಾರೇ ಉದ್ಯಮಿಗಳಿಗೆ ಭೂಮಿ, ನೀರು ಪೂರೈಕೆ, ವಿದ್ಯುತ್ ಸಂಪರ್ಕ ಹಾಗೂ ರಸ್ತೆ, ಸಾರಿಗೆ ಸೌಲಭ್ಯ ಸೇರಿದಂತೆ ಹಲವು ರೀತಿಯ ಮೂಲಸೌಕರ್ಯ ಒದಗಿಸಿ ಇಲ್ಲಿನ ಸರ್ಕಾರ ಅಗತ್ಯ ಸಹಕಾರ ನೀಡಬೇಕು.
ರಾಜ್ಯದಲ್ಲಿ ಮುಚ್ಚಲಾಗಿರುವ ಎಚ್‌ಎಂಟಿ ಕಾರ್ಖಾನೆ ಹಾಗೂ ಭದ್ರಾವತಿಯ ವಿಶ್ವೇಶ್ವರಯ್ಯ ಸ್ಟೀಲ್ ಕಾರ್ಖಾನೆ 4-5 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿ ಹೊಸರೀತಿ ಮರುಜೀವ ನೀಡುತ್ತಿರುವುದು ಬೇರೆ. ಇದನ್ನು ಹೊರತುಪಡಿಸಿ ವಿಶೇಷವಾಗಿ ಮಂಡ್ಯ ಜಿಲ್ಲೆಗೆ ಹೊಸ ಕೈಗಾರಿಕೆಗಳನ್ನು ತರಬೇಕು ಎಂಬ ಚಿಂತನೆ ಮತ್ತು ಉದ್ದೇಶದಿಂದ ಹೊಸ ಉದ್ಯಮಗಳು ಹಾಗೂ ಉದ್ಯಮಿಗಳನ್ನು ಕರೆತರುವ ಪ್ರಯತ್ನಕ್ಕೆ ರಾಜ್ಯ ಸರ್ಕಾರವೂ ಪೂರಕ ವಾತಾವರಣ ಕಲ್ಪಿಸಿಕೊಡಬೇಕು. ಆದರೆ ಕಾಂಗ್ರೆಸ್ ಸರ್ಕಾರದ ಕೆಲವು ಜನಪ್ರತಿನಿಧಿಗಳು ಮಾಧ್ಯಮಗಳ ಮುಂದೆ ಕುಹಕ ಹೇಳಿಕೆಗಳು ಮತ್ತು ಟೀಕೆ ಮಾಡುವುದರಲ್ಲಿ ಮುಳುಗಿದ್ದಾರೆ ಎಂದು ಟೀಕಿಸಿದರು.
ರವೀಂದ್ರ ಶ್ರೀಕಂಠಯ್ಯ ಶುದ್ಧ ಮನಸ್ಸಿನ ನಾಯಕ: ಕ್ಷೇತ್ರದ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ನೇರವಾದಿಯಾಗಿದ್ದು, ಹಿಂದೆ-ಮುಂದೆ ಬೇರೆ ಬೇರೆ ರೀತಿ ಮಾತನಾಡುವ ಅಥವಾ ನಡೆದುಕೊಳ್ಳುವ ವ್ಯಕ್ತಿಯಲ್ಲ. ಇವರ ನೇರ ನಡೆಯ ವ್ಯಕ್ತಿತ್ವ ಸಾಕಷ್ಟು ಜನರಿಗೆ ಕಟುರೀತಿಯ ಮಾತುಗಳೆನಿಸಿದೆ. ಆದರೆ ರವೀಂದ್ರ ಶ್ರೀಕಂಠಯ್ಯ ನಿಜವಾಗಿಯೂ ಪ್ರಾಮಾಣಿಕ ವ್ಯಕ್ತಿತ್ವದ ಶುದ್ಧ ಮನಸ್ಸಿನ ಸರಳತೆಯ ನಾಯಕ ಇಂತಹವರನ್ನು ಬೆಂಬಲಿಸಿ ಎಂದರು.
ಇದೇ ವೇಳೆ ತಮ್ಮ ಆರೋಗ್ಯ ವೃದ್ಧಿ ಮತ್ತು ಚೇತರಿಕೆ ವಿಶೇಷ ದೈವಿಕ ಪ್ರಾರ್ಥನೆ ನೇರವೇರಿಸಿದ ಅದ್ವೈತ ವಾಚಸ್ಪತಿ ಡಾ.ಭಾನುಪ್ರಕಾಶ್ ಗುರುಗಳಿಗೆ ಕುಮಾರಸ್ವಾಮಿ ಧನ್ಯತೆ ತೋರಿ, ಅಭಿಮಾನಿಗಳಿಗೆ ಕೃತಜ್ಞತೆ ವ್ಯಕ್ತಪಡಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕ ಸುರೇಶ್‌ಗೌಡ, ಮುಖಂಡ ರಾಮಚಂದ್ರು, ಜೆಡಿಎಸ್ ತಾಲೂಕು ಅಧ್ಯಕ್ಷ ದಶರಥ್, ಕಾರ್ಯಾಧ್ಯಕ್ಷ ಸಬ್ಬನಕುಪ್ಪೆ ಶಂಕರೇಗೌಡ, ಮುಖಂಡ ನೆಲಮನೆ ದಯಾನಂದ್, ತಿಲಕ್, ಪುರಸಭಾ ಮಾಜಿಸದಸ್ಯ ಕಾಯಿ ವೆಂಕಟೇಶ್, ಸಾಯಿಕುಮಾರ್, ಸತ್ಯಪ್ಪ, ಅಶ್ವಥಿ, ಕೇಬಲ್ ಶಿವು, ಉಮೇಶ್ ಕುಮಾರ್, ಯುವಮುಖಂಡ ಪ್ರೀತಂರಾಮ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net