ಮಳವಳ್ಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕಾಲೇಜು ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ಸಂಶೋಧನಾ ವಿನ್ಯಾಸ ಕುರಿತ ರಾಜ್ಯ ಮಟ್ಟದ ಒಂದು ದಿನದ ಕಾರ್ಯಾಗಾ ವನ್ನು ಶಿಕ್ಷಣ ಇಲಾಖೆಯ ಮೈಸೂರು ವಲಯದ ಜಂಟಿ ನಿರ್ದೇಶಕಿ ಡಾ. ಡಿ. ಎಸ್. ಪ್ರತಿಮಾ ಉದ್ಘಾಟಿಸಿದರು. ಯಶೋಧ, ಡಾ. ಮಂಜುನಾಥ್, ಡಾ.ಟಿ.ಎಸ್. ಹರ್ಷ, ರವೀಂದ್ರಕುಮಾರ್, ಸುಭಾಷಿಣಿ, ರಂಗಸ್ವಾಮಿ, ಬಸವರಾಜು ಇದ್ದರು.
ಮಳವಳ್ಳಿ:ಯಾವುದೇ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸಿ ಕೈಗೊಳ್ಳುವ ಸಂಶೋಧನೆ ಸಮಾಜಕ್ಕೆ ಉತ್ತಮ ಕೊಡುಗೆಯಾಗುವುದರ ಜತೆಗೆ ವಿದ್ಯಾರ್ಥಿಗಳಿಗೆ ದಾರಿದೀಪವಾಗಲಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಮೈಸೂರು ವಲಯದ ಜಂಟಿ ನಿರ್ದೇಶಕಿ ಡಾ. ಡಿ.ಎಸ್. ಪ್ರತಿಮಾ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕಾಲೇಜು ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂಶೋಧನಾ ವಿನ್ಯಾಸ ಕುರಿತ ರಾಜ್ಯ ಮಟ್ಟದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ವಿಜ್ಞ್ಞಾನ, ವಾಣಿಜ್ಯ, ಸಮಾಜಶಾಸ್ತ್ರ ಸೇರಿದಂತೆ ಯಾವುದೇ ವಿಚಾರಗಳನ್ನು ಬೇಕಾದರೂ ವಿಷಯವಾಗಿ ತೆಗೆದುಕೊಂಡು ಸಂಶೋಧನೆ ನಡೆಸಬಹುದಾಗಿದ್ದು, ಪ್ರಸ್ತುತ ನಡೆಯುತ್ತಿರುವ ಜನಗಣತಿ ವಿಷಯ ಸಹ ಸಂಶೋಧನೆಗೆ ಅರ್ಹ ವಿಚಾರವಾಗಿದೆ. ಈ ಜನಗಣತಿಯಿಂದ ಸಾಮಾಜಿಕ ಆರ್ಥಿಕ ಪ್ರಗತಿಗೆ ನೆರವಾಗಲಿದೆ ಎಂಬುದರ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸಬಹುದಾಗಿದೆ ಎಂದು ವಿವರಿಸಿದರು.
ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಯಶೋದಾ ಮಾತನಾಡಿ, ಇಂದಿನ ಕಾರ್ಯಾಗಾರದಲ್ಲಿ ರಾಜ್ಯದ ವಿವಿಧ ಕಾಲೇಜುಗಳಿಂದ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಸಂಶೋಧನೆಯ ಆಸಕ್ತಿ ಹೊಂದಿ ಅಧ್ಯಯನದಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳು ಒಂದು ವಿಷಯದ ಬಗ್ಗೆ ಸಂಶೋಧನೆ ಮಾಡಿದ ಮಾತ್ರಕ್ಕೆ ನಮ್ಮ ಕೆಲಸ ಮುಗಿಯಿತು ಎಂದು ಕೊಳ್ಳಬಾರದು. ನಿರಂತರ ವಿವಿಧ ವಿಷಯಗಳ ಬಗ್ಗೆ ಸಂಶೋಧನೆಯ ವಿಚಾರವಾಗಿ ಅಧ್ಯಯನ ಮಾಡುವುದರ ಜತೆಗೆ ಇತರರಿಗೂ ಮಾಹಿತಿ ಹಂಚಿಕೊಳ್ಳುವ ಮೂಲಕ ಸಮಾಜದಲ್ಲಿ ಅರಿವು ಮೂಡಿಸುವ ಕೆಲಸವನ್ನು ನಿರಂತರವಾಗಿ ಮುಂದುವರಿಸುವಂತೆ ಸಲಹೆ ನೀಡಿದರು.
ಕಾರ್ಯಾಗಾರದಲ್ಲಿ ಸಂಶೋಧನೆಯ ವಿಧಗಳ ಕುರಿತು ಡಾ. ಮಂಜುನಾಥ್ ಹಾಗೂ ಸಂಶೋಧನೆಯ ಸವಾಲುಗಳು ಹಾಗೂ ಪರಿಹಾರ ಕುರಿತು ಡಾ. ಟಿ. ಎಸ್. ಹರ್ಷ ವಿವರಿಸಿದರು. ಕಾಲೇಜಿನ ಸಿಡಿಸಿ ಸಮಿತಿ ಕಾರ್ಯಾಧ್ಯಕ್ಷ ಬಿ. ಕೆ. ರವೀಂದ್ರಕುಮಾರ್, ಸದಸ್ಯರಾದ ಸುಭಾಷಿಣಿ, ರಂಗಸ್ವಾಮಿ, ಬಸವರಾಜು ಇತರರು ಇದ್ದರು.