ಬೆಳೆಗಳ ಮೌಲ್ಯವರ್ಧನೆಗೆ ಒತ್ತು ನೀಡಲಿ: ಕೃಷಿ ವಿವಿ ಕುಲಪತಿ ಡಾ.ಕೆ.ಸಿ.ನಾರಾಯಣಸ್ವಾಮಿ ಸಲಹೆ

ಮಂಡ್ಯ ತಾಲೂಕು ವಿ.ಸಿ ಫಾರಂನ ವಲಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಮೊದಲ ಸಂಶೋಧನಾ ಮತ್ತು ವಿಸ್ತರಣಾ ಶಿಕ್ಷಣ ಪರಿಷತ್‌ನ ಸಭೆ ಆಯೋಜಿಸಲಾಗಿತ್ತು.
ಮಂಡ್ಯ ತಾಲೂಕು ವಿ.ಸಿ ಫಾರಂನ ವಲಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಮೊದಲ ಸಂಶೋಧನಾ ಮತ್ತು ವಿಸ್ತರಣಾ ಶಿಕ್ಷಣ ಪರಿಷತ್‌ನ ಸಭೆ ಆಯೋಜಿಸಲಾಗಿತ್ತು.
Published on

ಪ್ರಮುಖ ಮುಖ್ಯಾಂಶಗಳು

  • ಸಂಶೋಧನಾ ಮತ್ತು ವಿಸ್ತರಣಾ ಶಿಕ್ಷಣ ಪರಿಷತ್ ಸಭೆ
  • ವಿ.ಸಿ ಫಾರಂನ ವಲಯ ಕೃಷಿ ಸಂಶೋಧನಾ ಕೇಂದ್ರದ ಕೋಲ್ಮನ್ ಸಭಾಂಗಣದಲ್ಲಿ ಆಯೋಜನೆ
ಮಂಡ್ಯ: ಕೃಷಿ ವಿಶ್ವವಿದ್ಯಾಲಯದಲ್ಲಿ ಅಭಿವೃದ್ಧಿಪಡಿಸಿರುವ ನೂತನ ಕೃಷಿ ತಂತ್ರಜ್ಞಾನಗಳು ಪರಿಣಾಮಕಾರಿಯಾಗಿ ರೈತರ ಮನೆಬಾಗಿಲಿಗೆ ತಲುಪುವಂತಾಗಬೇಕು. ಅದೇ ರೀತಿ ಇಂದಿನ ಕೃಷಿ ಕೇವಲ ಉತ್ಪಾದನೆಗೆ ಸೀಮಿತವಾಗದೆ ದ್ವಿತೀಯ ಕೃಷಿ ಅಂದರೆ ಮೌಲ್ಯವರ್ಧನೆ, ಸಂಸ್ಕರಣೆ ಹಾಗೂ ಮಾರುಕಟ್ಟೆಗೆ ಹೆಚ್ಚಿನ ಆದ್ಯತೆ ನೀಡುವುದು ಅತ್ಯಗತ್ಯ ಎಂದು ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಸಿ.ನಾರಾಯಣಸ್ವಾಮಿ ಸಲಹೆ ನೀಡಿದರು.
ತಾಲೂಕಿನ ವಿ.ಸಿ ಫಾರಂನ ವಲಯ ಕೃಷಿ ಸಂಶೋಧನಾ ಕೇಂದ್ರದ ಕೋಲ್ಮನ್ ಸಭಾಂಗಣದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಆಯೋಜಿಸಿದ್ದ ಮೊದಲ ಸಂಶೋಧನಾ ಮತ್ತು ವಿಸ್ತರಣಾ ಶಿಕ್ಷಣ ಪರಿಷತ್‌ನ ಸಭೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನದಲ್ಲಿ ಡಿಜಿಟಲ್ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕಿದೆ. ಕೃಷಿ ಹಾಗೂ ಕೃಷಿಯೇತರ ಮಾಹಿತಿಯನ್ನು ಡಿಜಿಟಲ್ ತಂತ್ರಜ್ಞಾನಗಳ ಮೂಲಕ ನಿಖರ ಮತ್ತು ತ್ವರಿತವಾಗಿ ರೈತರಿಗೆ ತಲುಪಿಸುವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕೆಂದು ಕರೆ ನೀಡಿದರು.
ವಿಶ್ವವಿದ್ಯಾಲಯದ ವ್ಯಾಪ್ತಿಯ ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಕೃಷಿ ವಿಸ್ತರಣಾ ಚಟುವಟಿಕೆಗಳು ಪರಿಣಾಮಕಾರಿಯಾಗಿ ನಡೆಯುತ್ತಿವೆ. ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳಲ್ಲಿ ಮೂರು ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ಮೈಸೂರು ಹಾಗೂ ಮಡಿಕೇರಿಯಲ್ಲಿ ಎರಡು ವಿಸ್ತರಣಾ ಶಿಕ್ಷಣ ಘಟಕಗಳು ರೈತರಿಗೆ ತಾಂತ್ರಿಕ ಮಾರ್ಗದರ್ಶನ ಮತ್ತು ತರಬೇತಿ ನೀಡುತ್ತಿವೆ ಎಂದು ವಿವರಿಸಿದರು.
ಈ ಶೈಕ್ಷಣಿಕ ವರ್ಷದಿಂದ ಕೃಷಿ ಯಂತ್ರೋಪಕರಣಗಳ ಕಾರ್ಯಾಚರಣೆ, ದುರಸ್ತಿ ಮತ್ತು ನಿರ್ವಹಣೆ, ಸಾವಯವ ಹಾಗೂ ನೈಸರ್ಗಿಕ ಕೃಷಿ, ಜೇನು ಕೃಷಿ ಹಾಗೂ ಸುಧಾರಿತ ಬೇಸಾಯ ಕ್ರಮಗಳಿಗೆ ಸಂಬಂಧಿಸಿದ ನಾಲ್ಕು ಪ್ರಮಾಣಪತ್ರ ಕೋರ್ಸ್‌ಗಳನ್ನು ವಿಶ್ವವಿದ್ಯಾಲಯ ಆರಂಭಿಸುತ್ತಿದ್ದು, ಯುವಕರು ಹಾಗೂ ರೈತರಿಗೆ ಕೌಶಲಾಭಿವೃದ್ಧಿಗೆ ಇದು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಕೃಷಿ ವಿಜ್ಞಾನಿ ಡಾ.ಎಂ.ಜೆ.ಚಂದ್ರೇಗೌಡ ಮಾತನಾಡಿ, ರೈತರಿಗೆ ನೀಡುವ ತರಬೇತಿಗಳು ಮಾರುಕಟ್ಟೆ ಆಧಾರಿತವಾಗಿರಬೇಕು. ಉತ್ಪಾದನೆ, ರೋಗ-ಕೀಟ ನಿರ್ವಹಣೆ, ಮೌಲ್ಯವರ್ಧನೆ, ಸಂಸ್ಕರಣೆ ಹಾಗೂ ಮಾರುಕಟ್ಟೆ ಮಾಹಿತಿಯನ್ನು ಸಮಗ್ರವಾಗಿ ಒಳಗೊಂಡ ತರಬೇತಿಗಳಿಂದ ರೈತರು ಹೆಚ್ಚಿನ ಲಾಭ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವಿವಿಯ ವಿಸ್ತರಣಾ ನಿರ್ದೇಶಕ ಡಾ.ಸಿ.ರಾಮಚಂದ್ರ ಪರಿಷತ್‌ನ ಉದ್ದೇಶ ಹಾಗೂ ಮಹತ್ವವನ್ನು ವಿವರಿಸಿದರು. ಸಂಶೋಧನಾ ನಿರ್ದೇಶಕ ಡಾ.ಜಿ.ಎಂ.ದೇವಗಿರಿ, ವಿವಿಯಲ್ಲಿ ಕೈಗೊಂಡ ಸಂಶೋಧನೆಉ ಸಮಗ್ರ ವರದಿ ಹಾಗೂ ಮುಂದಿನ ಕ್ರಿಯಾ ಯೋಜನೆ ಬಗ್ಗೆ ಹೇಳಿದರು.
ಮೈಸೂರು ಕೃಷಿ ಮಾರಾಟ ಅಧ್ಯಯನ ಸಂಸ್ಥೆ ಜಂಟಿ ನಿರ್ದೇಶಕಿ ವಾಣಿಶ್ರೀ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಶಶಿಕಲಾ, ಮಂಡ್ಯ ಎಪಿಎಂಸಿ ಜಂಟಿ ನಿರ್ದೇಶಕ ಶ್ರೀಹರಿ, ರೇಷ್ಮೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವಿಜಯೇಂದ್ರ, ಪ್ರಗತಿಪರ ರೈತರಾದ ಹೊನ್ನನಾಯಕನಹಳ್ಳಿ ಎಚ್.ಎಸ್.ನಿರಂಜನ್, ಅರ್ಜುನಹಳ್ಳಿ ಶ್ರೀರಾಂಪ್ರಸಾದ್, ವಿವಿಯ ಶಿಕ್ಷಣ ನಿರ್ದೇಶಕ ಡಾ.ಎನ್. ಶಿವಕುಮಾರ್, ಕುಲಸಚಿವೆ ಡಾ.ಪಿ.ಎಸ್.ಫಾತಿಮಾ, ಹಿರಿಯ ವಿಜ್ಞಾನಿ ಡಾ.ಕಮಲಾಬಾಯಿ ಕೂಡಗಿ, ಸಹಾಯಕ ಪ್ರಾಧ್ಯಾಪಕ ಡಾ.ಪಿ.ಅರುಣ್‌ಕುಮಾರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net