ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಗುರುವಾರ ಪಾಂಡವಪುರ ರೈಲ್ವೆ ನಿಲ್ದಾಣದಲ್ಲಿ ರೈಲು ಮಾರ್ಗ ವಿಂಡೋ ಟ್ರಯಲಿಂಗ್ ಪರಿವೀಕ್ಷಣೆ ನಡೆಸಿದರು.
ಪಾಂಡವಪುರ: ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ರೈಲ್ವೆ ಮತ್ತು ಜಲಶಕ್ತಿ ಖಾತೆಗಳ ರಾಜ್ಯ ಸಚಿವ ವಿ.ಸೋಮಣ್ಣ ಅವರು ಗುರುವಾರ ಪಾಂಡವಪುರ ರೈಲ್ವೆ ನಿಲ್ದಾಣದಲ್ಲಿ ರೈಲು ಮಾರ್ಗ ವಿಂಡೋ ಟ್ರಯಲಿಂಗ್ ಪರಿವೀಕ್ಷಣೆ ನಡೆಸಿದರು.
ಮಧ್ಯಾಹ್ನ 2ಕ್ಕೆ ವಿಶೇಷ ರೈಲಿನಲ್ಲಿ ಪಾಂಡವಪುರ ರೈಲ್ವೆ ನಿಲ್ದಾಣಕ್ಕೆ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ವಿ.ಸೋಮಣ್ಣ ಬಂದರು. ರೈಲಿನಿಂದ ಕೆಳಗಿಳಿದಾಗ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಕುಮಾರಸ್ವಾಮಿ ಮತ್ತು ಸೋಮಣ್ಣ ಅವರಿಗೆ ಹೂವಿನ ಹಾರ ಹಾಕಿ ಜೈಕಾರ ಹಾಕಿದರು. ಬಳಿಕ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಮತ್ತು ಬೆರಳೆಣಿಕೆಯಷ್ಟು ಸಾರ್ವಜನಿಕರು ಸಚಿವದ್ವಯರಿಗೆ ಪಾಂಡವಪುರ ರೈಲ್ವೆ ನಿಲ್ದಾಣಕ್ಕೆ ಅಗತ್ಯವಾಗಿ ಬೇಕಾಗಿರುವ ಮೂಲಸೌಕರ್ಯ ಹಾಗೂ ಕೆಲ ರೈಲುಗಾಡಿಗಳ ನಿಲುಗಡೆಗೆ ಮನವಿ ಪತ್ರವನ್ನು ಸಲ್ಲಿಸಿದರು.
ಈ ವೇಳೆ ಪಾಂಡವಪುರ ರೈಲ್ವೆ ನಿಲ್ದಾಣಕ್ಕೆ ಎಸ್ಕಲೇಟರ್ ಅಳವಡಿಸಬೇಕು, ಹೈಟೆಕ್ ಶೌಚಗೃಹ ನಿರ್ಮಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಮನವಿ ಮಾಡಿಕೊಂಡರು.
ರೈಲು ನಿಲುಗಡೆಗೆ ಕೋರಿಕೆ: ಪಾಂಡವಪುರದಿಂದ ಬೆಂಗಳೂರಿಗೆ ಪ್ರಯಾಣಿಸಲು ಬೆಳಗ್ಗೆ 9.30ರಿಂದ 1.30ರವರೆಗೆ ಯಾವುದೇ ರೈಲುಗಾಡಿಗಳು ಇರುವುದಿಲ್ಲ. ಈ ಮಧ್ಯೆದಲ್ಲಿ 11.45ಕ್ಕೆ ಮೈಸೂರಿನಿಂದ ಬರುವ ಒಡೆಯರ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲನ್ನು ಪಾಂಡವಪುರ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಮಾಡಿಸಿಕೊಡಬೇಕು. ಜತೆಗೆ ಅದೇ ರೀತಿ ಪಾಂಡವಪುರದಿಂದ ಮೈಸೂರಿಗೆ ಪ್ರಯಾಣಿಸಲು ಬೆಳಗ್ಗೆ 9.15ರಿಂದ ಮಧ್ಯಾಹ್ನ 2ರವರೆಗೆ ಯಾವುದೇ ರೈಲು ಇರುವುದಿಲ್ಲ. ಬೆಂಗಳೂರಿನಿಂದ ಮೈಸೂರಿಗೆ ಹೋಗುವ ಮಧ್ಯಾಹ್ನ 1.30ರ ರಾಜ್ಯ ರಾಣಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲನ್ನು ನಿಲುಗಡೆ ಮಾಡಿಕೊಡಬೇಕು. ಅಲ್ಲದೆ ಕೊಚಿವೇಲಿ, ಮೈಲಾಡತುರೈ ಹಾಗೂ ಬೆಂಗಳೂರಿನಿಂದ ರಾತ್ರಿ ಸಂಚಾರ ಮಾಡಲಿರುವ ಮಂಗಳೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಾಡಿಗಳನ್ನು ಪಾಂಡವಪುರ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ಮಾಡಿಕೊಡಬೇಕು ಎಂದು ಸಚಿವದ್ವಯರಲ್ಲಿ ಮನವಿ ಮಾಡಿದರು.
ಪಾಂಡವಪುರ ರೈಲ್ವೆ ನಿಲ್ದಾಣದಿಂದ ಪಾಂಡವಪುರ ತಾಲೂಕು ಹಾಗೂ ಕೆ.ಆರ್.ಪೇಟೆ, ಶ್ರೀರಂಗಪಟ್ಟಣ, ನಾಗಮಂಗಲ, ಚನ್ನರಾಯಪಟ್ಟಣ ತಾಲೂಕಿನ ಜನತೆಗೆ ಹಾಗೂ ಪ್ರಸಿದ್ಧ ಪುಣ್ಯಕ್ಷೇತ್ರ ಆರತಿ ಉಕ್ಕಡದ ಅಹಲ್ಯಾ ದೇವಸ್ಥಾನಕ್ಕೆ ಬರುವ ಜನರಿಗೆ ರೈಲು ಗಾಡಿಗಳ ನಿಲುಗಡೆಯಿಂದಾಗಿ ಅನುಕೂಲವಾಗಲಿದೆ. ಜತೆಗೆ ರೈಲ್ವೆ ಇಲಾಖೆಗೂ ಹೆಚ್ಚಿನ ಆದಾಯ ಬರಲಿದೆ ಎಂದು ಕೋರಿದರು.
ನೂಕುನುಗ್ಗಲು, ಜೈಕಾರಕ್ಕೆ ಮೀಸಲಾದ ವೀಕ್ಷಣೆ ಕಾರ್ಯಕ್ರಮ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ವಿ.ಸೋಮಣ್ಣ ಅವರಿಗೆ ಹಾರ ಹಾಕಲು ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಮುಗಿಬಿದ್ದರು. ಇದರಿಂದಾಗಿ ನೂಕುನುಗ್ಗಲು ಉಂಟಾಯಿತು.
ಸಚಿವರಿಗೆ ಅಹವಾಲು ನೀಡಲು ಬಂದಿದ್ದ ಹಲವು ಸಾರ್ವಜನಿಕರಿಗೆ ಮನವಿ ಸಲ್ಲಿಸಲು ಸಾಧ್ಯವಾಗದೆ ಹಿಂದಿರುಗಿದರು. ಮನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಅಶೋಕ, ಡಿಸಿಸಿ ಬ್ಯಾಂಕ್ ನಿರ್ದೇಶಕ ಹೊಸಕೋಟೆ ಪುಟ್ಟಸ್ವಾಮಿಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ನೀಲನಹಳ್ಳಿ ಧನಂಜಯ, ಟೌನ್ ಅಧ್ಯಕ್ಷ ಎನ್.ಸೋಮಶೇಖರ್, ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಂಗಳಾ ನವೀನ್ ಇತರರು ಇದ್ದರು.