ಮಳವಳ್ಳಿ ತಾಲೂಕಿನ ಬಾಚನಹಳ್ಳಿ ಸಮೀಪದ ಬುದ್ಧ ವಿಹಾರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬುದ್ಧ ಪೂರ್ಣಿಮೆ ಮತ್ತು ಅಂಬೇಡ್ಕರ್ ಜಯಂತಿ ಆಚರಣೆ ಕಾರ್ಯಕ್ರಮವನ್ನು ಭಾರತೀಯ ಬೌದ್ಧ ಮಹಾಸಭಾ ಯುವ ಘಟಕದ ರಾಜ್ಯಾಧ್ಯಕ್ಷ ದರ್ಶನ್ ಬಿ.ಸೋಮಶೇಖರ್ ಉದ್ಘಾಟಿಸಿದರು. ಮಾಜಿ ಸಚಿವ ಬಿ.ಸೋಮಶೇಖರ್, ಮನೋರಕ್ಕಿತ ಬಂತೇಜಿ, ಜಯರಾಜು, ರಂಗಸ್ವಾಮಿ, ನಟರಾಜು, ಸಂದೇಶ್ ಇದ್ದರು.
Published on:
Copied
Follow Us
ಮಳವಳ್ಳಿ : ಭಾರತದಲ್ಲಿ ಹುಟ್ಟಿ ವಿಶ್ವಕ್ಕೆ ಬೌದ್ಧ ಧಮ್ಮವನ್ನು ಹರಡುವ ಮೂಲಕ ಶಾಂತಿ ಸಂದೇಶ ಸಾರಿದ ಮಹಾನ್ ಜ್ಞಾನಿ ಭಗವಾನ್ ಬುದ್ಧ ಎಂದು ಭಾರತೀಯ ಬೌದ್ಧ ಮಹಾಸಭಾ ಯುವ ಘಟಕದ ರಾಜ್ಯಾಧ್ಯಕ್ಷ ದರ್ಶನ್ ಬಿ.ಸೋಮಶೇಖರ್ ಹೇಳಿದರು.
ತಾಲೂಕಿನ ಬಾಚನಹಳ್ಳಿ ಸಮೀಪವಿರುವ ಬುದ್ಧ ವಿಹಾರದಲ್ಲಿ ಸೋಮವಾರ ಭಾರತೀಯ ಬೌದ್ಧ ಮಹಾಸಭಾ ಯುವ ಘಟಕ ಮತ್ತು ನವೋದಯ ಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಬುದ್ಧ ಪೂರ್ಣಿಮೆ ಹಾಗೂ ಅಂಬೇಡ್ಕರ್ ಜಯಂತಿ ಅಂಗವಾಗಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬುದ್ಧ ಧರ್ಮವನ್ನು ಅನುಸರಿಸುವ ದೇಶಗಳು ಅಭಿವೃದ್ಧಿಯ ವಿಚಾರದಲ್ಲಿ ಮುಂದುವರಿದ ರಾಷ್ಟ್ರಗಳಾಗಿವೆ. ವಿದ್ಯಾರ್ಥಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪಾಲಕರು ತಮ್ಮ ಮಕ್ಕಳ ಮೇಲೆ ಹೆಚ್ಚಿನ ಭರವಸೆ ಇಟ್ಟಿರುತ್ತಾರೆ. ಯುವಪೀಳಿಗೆ ಅದನ್ನು ಪೂರೈಸಬೇಕು ಎಂದರು.
ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕೆ ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ. ವಿದ್ಯಾರ್ಥಿಗಳಿಗೆ ಸಮಾಜದ ಮೇಲಿನ ಜವಾಬ್ದಾರಿ ಹೆಚ್ಚಿದ್ದು, ಮೌಲ್ಯಯುತ ಶಿಕ್ಷಣ ಪಡೆದು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ಮಾಜಿ ಸಚಿವ ಬಿ.ಸೋಮಶೇಖರ್ ಮಾತನಾಡಿ, ಭಗವಾನ್ ಬುದ್ಧರು ವಿಶ್ವಕ್ಕೆ ಶಾಂತಿ ಅಹಿಂಸ ತತ್ವ ಬೋದಿಸಿದರು. ಅವರ ನಂತರ ವಿಶ್ವಗುರು ಬಸವಣ್ಣ ಹಾಗೂ ಡಾ.ಅಂಬೇಡ್ಕರ್ ಸಂವಿಧಾನ ರಚನೆ ಮೂಲಕ ಬುದ್ಧರನ್ನು ಜೀವಂತವಾಗಿ ಇಟ್ಟಿದ್ದಾರೆ ಎಂದರು.
ನನ್ನ ಅಧಿಕಾರ ಅವಧಿಯಲ್ಲಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಆದರೆ ಬುದ್ಧನ ಮಾರ್ಗವನ್ನು ಅನುಸರಿಸಿ ಧಮ್ಮವನ್ನು ಸಾರುವ ಕೆಲಸದಲ್ಲಿ ತೊಡಗಿಸಿಕೊಳ್ಳಲಿಲ್ಲ. ನನ್ನ ಮಗ ಆ ದಿಕ್ಕಿನಲ್ಲಿ ಕಾರ್ಯೋನ್ಮುಖರಾಗಿರುವುದು ಸಂತಸ ತಂದಿದೆ ಎಂದು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಳನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಕೊಳ್ಳೇಗಾಲ ಚೇತವನದ ಮನೋರಕ್ಕಿತ ಬಂತೇಜಿ ವಹಿಸಿದ್ದರು. ಸಾಹಿತಿ ಕೃಷ್ಣಯ್ಯ, ಜಿಪಂ ಮಾಜಿ ಸದಸ್ಯ ಎಂ.ಎನ್.ಜಯರಾಜು, ಪ್ರೊ. ರಂಗಸ್ವಾಮಿ, ಬೌದ್ಧ ಮಹಾದಭಾ ಜಿಲ್ಲಾಧ್ಯಕ್ಷ ನಟರಾಜು, ಮುಖಂಡರಾದ ಸಿಕ್ರೇಶ್, ಸಂದೇಶ್, ನಿಂಗರಾಜು ಸೇರಿದಂತೆ ಇತರರಿದ್ದರು.