ಮಂಡ್ಯ:ಹೊಸಬೂದನೂರು ಗ್ರಾಮದಲ್ಲಿ ಫೆ.21 ಮತ್ತು 22ರಂದು ನಡೆಯಲಿರುವ ‘ಬೂದನೂರು ಉತ್ಸವ’ದ ಅಂಗವಾಗಿ ಕಸಬಾ ಹೋಬಳಿ ಗ್ರಾಮದಲ್ಲಿ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಸುಮಾರು 30 ಗ್ರಾಮಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಯುವತಿಯರಿಂದ ಹಿಡಿದು ವೃದ್ಧೆಯರು ಕೂಡ ಸಂಭ್ರಮದಿಂದ ಪಾಲ್ಗೊಂಡರು.
ಶಾಸಕ ಪಿ.ರವಿಕುಮಾರ್ ಗಣಿಗ ನೇತೃತ್ವದಲ್ಲಿ ನಡೆಯುತ್ತಿರುವ ಉತ್ಸವದ ಪ್ರಯುಕ್ತ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಒಟ್ಟಾರೆ ಸಾವಿರಾರು ಮಹಿಳೆಯರು ವಿವಿಧ ಬಣ್ಣ ಬಣ್ಣದ ರಂಗೋಲಿಗಳನ್ನು ಬಿಡಿಸಿದರು. ಇಡೀ ರಾಜ್ಯದಲ್ಲಿ ಒಂದೇ ಬಾರಿಗೆ 30 ಗ್ರಾಮಗಳಲ್ಲಿ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಿದ್ದು ಇದೇ ಪ್ರಥಮವಾಗಿದ್ದು, ವಿಶೇಷ ದಾಖಲೆಯಾಗಿದೆ.
ಸ್ಪರ್ಧೆಯಲ್ಲಿ ವಿವಿಧ ರೀತಿಯ ರಂಗೋಲಿಗಳಾದ ಬೂದನೂರು ಉತ್ಸವದ ಲೋಗೋ, ಕಾಂತಾರ, 3ಡಿ ರಂಗೋಲಿ ಮತ್ತು ಗ್ಯಾರಂಟಿ ಯೋಜನೆಯ ಕುರಿತು ಮಾಹಿತಿ ನೀಡುವಂತಹ ವಿವಿಧ ರೀತಿಯ ರಂಗೋಲಿ ಬಿಡಿಸಿರುವುದನ್ನು ವೀಕ್ಷಣೆ ಮಾಡಿ ಪ್ರಶಂಸೆ ವ್ಯಕ್ತಪಡಿಸಿದರು.
ಬೂದನೂರು ಉತ್ಸವಕ್ಕೆ ಮೆರುಗು ನೀಡಲು ಈಗಾಗಲೇ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿ ಇದರಲ್ಲಿ ಯಶಸ್ವಿಯಾಗಿದ್ದಾರೆ. ಆ ಸ್ಪರ್ಧೆಯಲ್ಲಿ 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಎಲ್ಲ ಮಕ್ಕಳಿಗೂ ಶಾಸಕ ರವಿಕುಮಾರ್ ಅವರೇ ಉಡುಗೊರೆ ನೀಡಿದ್ದಾರೆ. ಇದೀಗ ರಂಗೋಲಿ ಸ್ಪರ್ಧೆಯಲ್ಲೂ ವಿಶೇಷ ಬಹುಮಾನ ನೀಡಲಾಗುತ್ತಿದೆ.
ಹಳೆಬೂದನೂರು ಗ್ರಾಮದಲ್ಲಿ ಮಾತನಾಡಿದ ಶಾಸಕ ಪಿ.ರವಿಕುಮಾರ್ ಗಣಿಗ, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಸಮಾಧಾನಕರ ಬಹುಮಾನ ವಿತರಿಸಲಾಗುವುದು. ಪ್ರತಿ ಗ್ರಾಮಕ್ಕೂ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ವೇದಿಕೆ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಉಪ ವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ವಿಶ್ವನಾಥ್, ತಾಪಂ ಇಒ ಲೋಕೇಶ್‌ಮೂರ್ತಿ, ಬೂದನೂರು ಪಿಡಿಒ ಸ್ವಾಮಿ, ಜಿಪಂ ಮಾಜಿ ಸದಸ್ಯ ಯೋಗೇಶ್, ಮುಖಂಡರಾದ ಬಿ.ಎನ್.ರಘು, ಮಂಜು, ಚೈತ್ರೇಶ್, ಕೆಂಪೇಗೌಡ, ಜಯರಾಮು, ಶಂಕರ್ ಇತರರಿದ್ದರು.