ಧಾರ್ಮಿಕ ಆಚರಣೆಯಿಂದ ಪರಂಪರೆ ಪಾಲನೆ

ಹಲಗೂರು ಸಮೀಪದ ಹಲಸಹಳ್ಳಿ ಗವಿಮಠದಲ್ಲಿ ಹಮ್ಮಿಕೊಂಡಿದ್ದ ರಾಜಗೋಪುರ ಮತ್ತು ಬಸವದ್ವಾರ ಉದ್ಘಾಟನಾ ಸಮಾರಂಭದಲ್ಲಿ ಸಚಿವ ಈಶ್ವರ ಖಂಡ್ರೆ, ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕನಕಪುರ ದೇಗುಲ ಮಠದ ಶ್ರೀ ಚನ್ನಬಸವಸ್ವಾಮಿ, ಕುದೇರು ಮಠದ ಶ್ರೀ ಗುರುಶಾಂತಸ್ವಾಮಿ, ಮರಳೆಗವಿ ಮಠದ ಶ್ರೀ ಶಿವರುದ್ರಸ್ವಾಮಿ, ಮಾಜಿ ಶಾಸಕ ಕೆ.ಅನ್ನದಾನಿ ಇತರರು ಇದ್ದರು.
ಹಲಗೂರು ಸಮೀಪದ ಹಲಸಹಳ್ಳಿ ಗವಿಮಠದಲ್ಲಿ ಹಮ್ಮಿಕೊಂಡಿದ್ದ ರಾಜಗೋಪುರ ಮತ್ತು ಬಸವದ್ವಾರ ಉದ್ಘಾಟನಾ ಸಮಾರಂಭದಲ್ಲಿ ಸಚಿವ ಈಶ್ವರ ಖಂಡ್ರೆ, ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕನಕಪುರ ದೇಗುಲ ಮಠದ ಶ್ರೀ ಚನ್ನಬಸವಸ್ವಾಮಿ, ಕುದೇರು ಮಠದ ಶ್ರೀ ಗುರುಶಾಂತಸ್ವಾಮಿ, ಮರಳೆಗವಿ ಮಠದ ಶ್ರೀ ಶಿವರುದ್ರಸ್ವಾಮಿ, ಮಾಜಿ ಶಾಸಕ ಕೆ.ಅನ್ನದಾನಿ ಇತರರು ಇದ್ದರು.
Published on
ಹಲಗೂರು: ಜಾತ್ರೆ, ಉತ್ಸವ ಸೇರಿದಂತೆ ಧಾರ್ಮಿಕ ಆಚರಣೆಗಳಿಂದ ಪರಂಪರೆ ಪಾಲನೆಯಾಗುತ್ತದೆ ಎಂದು ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
ಹಲಗೂರು ಸಮೀಪದ ಹಲಸಹಳ್ಳಿ ಗವಿಮಠದಲ್ಲಿ ರಾಜಗೋಪುರ ಮತ್ತು ಬಸವದ್ವಾರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ನಮ್ಮ ಪರಂಪರೆಯ ಆಚರಣೆಗಳಿಂದ ನಮ್ಮಲ್ಲಿ ಹೊಸ ಚೈತನ್ಯ ಮೂಡುತ್ತದೆ. ಪರಂಪರೆಯು ಪುನರುತ್ಥಾನವಾಗುತ್ತದೆ ಎಂದು ಅವರು ನುಡಿದರು. ಜಾತ್ರೆ, ಉತ್ಸವ ಸಂದರ್ಭದಲ್ಲಿ ನೆರೆ, ಹೊರೆಯ ಊರಿನ ಬಂಧು ಮಿತ್ರರು ಒಂದೆಡೆ ಒಗ್ಗೂಡುತ್ತಾರೆ. ಇದರಿಂದ ಸಂಬಂಧಗಳು ಗಟ್ಟಿಗೊಳ್ಳುತ್ತವೆ ಎಂದರು.
ನಮ್ಮ ಪೂರ್ವಜರು ಮಹಾನ್ ಪರಿಸರ ಪ್ರೇಮಿಗಳಾಗಿದ್ದರು. ನಮಗೆ ಈ ಭೂಮಿಯಲ್ಲಿ ಬದುಕುವ ಹಕ್ಕು ಇರುವಂತೆಯೇ ಖಗ, ಮೃಗ, ಕೀಟ, ಸಸ್ಯಗಳಿಗೂ ಹಕ್ಕಿದೆ ಎಂದು ತಿಳಿದಿದ್ದರು. ಬೆಟ್ಟ, ಗುಡ್ಡಗಳನ್ನೂ ಪೂಜಿಸುತ್ತಿದ್ದರು. ವನಮಹೋತ್ಸವ ಆಚರಿಸುವ ಮೂಲಕ ಕಾಡಿಗೆ ಗೌರವ ನೀಡುತ್ತಿದ್ದರು. ಅವರೆಲ್ಲರೂ ಸೇರಿ ಪ್ರಕೃತಿ ಮತ್ತು ಪರಿಸರವನ್ನು ಉಳಿಸಿದ್ದಾರೆ ಎಂದರು. ಆಧುನಿಕ ಜೀವನಶೈಲಿಯು ನಮ್ಮ ನಿದ್ದೆಗೆಡಿಸಿದೆ. ಯುವಜನರು ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮರೆಯುತ್ತಿದ್ದಾರೆ. ಮದ್ಯಪಾನ, ಧೂಮಪಾನ, ಮಾದಕ ದ್ರವ್ಯಗಳು ಬದುಕನ್ನೇ ನಾಶ ಮಾಡುತ್ತವೆ. ಯುವಜನರು ಇಂತಹ ಚಟಗಳಿಂದ ದೂರವಿದ್ದು, ಸರಿಯಾದ ಮಾರ್ಗದಲ್ಲಿ ಸಾಗಲು ಮಠ ಮಾನ್ಯಗಳು ಮಾರ್ಗದರ್ಶಿ ಆಗಬೇಕು ಎಂದರು. ಬಸವಣ್ಣನವರು ಕಾಯಕವೇ ಕೈಲಾಸ ಎಂದರು, ದಾಸೋಹದ ಮಹತ್ವ ತಿಳಿಸಿದರು. ನಾವು ದುಡಿದು ಗಳಿಸಬೇಕು, ಗಳಿಸಿ ಉಳಿಸಬೇಕು, ಉಳಿಸಿದ್ದನ್ನು ದಾಸೋಹದ ಮೂಲಕ ಸಮಾಜಕ್ಕೆ ಮರಳಿ ನೀಡಬೇಕು ಎಂದು ಈಶ್ವರ ಖಂಡ್ರೆ ಹೇಳಿದರು. ಎಲ್ಲ ಧರ್ಮ, ಜಾತಿ, ಭಾಷೆಯವರನ್ನೂ ಅಪ್ಪಿಕೊಂಡು, ಒಪ್ಪಿಕೊಂಡು, ಎಲ್ಲರಿಗೂ ಸಾಮಾಜಿಕ ನ್ಯಾಯಕೊಟ್ಟಿದೆ ವೀರಶೈವ ಲಿಂಗಾಯತ ಸಮುದಾಯ. ಹೀಗಾಗಿ ನಾವು ಸಂಘಟಿತರಾಗಿ ನಮ್ಮವರ ಉಳಿವಿಗಾಗಿ ಶ್ರಮಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಶ್ರೀ ಷಡಕ್ಷರಸ್ವಾಮಿಯ
ಕ್ಷೇತ್ರದಲ್ಲಿ ಭಕ್ತಾದಿಗಳಿಗೆ ಅನುಕೂಲವಾಗುವಂತೆ ದಾಸೋಹ ಭವನ, ಷಡಕ್ಷರ ಮಂಗಳ ಮಂಟಪ ಮತ್ತು ಬೃಹತ್ ರಾಜ ಗೋಪುರ ನಿರ್ಮಿಸಿರುವುದು ಗವಿಮಠದ ಕೀರ್ತಿಯನ್ನು ಬೆಳಗಿಸಿದೆ ಎಂದರು.
ಕ್ಷೇತ್ರವಿಂದು ಬೃಹದಾಕಾರವಾಗಿ ಬೆಳೆಯುತ್ತಿದೆ. ಗುರುವಿನ ಬಗ್ಗೆ ಭಕ್ತಿ ಮತ್ತು ನಿಷ್ಠೆ ಇದ್ದಾಗ ಇಂತಹ ಸಾಧನೆ ಸಾಧ್ಯ. ಭಕ್ತಾದಿಗಳ ಸಹಕಾರದಿಂದ ಕ್ಷೇತ್ರವು ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಹಾಡ್ಲಿ ಸರ್ಕಲ್, ಗ್ರಾಮದ ವಾಸಿ ಲೇಖಕಿ ಶಿಲ್ಪ ಮುತ್ತು ಬರೆದಿರುವ ಷಡಕ್ಷರ ಗವಿಮಠದ ಕಿರು ಪರಿಚಯ ಪುಸ್ತಕವನ್ನು ಅತಿಥಿಗಳು ಬಿಡುಗಡೆ ಮಾಡಿದರು.
ಕನಕಪುರ ದೇಗುಲ ಮಠದ ಶ್ರೀ ಚನ್ನಬಸವಸ್ವಾಮಿ, ಕುದೇರು ಮಠದ ಶ್ರೀ ಗುರುಶಾಂತಸ್ವಾಮಿ, ಮರಳೆಗವಿ ಮಠದ ಶ್ರೀ ಶಿವರುದ್ರಸ್ವಾಮಿ, ಮಾಜಿ ಶಾಸಕ ಕೆ.ಅನ್ನದಾನಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಎಚ್.ಆರ್.ಅಶೋಕ್, ಕುಮಾರ್, ಪ್ರಸೂತಿ ತಜ್ಞ ಡಾ.ಚಂದ್ರಶೇಖರ್, ಮುಖಂಡರಾದ ಹಲಸಹಳ್ಳಿ ನವೀನ್, ಮಹೇಶ್, ಸಿದ್ದಾಚಾರಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net