ಮದ್ದೂರು ತಾಲೂಕಿನಲ್ಲಿ ಮಳೆಗೆ ಮನೆಗಳಿಗೆ ಹಾನಿ

ಮದ್ದೂರು ತಾಲೂಕಿನ ಮೇಲ್ ದಾಸನದೊಡ್ಡಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಮರವೊಂದು ಮನೆಯ ಮೇಲೆ ಬಿದ್ದಿರುವುದು.
ಮದ್ದೂರು ತಾಲೂಕಿನ ಮೇಲ್ ದಾಸನದೊಡ್ಡಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಮರವೊಂದು ಮನೆಯ ಮೇಲೆ ಬಿದ್ದಿರುವುದು.
Published on
ಮದ್ದೂರು: ತಾಲೂಕಿನಾದ್ಯಂತ ಶುಕ್ರವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಯಿಂದಾಗಿ ಹಲವು ಅವಘಡಗಳು ಸಂಭವಿಸಿವೆ.
ತಾಲೂಕಿನ ಕೆಸ್ತೂರು, ಕೊಪ್ಪ, ಬೆಸಗರಹಳ್ಳಿ, ಕೆ.ಹೊನ್ನಲಗೆರೆ ಇತರ ಗ್ರಾಮಗಳಲ್ಲಿ ಬಿರುಗಾಳಿ ಸಹಿತ ಮಳೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುರಿಯಿತು. ರೈತರಿಗೆ ಮಳೆಯು ಹರ್ಷ ಮೂಡಿಸುವ ಜತೆಗೆ ಜಮೀನುಗಳಲ್ಲಿ ಬೆಳೆದು ನಿಂತ ಕಬ್ಬು, ಭತ್ತ, ರಾಗಿ, ಬಾಳೆ ಇತರ ಬೆಳೆಗಳು ನೆಲ ಕಚ್ಚಿದ್ದು, ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ಕೆಲ ಗ್ರಾಮಗಳಲ್ಲಿ ಬೃಹತ್ ಗ್ರಾಮದ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಪಾಲಿ ಹೌಸ್, ಮನೆಯ ಹಂಚುಗಳು ಬಿರುಗಾಳಿಗೆ ಹಾರಿ ಹೋಗಿವೆ.
ಕೊಪ್ಪ ಸಂತೆ ಮೈದಾನದಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮಳೆ ನೀರು ಅಂಗಡಿ ಮುಂಗಟ್ಟುಗಳಿಗೆ ನುಗ್ಗಿದೆ. ಮೇಲ್‌ದಾಸನ ದೊಡ್ಡಿ ಗ್ರಾಮದ ರಸ್ತೆ ಬದಿಯಲ್ಲಿದ್ದ ಬೃಹತ್ ಮರವೊಂದು ಚೆಲುವಯ್ಯ ಎಂಬುವರ ಮನೆ ಮೇಲೆ ಬಿದ್ದು ಹಾನಿ ಉಂಟಾಗಿದೆ. ಅಲ್ಲದೆ ವಿದ್ಯುತ್ ಕಂಬ ಧರೆಗುಳಿದಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ಹಳ್ಳಿಕೆರೆ ಗ್ರಾಮದ ಯೋಗೇಶ್ ಎಂಬುವರ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಟಿವಿ, ಇನ್ನಿತರ ವಸ್ತುಗಳು ಹಾನಿಗೊಳಗಾಗಿವೆ. ಬನ್ನಹಳ್ಳಿ ಗ್ರಾಮದ ಪುಟ್ಟಸಿದ್ದಮ್ಮ ಅವರ ಮನೆಯ ಸೀಟುಗಳು ಹಾನಿ ಆಗಿವೆ. ಘಟನಾ ಸ್ಥಳಕ್ಕೆ ಕಂದಾಯ ನಿರೀಕ್ಷಕರು ಹಾಗೂ ಗ್ರಾಮಲೆಕ್ಕಿಗರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ನಗರ ವ್ಯಾಪ್ತಿಯಲ್ಲಿ ಸುರಿದ ಮಳೆಯಿಂದಾಗಿ ರಾತ್ರಿಯಿಡಿ ವಿದ್ಯುತ್ ಪೂರೈಕೆ ಇಲ್ಲದೆ ಕತ್ತಲಿನಲ್ಲಿ ಕಾಲ ಕಳೆಯಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ ಮಳೆ ನೀರು ರಸ್ತೆಯಲ್ಲಿ ಹರಿದ ಪರಿಣಾಮ ಹಳ್ಳಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೂ ತೊಡಕುಂಟಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net