ಕಾವೇರಿ ಸಮಸ್ಯೆ, ರಾಹುಲ್‌ಗಾಂಧಿ ಬಗೆಹರಿಸಲಿ: ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕೆ

ಮಂಡ್ಯ ನಗರದ ಮಹಾವೀರ ವೃತ್ತದಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮತ್ತು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸ್ಥಳೀಯ ಬಿಜೆಪಿ ಮುಖಂಡರೊಂದಿಗೆ ಚರ್ಚೆ ನಡೆಸಿದರು.
ಮಂಡ್ಯ ನಗರದ ಮಹಾವೀರ ವೃತ್ತದಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮತ್ತು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸ್ಥಳೀಯ ಬಿಜೆಪಿ ಮುಖಂಡರೊಂದಿಗೆ ಚರ್ಚೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ತ.ನಾಡಿಗೆ ನೀರು ಹರಿಸಿದರೆ ಹೋರಾಟ

ಮಂಡ್ಯ:

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ತಮಿಳುನಾಡಿನಲ್ಲೂ ಕಾಂಗ್ರೆಸ್ ಬೆಂಬಲಿತ ಸರ್ಕಾರವಿದೆ. ಹೀಗಿರುವಾಗ ಕಾಂಗ್ರೆಸ್‌ನ ಯುವ ನಾಯಕ ರಾಹುಲ್‌ಗಾಂಧಿ ಅವರು ಎರಡೂ ರಾಜ್ಯದ ಸಿಎಂ ಜತೆ ಸಂಧಾನದ ಮಾತುಕತೆ ಮೂಲಕ ಕಾವೇರಿ ನದಿ ನೀರಿನ ಸಮಸ್ಯೆ ಬಗೆಹರಿಸಬಹುದು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರಮೋದಿಯವರಾಗಲೀ ಅಥವಾ ಕೇಂದ್ರ ಸರ್ಕಾರವಾಗಲೀ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ. ಜಲವಿವಾದಗಳನ್ನು ಬಗೆಹರಿಸುವ ಸಲುವಾಗಿ ನೀರು ನಿರ್ವಹಣಾ ಸಮಿತಿ ಮತ್ತು ಪ್ರಾಧಿಕಾರ ರಚಿಸಲಾಗಿದೆ. ಅಲ್ಲಿಗೆ ಎಲ್ಲ ವೈಜ್ಞಾನಿಕ ಮಾಹಿತಿ ನೀಡಬೇಕು. ಅದರ ನಂತರದ ಸ್ಥಾನದಲ್ಲಿ ಸುಪ್ರೀಂ ಕೋರ್ಟ್ ಇದೆ. ಅಲ್ಲಿ ಮೇಲ್ಮನವಿ ಸಲ್ಲಿಸಿ ಸಮರ್ಥವಾಗಿ ವಾದ ಮಂಡಿಸಬೇಕು. ಅದು ಬಿಟ್ಟು ಪ್ರಧಾನಿ ಅಥವಾ ಕೇಂದ್ರ ಸರ್ಕಾರ ಬಗೆಹರಿಸಲಿ ಎನ್ನುವುದು ಹಾಸ್ಯಾಸ್ಪದ ಎಂದು ಟೀಕಿಸಿದರು.
ಕಾವೇರಿ ಕಣಿವೆ ಪ್ರದೇಶದಿಂದ ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಹರಿಸಬಾರದು. ಒಂದು ವೇಳೆ ನೀರು ಬಿಟ್ಟಲ್ಲಿ ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸಲಾಗುವುದು. ನಮ್ಮಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಇರುವ ನೀರನ್ನೇ ತಮಿಳುನಾಡಿಗೆ ಹರಿಸಿದರೆ, ನಮ್ಮ ಜನರು ಸಂಕಷ್ಟಕ್ಕೆ ಒಳಗಾಗುತ್ತಾರೆ. ಇರುವ ನೀರನ್ನು ಕುಡಿಯುವ ಆಧ್ಯತೆಗೆ ಇಟ್ಟುಕೊಳ್ಳಬೇಕು ಎಂದು ಒತ್ತಾಯಿಸಿದರು.
ಈ ವರ್ಷದ ಮಳೆ ಸಂಬಂಧ ಹಿಂದೆಯೇ ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು. ಅದರಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿತ್ತು. ಜಲತಜ್ಞರು, ತಂತ್ರಜ್ಞರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಂತಹ ಹಿರಿಯ ನಾಯಕರನ್ನು ಸಂಪರ್ಕಿಸಿ ಚರ್ಚೆ ನಡೆಸಬೇಕಿತ್ತು. ಯಾವುದೇ ಕ್ರಮಗಳನ್ನು ಅನುಸರಿಸದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ, ವಿಪಕ್ಷಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಈಗ ನಮ್ಮ ಕಡೆ ಬೊಟ್ಟು ಮಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.
ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಪ್ರಧಾನಿಯವರಿಗೆ ಪತ್ರ ಬರೆಯುವುದಾಗಿ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಜೋಸೆಫ್ ಅವರು ತಿಳಿಸಿದ್ದಾರೆ. ಕಾವೇರಿ ಹಾಗೂ ಮೇಕೆದಾಟು ವಿಚಾರವಾಗಿ ಅವರೊಂದಿಗೆ ಚರ್ಚೆ ನಡೆಸುವುದಾದರು ಏಕೆ ಎಂದು ಪ್ರಶ್ನಿಸಿದ ಅವರು, ನಾಡಿನ ಜಲ, ನೆಲ, ಭಾಷೆ ವಿಚಾರವಾಗಿ ಯಾವುದೇ ಸಂಘಟನೆಗಳು ಹೋರಾಟ ನಡೆಸಿದರೆ ನಮ್ಮ ಸಂಪೂರ್ಣ ಬೆಂಬಲವಿದೆ. ಮಂಡ್ಯ ಬಂದ್‌ಗೆ ಕರೆ ನೀಡಿರುವ ಸಂಘಟನೆಗೂ ನಮ್ಮ ಬೆಂಬಲ ಇರುವುದಾಗಿ ಅವರು ಘೋಷಿಸಿದರು.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಎಚ್.ಆರ್.ಅಶೋಕ್‌ಕುಮಾರ್, ಬಿಜೆಪಿ ಹಿರಿಯ ಮುಖಂಡರಾದ ಚಂದಗಾಲು ಶಿವಣ್ಣ, ಶ್ರೀಧರ್ ಇತರರಿದ್ದರು.


ರಾಜ್ಯಸರ್ಕಾರಕ್ಕೆ ಜವಾಬ್ದಾರಿ ಇಲ್ಲ
ರಾಜ್ಯಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿಯೂ ಇಲ್ಲ. ಅದೇ ರೀತಿ ಅನ್ನದಾತರನ್ನು ರಕ್ಷಣೆ ಮಾಡಬೇಕೆನ್ನುವ ಜವಾಬ್ದಾರಿಯೂ ಇಲ್ಲ ಎಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಯುವ ನಾಯಕ ಇಂಡುವಾಳು ಸಚ್ಚಿದಾನಂದ ಟೀಕಿಸಿದರು.
ರಾಜ್ಯದ ರೈತರ ಕಷ್ಟ ಆಲಿಸದ ಕಾಂಗ್ರೆಸ್ ನಾಯಕರು, ಸಚಿವ ಸಂಪುಟ ವಿಸ್ತರಣೆ ಮಾಡುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಕರ್ನಾಟಕ ಬಿಟ್ಟು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಜಿಲ್ಲೆಯಲ್ಲಿ ಒಣಗಿ ನಿಂತ ಬೆಳೆಗಳನ್ನು ಉಳಿಸಿಕೊಳ್ಳಲು ನೀರು ಹರಿಸಿ ಎಂದು ಪ್ರತಿಭಟನೆ ಮಾಡಿದರೂ ತಕ್ಷಣ ಸ್ಪಂದಿಸಲಿಲ್ಲ. ತೀವ್ರ ಹೋರಾಟಕ್ಕೆ ಹೆದರಿ ಕೊನೆಗೂ ನಾಲೆಗೆ ನೀರು ಹರಿಸಿದರು. ಆದರೆ ತ.ನಾಡಿಗೆ ನೀರು ಹರಿಸುವ ವಿಚಾರದಲ್ಲಿ ಉತ್ಸುಹಕತೆ ತೋರುತ್ತಿದ್ದಾರೆ. ಇವರಿಗೆ ಮುಂದಿನ ದಿನದಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net