ಮಂಡ್ಯ:ಬೇಸಿಗೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನಿಗಾ ವಹಿಸಬೇಕೆಂದು ಅಧಿಕಾರಿಗಳು ಗಮನಹರಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಬೇಸಿಗೆ ಪ್ರಯುಕ್ತ ಕೈಗೊಳ್ಳಬೇಕಾದ ಕ್ರಮ ಹಾಗೂ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಅವರು, ಮುಂದಿನ ದಿನದಲ್ಲಿ ಅಗತ್ಯಕ್ಕಿಂತ ಹೆಚ್ಚು ಮಳೆಯಾಗದಿರುವ ಸಾಧ್ಯತೆ ಇದೆ. ಹೀಗಾಗಿ ಕುಡಿಯುವ ನೀರಿಗೆ ಸಮಸ್ಯೆಯಾಗದ ರೀತಿಯಲ್ಲಿ ಆಗತ್ಯ ಕ್ರಮ ಕೈಗೊಳ್ಳಬೇಕು. ಆರ್ಥಿಕ ವರ್ಷದ ಆರಂಭದ ಹಿನ್ನೆಲೆಯಲ್ಲಿ ಕ್ರಿಯಾಯೋಜನೆ ರೂಪಿಸಿ ಅದಕ್ಕೆ ಅನುಮತಿ ಪಡೆದು ಜೂನ್‌ಗೆ ಕಾರ್ಯ ಯೋಜನೆ ಮಾಡಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ 289 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗುರುತಿಸಲಾಗಿದ್ದು, 256 ಕಡೆ ಖಾಸಗಿ ಬೋರ್‌ವೆಲ್ ಬಾಡಿಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ. ಈಗಾಗಲೇ 167 ಕೊಳವೆ ಬಾವಿಯಲ್ಲಿ ನೀರಿನ ಅಭಾವ ಇದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಸೂಕ್ತ ಕ್ರಮ ವಹಿಸಬೇಕು. ಬರಗಾಲದ ಹಿನ್ನೆಲೆಯಲ್ಲಿ ಎಲ್ಲ ಅಧಿಕಾರಿಗಳು ಪ್ರತಿ ವಾರ ಟಾಸ್ಕ್‌ಫೋರ್ಸ್ ಸಭೆ ಮಾಡಬೇಕು. ಕುಡಿಯುವ ನೀರಿಗೆ ಸಮಸ್ಯೆಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಜಾನುವಾರುಗಳಿಗೆ ಹಸಿ ಮತ್ತು ಒಣ ಮೇವು ಸೌಲಭ್ಯವು 43 ವಾರಕ್ಕೆ ಆಗುವಷ್ಟು ದಾಸ್ತಾನು ಇದೆ. ಸಧ್ಯಕ್ಕೆ ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಯಲ್ಲಿ ಯಾವುದೇ ತೊಂದರೆಯಾಗದಂತೆ ವೈದ್ಯರು ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಜಿಲ್ಲೆಯಲ್ಲಿ 289 ಗ್ರಾಮಗಳಲ್ಲಿ 256 ಕಡೆ ಖಾಸಗಿ ಬೋರೆವೆಲ್ ಬಾಡಿಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ. ಈಗಾಗಲೇ 167 ಕೊಳವೆ ಬಾವಿಯಲ್ಲಿ ನೀರಿನ ಅಭಾವ ಇದೆ. ಆದರೂ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನು ಕೆಲವೆಡೆ ನೀರಿನ ಗುಣಮಟ್ಟದ ಪರೀಕ್ಷೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚ್ಚಿನ್ ಚಲುವರಾಯಸ್ವಾಮಿ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಎಸ್ಪಿ ಡಾ.ವಿ.ಜೆ.ಶೋಭಾರಾಣಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಇತರರಿದ್ದರು.
ಇದೇ ವೇಳೆ ಸಭೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚು ಅಂಕ ಪಡೆದ ವಿಜ್ಞಾನ ವಿಭಾಗದಿಂದ ಪಿ.ಎಸ್.ಸಹನಾ, ವಾಣಿಜ್ಯ ವಿಭಾಗದ ಫೈಜ ಆಲಿ ಸಯದ್ ಮತ್ತು ಕಲಾ ವಿಭಾಗದಿಂದ ಎಚ್.ಪಿ.ತೇಜಸ್ವಿನಿ, ದರ್ಶಿನಿ, ಸಂಜನಾ ಅವರನ್ನು ಅಭಿನಂದಿಸಲಾಯಿತು.