ಜವಳಿ ಪಾರ್ಕ್‌ಗೆ ಸ್ಥಳ ಪರಿಶೀಲಿಸಿ: ಶಾಸಕ ಪಿ.ರವಿಕುಮಾರ್ ಗಣಿಗ ಸೂಚನೆ

ಮಂಡ್ಯದಲ್ಲಿ ಆಯೋಜಿಸಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಪಿ.ರವಿಕುಮಾರ್ ಗಣಿಗ ಮಾತನಾಡಿದರು.
ಮಂಡ್ಯದಲ್ಲಿ ಆಯೋಜಿಸಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಪಿ.ರವಿಕುಮಾರ್ ಗಣಿಗ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ
  • ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜನೆ
ಮಂಡ್ಯ: ತಾಲೂಕಿನ ಬಾಳೇನಹಳ್ಳಿ, ಮಾಡವೀರನಹಳ್ಳಿ ಭಾಗದಲ್ಲಿ ಜವಳಿ ಪಾರ್ಕ್ ಪ್ರಾರಂಭಿಸುವ ನಿಟ್ಟಿನಲ್ಲಿ ಸ್ಥಳ ಪರಿಶೀಲನೆ ನಡೆಸಿ ಎಂದು ಅಧಿಕಾರಿಗಳಿಗೆ ಶಾಸಕ ಪಿ.ರವಿಕುಮಾರ್ ಗಣಿಗ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಾಳೇನಹಳ್ಳಿ, ಮಾಡವೀರನಹಳ್ಳಿ ಭಾಗದಲ್ಲಿ ಸುಮಾರು 150 ಎಕರೆ ಸರ್ಕಾರಿ ಜಮೀನು ಸಿಗಬಹುದು. ಇದನ್ನು ಅಭಿವೃದ್ಧಿಪಡಿಸಬಹುದು ಎಂದರು.
ಕೈಮಗ್ಗ ಮತ್ತು ಜವಳಿ ಇಲಾಖೆ ಅಧಿಕಾರಿ ಮಾತನಾಡಿ, ಕೇಂದ್ರ ಸರ್ಕಾರದ ಭಾರತ್ ಔದ್ಯೋಗಿಕ್ ವಿಕಾಸ್ ಯೋಜನೆ(ಭವ್ಯ)ಯಡಿ ಕೈಗಾರಿಕೆ ಪ್ರಾರಂಭಕ್ಕೆ ಅನುದಾನವಿದೆ. ಕನಿಷ್ಟ ನೂರು ಎಕರೆ ಜಮೀನಿದ್ದರೆ ಅನುದಾನ ಸಿಗಲಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪಿ.ರವಿಕುಮಾರ್ ಗಣಿಗ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ. ಸರಿಯಾಗಿ ಕೆಲಸ ಮಾಡಿ ಅನುಷ್ಠಾನಗೊಳಿಸಿದರೆ ಮೂರೇ ತಿಂಗಳಲ್ಲಿ ಆ ಭಾಗದಲ್ಲಿ ಜವಳಿ ಪಾರ್ಕ್ ಪ್ರಾರಂಭಿಸಿ ಸಾವಿರಾರೂ ಜನರಿಗೆ ಉದ್ಯೋಗ ನೀಡಬಹುದು ಎಂದರು.
ತಹಸೀಲ್ದಾರ್ ವಿಶ್ವನಾಥ್ ಮಾತನಾಡಿ, ಈ ಸಂಬಂಧ ಶೀಘ್ರವೇ ಸ್ಥಳ ಪರಿಶೀಲಿಸಿ ವರದಿ ನೀಡಲಾಗುವುದು ಎಂದರು. ಶಾಸಕ ಪ್ರತಿಕ್ರಿಯಿಸಿ, ಅಧಿಕೃತ ದಾಖಲೆ ಹೊಂದಿರುವವರು ಭೂಮಿ ಕಳೆದುಕೊಂಡರೆ ಅವರಿಗೆ ಸರ್ಕಾರದಿಂದ ಪರಿಹಾರ ನೀಡಲಾಗುವುದು. ಒಂದು ವೇಳೆ ಅನಧಿಕೃತವಾಗಿ ಉಳುಮೆ ಮಾಡಿಕೊಂಡಿದ್ದರೆ ಯಾವುದೇ ಪರಿಹಾರ ಸಿಗುವುದಿಲ್ಲ. ಈ ವಿಚಾರದಲ್ಲಿ ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು. ಒಟ್ಟಾರೆ ತ್ವರಿತವಾಗಿ ಕೆಲಸ ಮಾಡಿ ಯುವ ಜನರಿಗೆ ಉದ್ಯೋಗ ಕಲ್ಪಿಸೋಣ ಎಂದು ಹೇಳಿದರು.
ಖಾತೆ ಮಾಡಿಸಿಕೊಳ್ಳಲು ವಿವರ ಸಲ್ಲಿಸಿ: ತಹಸೀಲ್ದಾರ್ ವಿಶ್ವನಾಥ್ ಮಾತನಾಡಿ, ಮಂಡ್ಯ ಉತ್ತರ ವಲಯದ ಹಾಗೂ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಗಳ ಹೆಸರಿಗೆ ಖಾತೆ ಮಾಡಿಕೊಡಲಾಗುವುದು. ಈ ಸಂಬಂಧ ಕೂಡಲೇ ಮಾಹಿತಿ ಒದಗಿಸಿ. ಸರ್ವೇ ನಂಬರ್ ಜಾಗದಲ್ಲಿದ್ದರೆ ತಹಸೀಲ್ದಾರ್ ಹಾಗೂ ಗ್ರಾಮ ಠಾಣಾ ಜಾಗದಲ್ಲಿದ್ದರೆ ವಿಎ ಖಾತೆ ಮಾಡಿಕೊಡುತ್ತಾರೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಡಾ.ಶಿವಲಿಂಗಯ್ಯ, ತಾಪಂ ಇಒ ಲೋಕೇಶ್‌ಮೂರ್ತಿ, ಡಿವೈಎಸ್ಪಿ ಲಕ್ಷ್ಮೀನಾರಾಯಣ್ ಪ್ರಸಾದ್ ಸೇರಿದಂತೆ ಕೆಡಿಪಿ ಸಮಿತಿ ಸದಸ್ಯರು ಹಾಗೂ ತಾಲೂಕುಮಟ್ಟದ ಅಧಿಕಾರಿಗಳಿದ್ದರು.

ಬಾರ್‌ಗೆ ಲೈಸೆನ್ಸ್ ಬೇಡ
ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಇನ್ನು ಮುಂದೆ ಮದ್ಯದಂಗಡಿಗೆ ಹೊಸ ಪರವಾನಗಿ ನೀಡಬಾರದೆಂದು ಅಬಕಾರಿ ಇಲಾಖೆ ಅಧಿಕಾರಿಗೆ ಶಾಸಕ ಪಿ.ರವಿಕುಮಾರ್ ಗಣಿಗ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈಗಾಗಲೇ ಕ್ಷೇತ್ರದಲ್ಲಿ ಹೆಚ್ಚಿನ ಮದ್ಯದಂಗಡಿ ಇವೆ. ಜನರು ಕುಡಿದು ಹಾಳಾಗುತ್ತಿದ್ದಾರೆ. ಆದ್ದರಿಂದ ಮತ್ತೆ ಹೊಸ ಪರವಾನಗಿ ಕೊಡಬೇಡಿ. ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಉದ್ಯಮಿಗಳು ಬಂದು ಹೊಸ ಪರವಾನಗಿ ಪಡೆದು ಮದ್ಯದಂಗಡಿ ಮಾಡಿ ಜನರಿಗೆ ಕುಡಿಸಿ ಹಾಳು ಮಾಡುತ್ತಾರೆ. ಈ ಸಂಬಂಧ ಅಬಕಾರಿ ಡಿಸಿಗೂ ಪತ್ರ ಬರೆಯುತ್ತೇನೆ. ಇದಲ್ಲದೆ ಬಸರಾಳು ಭಾಗಕ್ಕೆ ನಾಗಮಂಗಲ, ಶ್ರೀರಂಗಪಟ್ಟಣ ಭಾಗದಿಂದ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಈ ಬಗ್ಗೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕೆಂದು ತಿಳಿಸಿದರು.

ಎಫ್‌ಐಆರ್ ಮಾಡಿಸುತ್ತೇನೆ
ತಾಲೂಕಿನಲ್ಲಿ ಚಿರತೆ ಹಾವಳಿಗೆ ಸಂಬಂಧಿಸಿದಂತೆ ಸರಿಯಾದ ಕ್ರಮ ವಹಿಸದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುತ್ತೇನೆ ಎಂದು ಪಿ.ರವಿಕುಮಾರ್ ಗಣಿಗ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಜರಿ ಇರಲಿಲ್ಲ. ಇದರಿಂದ ಆಕ್ರೋಶಗೊಂಡ ಶಾಸಕ, ಕೂಡಲೇ ಸಭೆಗೆ ಬರಬೇಕೆಂದು ಆದೇಶಿಸಿದರು. ನಂತರ ಸಭೆಗೆ ಆಗಮಿಸಿದ ಅರಣ್ಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಚಿರತೆ ಹಾವಳಿ ಎಂದು ರೈತರು ಕರೆ ಮಾಡಿದರೆ ಕನಿಷ್ಟ ಸ್ಪಂದನೆ ನೀಡುವುದಿಲ್ಲ. ಗುರುವಾರ ಬೆಳಗ್ಗೆ ತಾಳೆಮೇಳೆದೊಡ್ಡಿ ಭಾಗದಲ್ಲಿ ಚಿರತೆ ದಾಳಿಗೆ ಕುರಿ ಮೃತಪಟ್ಟಿದೆ. ಅರಣ್ಯ ಇಲಾಖೆ ಏನು ಕೆಲಸ ಮಾಡುತ್ತಿದೆ. ಇಂತಹ ನಿರ್ಲಕ್ಷೃ ಮುಂದುವರೆಸಿದರೆ ರೈತರಿಂದ ದೂರು ಪಡೆದು ಎಫ್‌ಐಆರ್ ಮಾಡಿಸುತ್ತೇನೆ ಎಂದರು.

ಬನ್ನಿ, ಗಿಡ ಲೆಕ್ಕ ಹಾಕಿಕೊಂಡು ಬರೋಣ
ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಗಿಡ ನೆಡಲು ಕಳೆದ ವರ್ಷ ಬಿಡುಗಡೆಯಾಗಿರುವ ಅನುದಾನ ಹಾಗೂ ಈ ವರ್ಷ ನಿಗದಿಯಾಗಿರುವ ಅನುದಾನ ಬಗ್ಗೆ ಶಾಸಕ ಪಿ.ರವಿಕುಮಾರ್ ಗಣಿಗ ಮಾಹಿತಿ ಕೇಳಿದರು. ಈ ವೇಳೆ ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ತಡಬಡಾಯಿಸಿದರು. ಶಾಸಕರು ಪ್ರತಿಕ್ರಿಯಿಸಿ, ನಾನು ಸೇರಿದಂತೆ ಕೆಡಿಪಿ ಸಮಿತಿಯ ಐವರು ಸದಸ್ಯರಿದ್ದೇವೆ. ಈವರೆಗೆ ಅದೆಷ್ಟು ಗಿಡ ನೆಟ್ಟು ಫೋಷಣೆ ಮಾಡಿದ್ದೀರಿ ನೋಡಿ ಲೆಕ್ಕಹಾಕಿಕೊಂಡು ಬರೋಣ ಬನ್ನಿ ಎಂದರು.

ವಿದ್ಯಾರ್ಥಿಗಳಿಗಾಗಿ ಬಸ್ ಸಂಚರಿಸಲಿ
ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್‌ಗಳ ಸಂಚಾರಕ್ಕೆ ಕ್ರಮ ವಹಿಸುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗೆ ಶಾಸಕ ಪಿ.ರವಿಕುಮಾರ್ ಗಣಿಗ ಸೂಚಿಸಿದರು. ಇದೊಂದು ದೊಡ್ಡ ಸಮಸ್ಯೆಯಾಗಿದೆ. ಆದ್ದರಿಂದ ಕಾಲೇಜಿಗೆ ಬರುವ ಹಾಗೂ ಸಂಜೆ ಮನೆಗೆ ಹೋಗುವ ಸಮಯಕ್ಕೆ ಬಸ್ ಸಂಚಾರ ಮಾಡಿದರೆ ಅನುಕೂಲ. ಈ ನಿಟ್ಟಿನಲ್ಲಿ ಮಂಡ್ಯದಿಂದ ಗೋಪಾಲಪುರ ಮಾರ್ಗವಾಗಿ ಬಸರಾಳು, ಮಂಡ್ಯದಿಂದ ಹಲ್ಲೆಗೆರೆ ಮಾರ್ಗವಾಗಿ ಚಂದಗಾಲು ಹಾಗೂ ಉಪ್ಪರಕನಹಳ್ಳಿ, ಕೀಲಾರ ಮಾರ್ಗವಾಗಿ ಬಸ್ ಸಂಚಾರಕ್ಕೆ ಕ್ರಮ ವಹಿಸಿ. ಈ ಸಂಬಂಧ ಶೀಘ್ರದಲ್ಲೇ ಶಿಕ್ಷಣ ಇಲಾಖೆ ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ಮಾಡಲಾಗುವುದು ಎಂದರು.

ಕಚೇರಿಯಲ್ಲಿ ಕುಳಿತರೆ ಆಗಲ್ಲ
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ರುದ್ರಪ್ಪ, ಈವರೆಗೆ ಎಷ್ಟು ಜನ ಬಾಲಕಾರ್ಮಿಕರನ್ನು ರಕ್ಷಣೆ ಮಾಡಿ ಕೇಸ್ ದಾಖಲು ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಕಾರ್ಮಿಕ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸಿ, ಈವರೆಗೆ ಎಂಟು ಎಫ್‌ಐಆರ್ ದಾಖಲಿಸಲಾಗಿದೆ ಎಂದಾಗ ಅಸಮಾಧಾನ ವ್ಯಕ್ತಪಡಿಸಿದ ರುದ್ರಪ್ಪ, ನನ್ನೊಂದಿಗೆ ಬನ್ನಿ. ಎಷ್ಟು ಜನ ಬಾಲಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ ತೋರಿಸುತ್ತೇನೆ. ಇಂತಹದರ ವಿರುದ್ಧ ಕ್ರಮ ವಹಿಸಬೇಕು. ಸುಮ್ಮನೆ ಕಚೇರಿಯಲ್ಲಿ ಕುಳಿತರೆ ಪ್ರಯೋಜನವಿಲ್ಲ ಎಂದರು.

ಗುಣಮಟ್ಟದ ಆಹಾರ ಪೂರೈಕೆಯಾಗಲಿ
ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ ಮಾತನಾಡಿ, ಅಂಗನವಾಡಿ ಮಕ್ಕಳು ಹಾಗೂ ಗರ್ಭಿಣಿಯರಿಗೆ ಸರಿಯಾದ ಪ್ರಮಾಣದಲ್ಲಿ ಆಹಾರ ಪೂರೈಕೆಯಾಗುತ್ತಿಲ್ಲ. ಅದರಲ್ಲಿಯೂ ಅಂಗನವಾಡಿ ಮಕ್ಕಳಿಗೆ ಗುಣಮಟ್ಟದ ಆಹಾರ ಕೊಡುತ್ತಿಲ್ಲವೆನ್ನುವ ದೂರು ಕೇಳಿಬರುತ್ತಲೇ ಇದೆ. ಈ ಬಗ್ಗೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.

ರಸಗೊಬ್ಬರಕ್ಕೆ ತೊಂದರೆಯಾಗಬಹುದು
ಮಧ್ಯಪ್ರಾಚ್ಯದಲ್ಲಿ ಯುದ್ಧ ನಡೆಯುತ್ತಿರುವ ಕಾರಣ ಮುಂದೆ ರಸಗೊಬ್ಬರಕ್ಕೆ ಸಮಸ್ಯೆಯಾಗಬಹುದು ಎಂದು ಸಹಾಯಕ ಕೃಷಿ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು. ರಸಗೊಬ್ಬರ ಉತ್ಪಾದನೆಗೆ ಸಿಲಿಂಡರ್ ಅವಶ್ಯಕತೆ ಇದೆ. ಆದ್ದರಿಂದ ಮುಂದಿನ ದಿನದಲ್ಲಿ ಸರ್ಕಾರ ಯಾವ ನಿರ್ಧಾರ ಮಾಡಲಿದೆ ಎನ್ನುವುದನ್ನು ಕಾದುನೋಡಬೇಕು. ಸಧ್ಯಕ್ಕೆ ಯೂರಿಯಾ ಹಾಗೂ ಡಿಎಪಿ ರಸಗೊಬ್ಬರದ ಸಂಗ್ರಹವಿದೆ ಎಂದರು.

ಅನಗತ್ಯವಾಗಿ ವಿದ್ಯುತ್ ಕಡಿತ ಬೇಡ
ಬೇಸಿಗೆ ಅವಧಿಯಲ್ಲಿ ಅನಗತ್ಯವಾಗಿ ವಿದ್ಯುತ್ ಕಡಿತಗೊಳಿಸಿ ಜನರಿಗೆ ಸಮಸ್ಯೆಯಾಗುವಂತೆ ಮಾಡಬೇಡಿ ಎಂದು ಸೆಸ್ಕ್ ಇಲಾಖೆ ಅಧಿಕಾರಿಗಳಿಗೆ ಶಾಸಕ ಪಿ.ರವಿಕುಮಾರ್ ಗಣಿಗ ಸೂಚನೆ ನೀಡಿದರು.
ಚಳಿಗಾಲದಲ್ಲಿ ವಿದ್ಯುತ್ ಕಡಿತವಾದರೆ ಸಮಸ್ಯೆಯಿಲ್ಲ. ಇನ್ನು ಮಳೆಗಾಲದಲ್ಲಿ ಮರ ಬಿದ್ದಿದೆ, ಕಂಬ ಬಿದ್ದಿದೆ ಎಂದು ವಿದ್ಯುತ್ ಪೂರೈಕೆ ಮಾಡುವುದಿಲ್ಲ. ಸಧ್ಯಕ್ಕೆ ಸರ್ಕಾರದಿಂದ ಲೋಡ್‌ಶೆಡ್ಡಿಂಗ್ ಮಾಡುವ ಸೂಚನೆ ಇಲ್ಲ. ಆದರೂ ಏಕೆ ವಿದ್ಯುತ್ ಕಡಿತ ಮಾಡುತ್ತೀರಿ. ಬೇಸಿಗೆ ತಾಪ ಹೆಚ್ಚಾಗಿದೆ. ಈ ಸಮಯದಲ್ಲಿ ವಿದ್ಯುತ್ ಕಡಿತ ಮಾಡಿದರೆ ಜನರು ಹೇಗೆ ಇರಬೇಕು. ಏನಾದರೂ ಕಾಮಗಾರಿ ಮಾಡಿದರೆ ಸಮಯ ಹೊಂದಾಣಿಕೆ ಮಾಡಿಕೊಳ್ಳಬೇಕು. ಅಂತೆಯೇ ಯಾವುದೇ ಕಾರಣಕ್ಕೂ ಅನಗತ್ಯವಾಗಿ ವಿದ್ಯುತ್ ಪೂರೈಕೆ ನಿಲ್ಲಿಸಬಾರದೆಂದು ನಿರ್ದೇಶನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net