ಮದ್ದೂರು ನಗರದ ಪ್ರವಾಸಿ ಮಂದಿರದ ಬಳಿ ರೋಟರಿ, ವರ್ಧಮಾನ್ ಪ್ಯಾರಾ ಮೆಡಿಕಲ್ ಕಾಲೇಜು ಹಾಗೂ ಮಾಂಡವ್ಯ ವಿದ್ಯಾಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೋ ಜಾಥಾಗೆ ಡಾ.ಸಿದ್ದೇಗೌಡ ಚಾಲನೆ ನೀಡಿದರು. ಶ್ರೀನಿವಾಸ್, ತಿಪ್ಪೂರು ರಾಜೇಶ್, ಅನುಪಮಾ, ಕುಮಾರ್, ಪ್ರಕಾಶ್, ಹೊನ್ನೇಗೌಡ, ಶಿವಪ್ಪ ಇದ್ದರು.
ಮದ್ದೂರು: ಭಾರತವನ್ನು ಪೋಲಿಯೋ ಮುಕ್ತ ದೇಶವಾಗಿಸುವ ಉದ್ದೇಶದಿಂದ ಡಿ.21ರಂದು ದೇಶದಾದ್ಯಂತ ಪೋಲಿಯೋ ಲಸಿಕಾ ಅಭಿಯಾನ ನಡೆಸಲಾಗುತ್ತಿದೆ ಎಂದು ಖ್ಯಾತ ಹೃದ್ರೋಗ ತಜ್ಞ ಡಾ.ಸಿದ್ದೇಗೌಡ ತಿಳಿಸಿದರು.
ನಗರದ ಪ್ರವಾಸಿ ಮಂದಿರದ ಬಳಿ ರೋಟರಿ, ವರ್ಧಮಾನ್ ಪ್ಯಾರಾ ಮೆಡಿಕಲ್ ಕಾಲೇಜು ಹಾಗೂ ಮಾಂಡವ್ಯ ವಿದ್ಯಾಸಂಸ್ಥೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪೋಲಿಯೋ ನಿರ್ಮೂಲನೆಗಾಗಿ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಒಂದರಿಂದ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಪೋಲಿಯೋ ಮುಕ್ತ ಭಾರತ ಮಾಡಬೇಕು ಎಂದು ಮನವಿ ಮಾಡಿದರು.
ಭಾರತವು 2014ರಲ್ಲಿ ಪೋಲಿಯೋ ಮುಕ್ತ ರಾಷ್ಟ್ರವೆಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಪ್ರಮಾಣಿತಗೊಂಡಿದ್ದು, ಆ ಸಾಧನೆಯನ್ನು ನಿರಂತರವಾಗಿ ಉಳಿಸಿಕೊಳ್ಳಲು ಸರ್ಕಾರವು ಪ್ರತಿ ವರ್ಷ ಪೋಲಿಯೋ ಅಭಿಯಾನ ಹಮ್ಮಿಕೊಳ್ಳುತ್ತಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ತಿಳಿಸಿದರು.
ಕಾಲೇಜಿನ ವಿದ್ಯಾರ್ಥಿಗಳು ನಗರ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ರೋಟರಿ ಅಧ್ಯಕ್ಷ ಶ್ರೀನಿವಾಸ್, ಜಿಲ್ಲಾ ಕಾರ್ಯದರ್ಶಿ ಬಿ.ಡಿ.ಹೊನ್ನೇಗೌಡ, ವಲಯ ರಾಯಭಾರಿ ತಿಪ್ಪೂರು ರಾಜೇಶ್, ಸಹಾಯಕ ಪಾಲಕಿ ಅನುಪಮಾ, ಮಾಜಿ ಅಧ್ಯಕ್ಷರಾದ ಮಿಲ್ಟ್ರಿಕುಮಾರ್, ಪ್ರಕಾಶ್, ದೇಶಹಳ್ಳಿ ಪಿ.ಶಿವಪ್ಪ ಸೇರಿದಂತೆ ಇತರರು ಇದ್ದರು.