ಸಾಲಬಾಧೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಸಂಬಂಧಿಸಿದಂತೆ ನೊಂದ ಕುಟುಂಬಕ್ಕೆ ಪರಿಹಾರ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಸರ್‌ಎಂ.ವಿ.ಪ್ರತಿಮೆ ಎದುರು ಜಮಾವಣೆಗೊಂಡ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ನಂತರ ಘೋಷಣೆ ಕೂಗಿ ಪರಿಹಾರ ನೀಡುವಂತೆ ಒತ್ತಾಯಿಸಿದರು. ಬಿ.ಹಟ್ನ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ರೈತ ದಂಪತಿ ಹಾಗೂ ಪಾಂಡವಪುರ ತಾಲೂಕು ಮಂಡಿಬೆಟ್ಟಹಳ್ಳಿ ಗ್ರಾಮದ ರೈತ ಕುಟುಂಬಕ್ಕೆ ತಲಾ 25 ಲಕ್ಷ ರೂ ಪರಿಹಾರ ನೀಡಬೇಕು. ರೈತರ ವೈಯಕ್ತಿಕ ಸೇರಿದಂತೆ ಬ್ಯಾಂಕ್, ಸಹಕಾರ ಸಂಘ ಹಾಗೂ ಇತರೆ ಮೈಕ್ರೋ ಫೈನಾನ್ಸ್ ಸಂಸ್ಥೆಗಳಲ್ಲಿ ಪಡೆದಿರುವ ಸಾಲವನ್ನು ಋಣಮುಕ್ತ ಕಾಯ್ದೆ ಜಾರಿಗೆ ತರುವ ಮೂಲಕ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿರುವ ರಾಜ್ಯದ ಎಲ್ಲ ರೈತ ಕುಟುಂಬಗಳಿಗೆ ತಕ್ಷಣ ಬಾಕಿ ಪರಿಹಾರ ಮೊತ್ತ ಬಿಡುಗಡೆಗೊಳಿಸಬೇಕು. ಎಂ.ಎಸ್.ಸ್ವಾಮಿನಾಥನ್ ಆಯೋಗದ ವರದಿಯಂತೆ ರೈತರ ಎಲ್ಲ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿ ಮಾಡಬೇಕು. ರಸಗೊಬ್ಬರ, ಕ್ರಿಮಿನಾಶಕ, ಬಿತ್ತನೆ ಬೀಜ ಸೇರಿದಂತೆ ಎಲ್ಲ ಕೃಷಿ ಪರಿಕರಗಳಿಗೆ ನೀಡುವ ಸಬ್ಸಿಡಿ ಮೊತ್ತ ಹೆಚ್ಚಳ ಮಾಡಬೇಕು. ಜತೆಗೆ ಕಾಳಸಂತೆ ವ್ಯಾಪಾರ ತಡೆಯಬೇಕು ಎಂದು ಒತ್ತಾಯಿಸಿದರು.
ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಬೇಕು, ನಷ್ಟಕ್ಕೊಳಗಾಗುವ ರೈತರನ್ನು ರಕ್ಷಿಸಬೇಕು. ಮೈಕ್ರೋ ಫೈನಾನ್ಸ್ ದಂಧೆ ಕೋರರ ಹಾವಳಿಯನ್ನು ತಡೆಗಟ್ಟಲು ಕಠಿಣ ಕಾನೂನು ಜಾರಿಗೊಳಿಸಬೇಕು. ಬರ, ನೆರೆ ಮುಂತಾದ ಪ್ರಕೃತಿ ವಿಕೋಪಕ್ಕೊಳಗಾದ ಸಂದರ್ಭದಲ್ಲಿ ರೈತರಿಗೆ ವೈಜ್ಞಾನಿಕ ಪರಿಹಾರ ನೀಡಬೇಕು. ಕೃಷಿಗೆ ಸಮಗ್ರವಾದ ನೀರಾವರಿ ಸೌಲಭ್ಯ, ವಿದ್ಯುತ್ ಸಂಪರ್ಕ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ರೈತರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರೈತಾಪಿ ವರ್ಗ ಎದುರಿಸುತ್ತಿರುವ ಸಮಸ್ಯೆಯನ್ನು ಪ್ರತಿಬಿಂಬಿಸುತ್ತದೆ. ಆತ್ಮಹತ್ಯೆ ಸಂಭವಿಸಿದ ನಂತರ ತಂಡೋಪತಂಡವಾಗಿ ದುಃಖಿತರ ಮನೆಗೆ ಆಗಮಿಸಿ ಸಾಂತ್ವನ ಹೇಳಿ ಅರೆಕಾಸಿನ ಪರಿಹಾರ ನೀಡುವ ರಾಜಕಾರಣಿಗಳು ರೈತರ ಸಮಸ್ಯೆ ಅರಿತು ಅವುಗಳಿಗೆ ಪರಿಹಾರ ರೂಪಿಸಲು ಮುಂದಾಗದಿರುವುದು ಅವರ ಗೋಸುಂಬೆತನ ತೋರಿಸುತ್ತದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಚುನಾಯಿತ ಪ್ರತಿನಿಧಿಗಳು ತಮ್ಮ ರಾಜಕೀಯ ಲಾಭಕ್ಕೋಸ್ಕರ ಮೃತ ರೈತರ ಮನೆ ಮುಂದೆ ಬಂದು ಕಣ್ಣೀರು ಹಾಕುವ ಬದಲು ಸತ್ತಂತೆ ಬದುಕಿರುವ ರೈತ ಸಂಕುಲವನ್ನು ಸಮಸ್ಯೆಗಳಿಂದ ಹೊರತರಲು ಎಂ.ಎಸ್.ಸ್ವಾಮಿನಾಥನ್ ಆಯೋಗದ ವರದಿಯಂತೆ ಎಲ್ಲ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿ ಮಾಡಲು ಶಾಸನ ಸಭೆಗಳಲ್ಲಿ ಏಕೆ ದನಿ ಎತ್ತುತ್ತಿಲ್ಲ ಎಂಬುದನ್ನ ನಾವು ಪ್ರಶ್ನಿಸಬೇಕು ಎಂದು ಒತ್ತಾಯಿಸಿದರು.