ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಹಾರೋಹಳ್ಳಿ ಗ್ರಾಮಸ್ಥರೊಂದಿಗೆ ಸೆಸ್ಕ್ ಎಇ ವಿಜಯಲಕ್ಷ್ಮೀ ಮಾತುಕತೆ ನಡೆಸಿದರು.
Published on:
Copied
Follow Us
ಪಾಂಡವಪುರ: ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿ ಹಾರೋಹಳ್ಳಿ ಗ್ರಾಮಸ್ಥರು ಪಟ್ಟಣದ ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಉಪ ವಿಭಾಗೀಯ ಸೆಸ್ಕ್ ಕಚೇರಿ ಮುಂದೆ ಜಮಾಯಿಸಿದ ಹಾರೋಹಳ್ಳಿ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಿತ್ಯ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡದ ಕಾರಣ ಕೃಷಿ ಚಟುವಟಿಕೆ ನಡೆಸಲು ಬಹಳ ತೊಂದರೆಯಾಗುತ್ತಿದೆ. ಇನ್ನೊಂದೆಡೆ ಸಕಾಲಕ್ಕೆ ಮಳೆ ಬಾರದ ಕಾರಣ ಕಟಾವಿಗೆ ಬಂದಿರುವ ಕಬ್ಬು ಬೆಳೆ ಒಣಗುವ ಹಂತ ತಲುಪಿದೆ. ಸೆಸ್ಕ್ ಅಧಿಕಾರಿಗಳು ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಬೆಳೆ ರಕ್ಷಣೆಗೆ, ಹಗಲು ಹಾಗೂ ರಾತ್ರಿವೇಳೆ ಕನಿಷ್ಠ ಮೂರು ತಾಸು ವಿದ್ಯುತ್ ಸರಬರಾಜು ಮಾಡಬೇಕು. ಕೆ.ಆರ್.ಎಸ್.ಜಲಾಶಯದಿಂದ ಸಕಾಲದಲ್ಲಿ ನೀರು ಹರಿಸದ ಕಾರಣ ಕಬ್ಬು ಸೇರಿದಂತೆ ಇತರ ಬೆಳೆಗಳು ಒಣಗುತ್ತಿವೆ. ರೈತರ ಸಂಕಷ್ಟ ಅರಿತು ಕೂಡಲೇ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕೆಂದು ಒತ್ತಾಯಿಸಿದರು. ಬಳಿಕ ಸೆಸ್ಕ್ ಎಇ ವಿಜಯಲಕ್ಷ್ಮೀ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.