ಪಾಂಡವಪುರ ತಾಲೂಕಿನ ಶಂಭೂನಹಳ್ಳಿ ಸಮೀಪ ಕುಸಿದು ಬಿದ್ದಿರುವ ಸೇತುವೆ ದುರಸ್ತಿ ಪಡಿಸುವಂತೆ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರೊಂದಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಚರ್ಚಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ನೀಲನಹಳ್ಳಿ ಧನಂಜಯ, ಮಂಜು, ಕನ್ನಂಬಾಡಿ ಸುರೇಶ್ ಇತರರು ಇದ್ದರು.
ಬಿಜೆಪಿ ಕಾರ್ಯಕರ್ತರಿಂದ ಪಾಂಡವಪುರ-ಬೆಟ್ಟಹಳ್ಳಿ ಮುಖ್ಯರಸ್ತೆಯಲ್ಲಿ ಸಂಚಾರ ತಡೆ
ಪಾಂಡವಪುರ:ಕುಸಿದು ಬಿದ್ದಿರುವ ಸೇತುವೆ ದುರಸ್ತಿ ಮಾಡಿಸುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಪಾಂಡವಪುರ-ಬೆಟ್ಟಹಳ್ಳಿ ಮುಖ್ಯರಸ್ತೆ ಸಂಚಾರ ತಡೆದು ಬುಧವಾರ ಪ್ರತಿಭಟನೆ ನಡೆಸಿದರು.
ತಾಲೂಕಿನ ಶಂಭೂನಹಳ್ಳಿ ಗ್ರಾಮದ ಬಳಿ ಕುಸಿದು ಬಿದ್ದಿರುವ ಸೇತುವೆ ಬಳಿ ಜಮಾವಣೆಗೊಂಡ ಕಾರ್ಯಕರ್ತರು, ಸೇತುವೆ ಕುಸಿದು ಆರು ತಿಂಗಳು ಕಳೆದಿದೆ. ಮುಖ್ಯರಸ್ತೆಯಾಗಿರುವ ಕಾರಣ ವಾಹನ ಸಂಚಾರ ಹೆಚ್ಚಾಗಿದ್ದು, ಅಪಘಾತಗಳನ್ನು ತಡೆಗಟ್ಟಲು ಶೀಘ್ರ ಕಾಮಗಾರಿ ಕೈಗೊಳ್ಳುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಲೋಕೋಪಯೋಗಿ ಅಧಿಕಾರಿಗಳು ಮತ್ತು ತಾಲೂಕು ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಲೋಕೋಪಯೋಗಿ ಇಲಾಖೆ ಎಇಇ ಜಯಕುಮಾರ್ ಸೇತುವೆ ನಿರ್ಮಾಣ ಕಾಮಗಾರಿಗೆ ಈ ಮೊದಲು ಕರೆಯಲಾಗಿದ್ದ ಟೆಂಡರ್ ಪ್ರಕ್ರಿಯೆಯಲ್ಲಿ ಯಾರೊಬ್ಬರೂ ಭಾಗಹಿಸಲಿಲ್ಲ. ಎರಡನೇ ಬಾರಿ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಆದಷ್ಟು ಬೇಗ ಕಾಮಗಾರಿ ಪೂರೈಸಲಾಗುವುದು ಎಂದು ಭರವಸೆ ನೀಡಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಶಾಸಕರನ್ನು ಸ್ಥಳಕ್ಕೆ ಕರೆಸುವಂತೆ ಪಟ್ಟುಹಿಡಿದರು.
ಸ್ಥಳಕ್ಕೆ ತೆರಳಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಪಾಂಡವಪುರದಿಂದ ಶಂಭೂನಹಳ್ಳಿ ಮಾರ್ಗವಾಗಿ ಬೆಟ್ಟಹಳ್ಳಿ ರಸ್ತೆ ತುಂಬ ಕಿರಿದಾಗಿದ್ದು, ರಸ್ತೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ರಸ್ತೆ ಅಗತ್ಯಕ್ಕೆ ತಕ್ಕಂತೆ ಸೇತುವೆ ನಿರ್ಮಾಣ ಮಾಡಲಾಗುವುದು. ಸದ್ಯ ಕುಸಿದು ಬಿದ್ದಿರುವ ಸೇತುವೆಯ ತಡೆಗೋಡೆ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಪ್ರತಿಭಟನೆ ಕೈಬಿಟ್ಟರು.
ಈ ವೇಳೆ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೆ.ಎಲ್.ಆನಂದ್, ಮುಖಂಡರಾದ ಶ್ರೀನಿವಾಸ ನಾಯಕ, ಹಿರೇಮರಳಿ ಶ್ರೀನಿವಾಸ್, ಕನ್ನಂಬಾಡಿ ಸುರೇಶ್, ಎಂ.ಬೆಟ್ಟಹಳ್ಳಿ ಜಯಣ್ಣ, ಡೇರಿ ರಾಮು, ಚಿಕ್ಕಮರಳಿ ನವೀನ್, ಸೋಮಶೇಖರ್ ಇತರರು ಇದ್ದರು.