ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ: ಜಿಲ್ಲಾ ರೈತ ಸಂಘದಿಂದ ಪ್ರತಿಭಟನೆ

ಮಂಡ್ಯ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ಮಂಡ್ಯ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ರಸಗೊಬ್ಬರದ ಬೆಲೆಯನ್ನು ವಾಪಸ್ ಪಡೆಯಬೇಕು.
  • ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಕೆ
ಮಂಡ್ಯ: ರಸಗೊಬ್ಬರಗಳ ಮೇಲಿನ ಸಹಾಯಧನ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರದಲ್ಲಿ ಜಿಲ್ಲಾ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ಸಂಘದ ಕಾರ್ಯಕರ್ತರು, ತಮ್ಮ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದರು. ಅಂತೆಯೇ ಜಿಲ್ಲಾಡಳಿತದ ಮೂಲಕ ಪ್ರಧಾನಮಂತ್ರಿ ಅವರಿಗೆ ಮನವಿ ರವಾನಿಸಲಾಯಿತು.
ಒಕ್ಕೂಟ ಸರ್ಕಾರ ರಸಗೊಬ್ಬರದ ಬೆಲೆಯನ್ನು ವಾಪಸ್ ಪಡೆಯಬೇಕು. ಮಾತ್ರವಲ್ಲದೆ ಸಹಾಯಧನ ಹೆಚ್ಚಿಸುವುದರ ಜತೆಗೆ ರಿಯಾಯಿತಿ ದರದಲ್ಲಿ ಗೊಬ್ಬರ ಪೂರೈಕೆ ಮಾಡಬೇಕು. ಕಡ್ಡಾಯ ಲಿಂಕ್ ಪದ್ಧತಿಯನ್ನು ಕೈಬಿಡಬೇಕು. ಅಂತೆಯೇ ರೈತರು ತಮಗೆ ಬೇಕಾದ ರಸಗೊಬ್ಬರವನ್ನು ಕೇಳಿದಾಗ ಮಾರಾಟಗಾರರು ಕಡ್ಡಾಯವಾಗಿ ಬೇರೆ ಗೊಬ್ಬರ ಅಥವಾ ಬಿತ್ತನೆಬೀಜ ತೆಗೆದುಕೊಳ್ಳುವಂತೆ ಒತ್ತಾಯಿಸುವುದನ್ನು ತಡೆಗಟ್ಟಬೇಕು. ಈ ಮೂಲಕ ರೈತರು ಕೇಳಿದ ರಸಗೊಬ್ಬರವನ್ನೇ ಪೂರೈಕೆ ಮಾಡಬೇಕೆಂದು ಎಂದು ಆಗ್ರಹಿಸಿದರು.
ಒಕ್ಕೂಟ ಸರ್ಕಾರ ಮತ್ತು ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ದರ ಏರಿಕೆ ಮಾಡಿರುವುದನ್ನು ವಾಪಸ್ ಪಡೆಯಬೇಕು. ರಿಯಾಯಿತಿ ದರದಲ್ಲಿ ಕೃಷಿ ಚಟುವಟಿಕೆಗೆ ಡೀಸೆಲ್ ಪೂರೈಕೆ ಮಾಡಬೇಕು. ಕೇಂದ್ರ ಸರ್ಕಾರ ಕೊಟ್ಟ ಮಾತಿನಂತೆ ಡಾ.ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿ ಮಾಡುವ ಜತೆಗೆ ಕನಿಷ್ಟ ಬೆಂಬಲ ಬೆಲೆಯನ್ನು ಖಾತರಿಗೊಳಿಸಬೇಕು. ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ರೈತ ವಿರೋಧಿ ಮೂರು ಕಾಯ್ದೆಯನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಕೆ.ಟಿ.ಗೋವಿಂದೇಗೌಡ, ಎಸ್.ಎಂ.ಸಿದ್ದೇಗೌಡ, ಎಂ.ಎಸ್.ವಿಜಯ್‌ಕುಮಾರ್, ಜವರೇಗೌಡ, ನಾಗರಾಜು, ಲತಾ ಶಂಕರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net