ಖಾಸಗಿ ಶಾಲೆಯ ಕಾಮಗಾರಿ ತಡೆದು ಪ್ರತಿಭಟನೆ

ಖಾಸಗಿ ಶಾಲೆಗೆ ಸರ್ಕಾರಿ ಭೂಮಿಯನ್ನು ಅಧಿಕಾರಿಗಳು ಅಕ್ರಮವಾಗಿ ಮಂಜೂರು ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಕಾಮಗಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಖಾಸಗಿ ಶಾಲೆಗೆ ಸರ್ಕಾರಿ ಭೂಮಿಯನ್ನು ಅಧಿಕಾರಿಗಳು ಅಕ್ರಮವಾಗಿ ಮಂಜೂರು ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಕಾಮಗಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಬೆಳಗೊಳ ಗ್ರಾಮ ಬಳಿಯ ಸರ್ವೇ ನಂ. 101
  • ಖಾಸಗಿ ಶಾಲೆಗೆ ಸರ್ಕಾರಿ ಭೂಮಿಯನ್ನು ಅಧಿಕಾರಿಗಳು ಅಕ್ರಮವಾಗಿ ಮಂಜೂರು
ಕೆ.ಆರ್.ಸಾಗರ: ಬೆಳಗೊಳ ಗ್ರಾಮ ಬಳಿಯ ಸರ್ವೇ ನಂ. 101ರಲ್ಲಿ ಗುರುಕಲ ಎಂಬ ಖಾಸಗಿ ಶಾಲೆಗೆ ಸರ್ಕಾರಿ ಭೂಮಿಯನ್ನು ಅಧಿಕಾರಿಗಳು ಅಕ್ರಮವಾಗಿ ಮಂಜೂರು ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಕಾಮಗಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಗುರುಕುಲ ಶಾಲೆಯು ಈಗಾಗಲೇ ಶಾಲಾ ಕಟ್ಟಡ ನಿರ್ಮಿಸಿದ್ದು, ಪಂಚಾಯಿತಿಯಿಂದ ಅನುಮತಿ ಪಡೆಯದೆ ಕಾನೂನು ಬಾಹಿರವಾಗಿ ನಾಲೆಗೆ ಸೇರಿದ ಜಾಗ ಹಾಗೂ ಬಫರ್ ಝೋನ್ ಸ್ಥಳದಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟಿದೆ. ಬಡವರಿಗೆ ನಿವೇಶನ ಹಂಚಿಕೆ ಮಾಡಬೇಕೆಂದು ಕೊಂಡಿದ್ದ ಸರ್ಕಾರಿ ಜಾಗಕ್ಕೂ ಕನ್ನ ಹಾಹಲಾಗಿದ್ದು, ಆ ಸ್ಥಳದಲ್ಲಿನ ಬಫರ್ ಝೋನ್‌ನಲ್ಲಿ ಕಾಂಪೌಂಡ್ ನಿರ್ಮಿಸಿ 6 ಎಕರೆ 12 ಗುಂಟೆ ಸರ್ಕಾರಿ ಜಾಗವನ್ನು ಗುಳುಂ ಮಾಡಲು ಮುಂದಾಗಿದೆ. ಅಧಿಕಾರಿಗಳ ಕೈ ಚಳಕದಿಂದ ಅಕ್ರಮವಾಗಿ ಖಾತೆ ಮಾಡಿಸಿಕೊಂಡು ಆ ಜಾಗದಲ್ಲಿ ಹಾಸ್ಟೆಲ್ ನಿರ್ಮಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಸ್ಥಳದಲ್ಲಿ ಶ್ರೀರಂಗಪಟ್ಟಣ-ಕುಶಾಲನಗರ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ 1.22 ಕೋಟಿ ರೂ.ಹಣವನ್ನು ಪರಿಹಾರ ರೂಪದಲ್ಲಿ ಪಡೆದುಕೊಂಡಿದ್ದು, ಸರ್ಕಾರಿ ಜಾಗದಿಂದಲೇ ಸರ್ಕಾರಕ್ಕೆ ವಂಚಿಸಲಾಗಿದೆ. ಖಾಸಗಿ ಶಾಲೆಗೆ ಪಂಚಾಯಿತಿಯಿಂದ ಹಲವಾರು ಬಾರಿ ನೋಟಿಸ್ ನೀಡಲಾಗಿದ್ದು, ಪಂಚಾಯಿತಿಯ ನೋಟಿಸ್ ಧಿಕ್ಕರಿಸಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ವಿ.ಸುರೇಶ್ ದೂರಿದರು.
ಬಳಿಕ ಬೆಳಗೋಳ ಗ್ರಾಮದ ನಾಡ ಕಚೇರಿಗೆ ತೆರಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ಅಕ್ಕ- ಪಕ್ಕದವರ ಸಮಕ್ಷಮವಿಲ್ಲದೆ ಅವರಿಗೆ ಅಳತೆಯನ್ನು ಹೇಗೆ ಮಾಡಿಕೊಟ್ಟಿದ್ದೀರಿ ಎಂದು ಪ್ರಶ್ನಿಸಿದರು. ಅಕ್ರಮವಾಗಿ ಕಾಂಪೌಂಡ್ ಹಾಗೂ ಕಟ್ಟಡ ನಿರ್ಮಾಣ ಮಾಡುತ್ತಿದ್ದರೂ ನೀವೇಕೆ ಮೌನವಹಿಸಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.
ಇದೇ ವೇಳೆ ತಹಸೀಲ್ದಾರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಗ್ರಾಮಸ್ಥರು, ಎರಡು-ಮೂರು ದಿನಗಳಲ್ಲಿ ಕಾನೂನು ಕ್ರಮ ಕೈಗೊಳ್ಳುವ ಭರವಸೆಯ ಮೇರೆಗೆ ಪ್ರತಿಭಟನೆಯನ್ನು ಕೈ ಬಿಟ್ಟರು.
ಪ್ರತಿಭಟನೆಯಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಬಿ.ವಿ.ಸುರೇಶ್, ಮಾಜಿ ಸದಸ್ಯ ಪೈ.ಪ್ರಕಾಶ್, ಆರ್‌ಟಿಐ ಕಾರ್ಯಕರ್ತ ಮತ್ತು ಭೂಕಬಳಿ ವಿರೋಧಿ ಹೋರಾಟಗಾರ ಕುಮಾರ್, ಗ್ರಾಮಸ್ಥರಾದ ನವೀನ್, ರಮೇಶ್, ದೀಪಕ್, ಕಿಶೋರ್, ಜಯಂತ್, ಶಶಾಂಕ್, ಪಾಪಯ್ಯ, ವಿಶ್ವನಾಥ್, ಸುನೀಲ್ ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net