ಮಂಡ್ಯ: ಮಂಡ್ಯ ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಮೇಲೆ ವಿವಿಧ ಹೆಸರಿನಲ್ಲಿ ಅನಗತ್ಯ ಶುಲ್ಕಗಳನ್ನು ವಿಧಿಸಿ ಆರ್ಥಿಕ ಹೊರೆ ಹಾಕಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಷ್ಟ್ರಪಕ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಸರ್ಕಾರ, ಮಂಡ್ಯ ವಿವಿ ಕುಲಪತಿ ಮತ್ತು ಆಡಳಿತ ಮಂಡಳಿ ವಿರುದ್ದ ಘೋಷಣೆಗಳನ್ನು ಕೂಗಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಹೆಚ್ಚುತ್ತಿರುವ ಶುಲ್ಕದ ಕಾರಣದಿಂದಾಗಿ ಅನೇಕ ವಿದ್ಯಾರ್ಥಿಗಳು ಶಿಕ್ಷಣದಿಂದ ಹೊರಗುಳಿಯುವಂತಾಗಿದೆ. ಪಾಲಕರು ಸಂಕಷ್ಟ ಅನುಭವಿಸುತ್ತದ್ದಾರೆ. ತಕ್ಷಣ ಹೆಚ್ಚಿಸಿರುವ ಅನಗತ್ಯ ಶುಲ್ಕವನ್ನು ಕಡಿತಗೊಳಿಸಬೇಕು. ಮೂಲ ಸೌಲಭ್ಯ, ಕಂಪ್ಯೂಟರ್ ಲ್ಯಾಬ್ ಸೇರಿದಂತೆ ವಿವಿಧ ಹೆಸರಿನಲ್ಲಿ ಪ್ರತಿಯೊಂದು ಶುಲ್ಕವನ್ನು ಯಾವ ಆಧಾರದ ಮೇಲೆ ನಿಗದಿಪಡಿಸಲಾಗಿದೆ ಎಂಬುದನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಸರ್ಕಾರಿ ಅನುದಾನ ಪಡೆಯುವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಮೇಲಿನ ಹೆಚ್ಚುವರಿ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಶುಲ್ಕ ನಿಗದಿಗೆ ಮುನ್ನ ವಿದ್ಯಾರ್ಥಿ ಪ್ರತಿನಿಧಿಗಳು, ಪಾಲಕರು ಮತ್ತು ಕಾಲೇಜು ಆಡಳಿತದೊಂದಿಗೆ ಸಮಾಲೋಚನೆ ನಡೆಸುವ ವ್ಯವಸ್ಥೆ ಜಾರಿಗೆ ತರಬೇಕು. ಆರ್ಥಿಕವಾಗಿ ಹಿದುಳಿದ ವಿದ್ಯಾರ್ಥಿಗಳಿಗೆ ವಿಶೇಷ ಶುಲ್ಕ ವಿನಾಯಿತಿ ಅಥವಾ ನೆರವು ನೀಡಬೇಕು. ಅನಗತ್ಯವಾಗಿ ವಸೂಲಾದ ಶುಲ್ಕವನ್ನು ವಿದ್ಯಾರ್ಥಿಗಳಿಗೆ ತಕ್ಷಣ ಮರುಪಾವತಿ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಯುವ ಘಟಕದ ಕಾರ್ಯದರ್ಶಿ ಎಸ್.ಪ್ರಮೋದ್, ಜಿಲ್ಲಾಧ್ಯಕ್ಷ ಮಲ್ಲೇಶ್, ಯುವ ಘಟಕದ ಅಧ್ಯಕ್ಷೆ ದೀಪಿಕಾ, ತಾಲೂಕು ಅಧ್ಯಕ್ಷ ಜಯರಾಂ, ಮುಖಂಡರಾದ ವಿಷಕಂಠ, ಮಹಾದೇವಸ್ವಾಮಿ, ಸತೀಶ್, ಮಲ್ಲೇಶ್, ಕಾಂತರಾಜು, ಶ್ವೇತಾ ಇತರರಿದ್ದರು.