ಕನಿಷ್ಟ ವೇತನ ಪಾವತಿಸಲು ಆಗ್ರಹ: ಪೌರ ಕಾರ್ಮಿಕರ ಮಹಾಸಂಘದ ಪ್ರತಿಭಟನೆ

ಮಂಡ್ಯ ನಗರದ ಜಿಪಂ ಕಚೇರಿ ಎದುರು ಪೌರ ಕಾರ್ಮಿಕರ ಮಹಾಸಂಘದ ಪ್ರತಿಭಟನೆ ನಡೆಸಲಾಯಿತು.
ಮಂಡ್ಯ ನಗರದ ಜಿಪಂ ಕಚೇರಿ ಎದುರು ಪೌರ ಕಾರ್ಮಿಕರ ಮಹಾಸಂಘದ ಪ್ರತಿಭಟನೆ ನಡೆಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಧರಣಿ
  • ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ
ಮಂಡ್ಯ: ಕನಿಷ್ಟ ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರದಲ್ಲಿ ಪೌರ ಕಾರ್ಮಿಕರ ಮಹಾಸಂಘದ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಧರಣಿ ನಡೆಸಿದ ಪೌರ ಕಾರ್ಮಿಕರು ತಮ್ಮ ಬೇಡಿಕೆ ಈಡೇರಿಸಬೇಕೆಂದು ಘೋಷಣೆ ಕೂಗಿದರು. ನಂತರ ಜಿಪಂ ಸಿಇಒ ಅವರಿಗೆ ಮನವಿ ಸಲ್ಲಿಸಿದರು. ಅಂತೆಯೇ ಸರ್ಕಾರದ ಸ್ಪಷ್ಟ ಆದೇಶಗಳಿದ್ದರೂ ಜಿಲ್ಲೆಯಲ್ಲಿ ಮಾತ್ರ ಪೌರಕಾರ್ಮಿಕರಿಗೆ ಕನಿಷ್ಟ ವೇತನ, ವಸತಿ ಮತ್ತು ಆರೋಗ್ಯ ಸೌಲಭ್ಯ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ರಾಜ್ಯಾಧ್ಯಕ್ಷ ಡಿ.ಆರ್.ರಾಜು ಮಾತನಾಡಿ, 2025ರ ಮಾರ್ಚ್‌ನಿಂದ ಜಾರಿಗೆ ಬಂದಿರುವ ಹೊಸ ಪರಿಷ್ಕರಣೆಯಂತೆ ಪೌರ ಕಾರ್ಮಿಕರಿಗೆ ಕನಿಷ್ಟ ವೇತನ 21,501 ರೂ ನೀಡಬೇಕು. ಆದರೆ ಮಂಡ್ಯದಲ್ಲಿ ಕೇವಲ 12 ರಿಂದ 14 ಸಾವಿರ ರೂ ನೀಡಲಾಗುತ್ತಿದೆ. ಪಿಎಫ್ ಪಾವತಿಯಾಗುತ್ತಿಲ್ಲ ಮತ್ತು ಮೃತಪಟ್ಟ ಪೌರಕಾರ್ಮಿಕರಿಗೆ ಸಿಗಬೇಕಾದ 20 ಲಕ್ಷ ರೂ ವಿಮಾ ಸೌಲಭ್ಯವೂ ತಲುಪುತ್ತಿಲ್ಲ. ಮಂಡ್ಯ ಜಿಲ್ಲೆಗೆ ಒಂದು ಕಾನೂನು, ಬೇರೆ ಜಿಲ್ಲೆಗೆ ಒಂದು ಕಾನೂನಾ ಎಂದು ಅವರು ನೇರವಾಗಿ ಪ್ರಶ್ನಿಸಿದರು.
ಪ್ರತಿಯೊಬ್ಬ ಪೌರಕಾರ್ಮಿಕರಿಗೂ ಸರ್ವೀಸ್ ರಿಜಿಸ್ಟರ್ ತೆರೆಯಬೇಕು. ಪ್ರಧಾನ ಮಂತ್ರಿ ವಿಮಾ ಯೋಜನೆಯಡಿ ಪೌರಕಾರ್ಮಿಕರಿಗೆ ರಕ್ಷಣೆ ಒದಗಿಸಬೇಕು. ಸ್ವಂತ ಮನೆ ಇಲ್ಲದ ಪೌರಕಾರ್ಮಿಕರಿಗೆ ಕೂಡಲೇ ನಿವೇಶನ ಅಥವಾ ಮನೆ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಮುಟ್ಟನಹಳ್ಳಿ ಮಹೇಶ್ ಮಾತನಾಡಿ, ನಾವು ಎಸಿ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವವರಲ್ಲ. ತ್ಯಾಜ್ಯ ಮತ್ತು ವಿಷಕಾರಿ ಅನಿಲಗಳ ಮಧ್ಯೆ ನಮ್ಮ ಜೀವನ ಸವೆಯುತ್ತಿದೆ. ನಮ್ಮ ಆರೋಗ್ಯದ ಸ್ಥಿತಿ ಏನಾಗಿದೆ ಎಂದು ಒಮ್ಮೆ ಹಳ್ಳಿಗಳಿಗೆ ಬಂದು ನೋಡಿ. ಅಧಿಕಾರಿಗಳು ಕೊಡುವ ವರದಿಯನ್ನು ನಂಬಬೇಡಿ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಬಸರಾಳು ಮಂಜು, ಬನ್ನಾರಿ, ರಂಗಣ್ಣ, ಸಿ.ಆರ್.ವಿಜಿ , ಎಲ್.ಐ.ಸಿ ಮುರುಗೇಶ್, ಶ್ರೀನಿವಾಸ್, ಆರ್.ಬಾಬು, ದಿನೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net