ಮನರೇಗಾ ಹೆಸರನ್ನು ಬದಲಿಸಿ ವಿಕಸಿತ ಭಾರತ ಜಿ ರಾಮ್ ಜಿ ಎಂದು ಮರುನಾಮಕರಣ
ಹಲಗೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (ಮನರೇಗಾ)ಯ ಹೆಸರನ್ನು ಬದಲಿಸಿ ವಿಕಸಿತ ಭಾರತ ಜಿ ರಾಮ್ ಜಿ ಎಂದು ಮರುನಾಮಕರಣ ಮಾಡುವ ಮೂಲಕ ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಕಾಯ್ದೆಯನ್ನು ಉದ್ದೇಶಪೂರ್ವಕವಾಗಿ ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಘಟಕದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಮಳವಳ್ಳಿ ತಾಲೂಕಿನ ಹಲಗೂರು ಗ್ರಾಮ ಪಂಚಾಯಿತಿ ಮುಂದೆ ಜಮಾಯಿಸಿದ ಕಾರ್ಯಕರ್ತರು ಕೇಂದ್ರ ಸರ್ಕಾರದ ಬಡವರ ವಿರೋಧಿ ನೀತಿಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷ ಎನ್.ಎಲ್.ಭರತ್ ರಾಜ್ ಮಾತನಾಡಿ, ನರೇಗಾ ಕೇವಲ ಒಂದು ಕಲ್ಯಾಣ ಯೋಜನೆಯಷ್ಟೇ ಅಲ್ಲ, ಅದು ಉದ್ಯೋಗ ಭದ್ರತೆ ಮತ್ತು ಸಾಮಾಜಿಕ ನ್ಯಾಯದ ಸಂಕೇತವಾಗಿತ್ತು. ಗ್ರಾಮೀಣ ಭಾರತದ ಏಳಿಗೆಯಲ್ಲೇ ದೇಶದ ಅಭಿವೃದ್ಧಿಯನ್ನು ಕಾಣುತ್ತಿದ್ದ ಮಹಾತ್ಮ ಗಾಂಧಿಯವರ ಚಿಂತನೆಗೆ ಈ ಯೋಜನೆ ಅರ್ಥಪೂರ್ಣವಾಗಿತ್ತು ಎಂದು ಹೇಳಿದರು.
2005ರಲ್ಲಿ ಯುಪಿಎ-1 ಸರ್ಕಾರಕ್ಕೆ ಎಡಪಕ್ಷಗಳು ನೀಡಿದ್ದ ಬೆಂಬಲದ ಪ್ರಮುಖ ಷರತ್ತಿನಂತೆ ಈ ಯೋಜನೆ ಜಾರಿಗೆ ಬಂದಿದ್ದು, ಆರಂಭದಲ್ಲಿ ಸಂಪೂರ್ಣ ಹಣವನ್ನು ಕೇಂದ್ರ ಸರ್ಕಾರವೇ ನೀಡುತ್ತಿತ್ತು. ಆದರೆ ಪ್ರಸ್ತುತ ಕೇಂದ್ರ ಸರ್ಕಾರ ಶೇ.60ರಷ್ಟು ಮಾತ್ರ ಅನುದಾನ ನೀಡಿ, ಉಳಿದ ಶೇ.40ರಷ್ಟು ಹಣದ ಹೊಣೆಯನ್ನು ರಾಜ್ಯ ಸರ್ಕಾರಗಳ ಮೇಲೆ ಹಾಕಿ ಯೋಜನೆಯನ್ನು ದುರ್ಬಲಗೊಳಿಸಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯೋಜನೆಯ ಹೆಸರನ್ನು ಬದಲಾಯಿಸುವುದರಿಂದ ಸಾರ್ವಜನಿಕ ತೆರಿಗೆ ಹಣ ವ್ಯರ್ಥವಾಗುವುದರ ಜತೆಗೆ, ಜನರ ಹಣದಿಂದ ನಡೆಯುವ ಯೋಜನೆಗಳಿಗೆ ಸರ್ಕಾರ ತನ್ನ ಇಚ್ಛೆಯಂತೆ ಹೆಸರು ಬದಲಾಯಿಸುವುದು ಬೇಜವಾಬ್ದಾರಿಯುತ ನಡವಳಿಕೆಯಾಗಿದೆ. ಯುಪಿಎ ಸರ್ಕಾರ ಜಾರಿಗೊಳಿಸಿದ್ದ ಹಲವಾರು ಯೋಜನೆಗಳನ್ನು ಮರುನಾಮಕರಣ ಮಾಡಿರುವುದು ದ್ವೇಷ ರಾಜಕಾರಣದ ಸಂಕೇತವಾಗಿದೆ. ಹೆಸರು ಬದಲಾಯಿಸುವುದೇ ಇವರ ಸಾಧನೆಯಾಗಿದ್ದು, ಹೊಸ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ನಾಡಕಚೇರಿ ಉಪ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಕಾರ್ಯದರ್ಶಿ ಎನ್.ಲಿಂಗರಾಜಮೂರ್ತಿ, ಹಲಗೂರು ಹೋಬಳಿ ಅಧ್ಯಕ್ಷ ಎಂ.ಇ.ಮಹಾದೇವು, ಉಪಾಧ್ಯಕ್ಷೆ ಪ್ರಮೀಳಾ, ಮುಖಂಡರಾದ ಸಾಗ್ಯ ಶಿವಕುಮಾರ್, ಗಣೇಶ್ ಗೊಲ್ಲರಹಳ್ಳಿ, ಕೆ.ಎನ್.ಮೂರ್ತಿ, ಶಾಂಭವಿ, ಜ್ಯೋತಿ, ಮಹಾದೇವಮ್ಮ, ಸಣ್ಣಶೆಟ್ಟಿ ಚಿಕ್ಕೀರಪ್ಪ ಹಾಗೂ ರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.