

ಮದ್ದೂರು : ತಾಲೂಕಿನ ಮಹರ್ನವಮಿ ದೊಡ್ಡಿ ಗ್ರಾಮದ ವಿವಾದಿತ ಜಮೀನಿನ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವಾಗಲೇ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಮುಂದಾಗಿರುವ ಅಧಿಕಾರಿಗಳ ಕ್ರಮ ಖಂಡಿಸಿ ದಲಿತ ಹಕ್ಕುಗಳ ಸಮಿತಿ ಸಂಘಟನೆಯ ಪದಾಧಿಕಾರಿಗಳು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪಿಡಿಒ ಹಾಗೂ ತಾಲೂಕು ಆಡಳಿತದ ವಿರುದ್ಧ ಘೋಷಣೆ ಕೂಗಿ ತಮ್ಮ ಅಕ್ರೋಶ ವ್ಯಕ್ತಪಡಿಸಿದ ಸಂಘಟನೆ ಮುಖಂಡರು, ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ದರು. ವಿವಾದಿತ ಜಮೀನಲ್ಲಿ ಆಯುಷ್ಮಾನ್ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣದ ಕಾಮಗಾರಿ ಮಾಡಲು ಮುಂದಾಗಿದ್ದು, ಮಾಲೀಕತ್ವ ಮತ್ತು ಹಕ್ಕುಗಳಿಗೆ ಸಂಬಂಧಿಸಿದಂತೆ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ಹಾಗಿದ್ದೂ ಗ್ರಾಪಂ ನಿಂದ ಜಮೀನಿನನ್ನು ಸರ್ಕಾರಕ್ಕೆ ಹಸ್ತಾಂತರಿಸುವ ನಿರ್ಣಯ ಕೈಗೊಂಡು ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ ಪಡೆದಿರುವುದು ಖಂಡನೀಯ ಎಂದರು.
ಸಂಘಟನೆಯ ಜಿಲ್ಲಾಧ್ಯಕ್ಷ ಆರ್. ಕೃಷ್ಣ, ತಾಲೂಕು ಅಧ್ಯಕ್ಷ ಎಂ.ವಿ. ವಿಜಯೇಂದ್ರ ಕುಮಾರ್, ಜಿಲ್ಲಾ ಕಾರ್ಯದರ್ಶಿ ಸಿ. ಅಂಬುಜಿ, ಪದಾಧಿಕಾರಿಗಳಾದ ಮಹೇಶ್, ಶಿವಲಿಂಗಯ್ಯ, ವರಲಕ್ಷ್ಮೀ, ನಾಗೇಶ್, ವೆಂಕಟೇಶ್, ರೇಣುಕಾ, ಶಿವರಾಮ, ರಾಧಾ ಹಾಜರಿದ್ದರು.