ಕಾಯಂ ವೈದ್ಯರು, ತುರ್ತು ಚಿಕಿತ್ಸೆ ಸೌಲಭ್ಯ ಕಲ್ಪಿಸಲು ಒತ್ತಾಯ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮದ್ದೂರು ತಾಲೂಕಿನ ಬೆಸಗರಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆಗಳ ವತಿಯಿಂದ ಪ್ರತಿಭಟನೆ ಮಾಡಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಎಚ್.ಎಸ್.ಪ್ರಭುಲಿಂಗು, ಕೀಳಘಟ್ಟ ನಂಜುಂಡಯ್ಯ, ಸೊ.ಶಿ.ಪ್ರಕಾಶ್, ವೆಂಕಟೇಶ್, ವಿ.ಸಿ.ಉಮಾಶಂಕರ್, ಎಂ.ಸಿ.ಲಿಂಗರಾಜು ಇದ್ದರು.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮದ್ದೂರು ತಾಲೂಕಿನ ಬೆಸಗರಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆಗಳ ವತಿಯಿಂದ ಪ್ರತಿಭಟನೆ ಮಾಡಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಎಚ್.ಎಸ್.ಪ್ರಭುಲಿಂಗು, ಕೀಳಘಟ್ಟ ನಂಜುಂಡಯ್ಯ, ಸೊ.ಶಿ.ಪ್ರಕಾಶ್, ವೆಂಕಟೇಶ್, ವಿ.ಸಿ.ಉಮಾಶಂಕರ್, ಎಂ.ಸಿ.ಲಿಂಗರಾಜು ಇದ್ದರು.
Published on
ಮದ್ದೂರು : ತಾಲೂಕಿನ ಬೆಸಗರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯರು ಮತ್ತು ಮಹಿಳಾ ವೈದ್ಯರ ನೇಮಕ, ಸಿಬ್ಬಂದಿ, ತುರ್ತು ಚಿಕಿತ್ಸೆ ಸೌಲಭ್ಯ ಕಲ್ಪಿಸುವ ಜತೆಗೆ ಬೆಸಗರಹಳ್ಳಿ ಸರ್ಕಾರಿ ಬಸ್ ನಿಲ್ದಾಣದ ಸಮೀಪದ ಸುಸಜ್ಜಿತ ಶೌಚಗೃಹ ಹಾಗೂ ಶುದ್ಧ ಕುಡಿಯುವ ಘಟಕ ನಿರ್ಮಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆಗಳ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ರೈತ ಸಂಘದ ತಾಲೂಕು ಅಧ್ಯಕ್ಷ ಎಚ್.ಎಸ್.ಪ್ರಭುಲಿಂಗು ಮಾತನಾಡಿ, ಬೆಸಗರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಹಿಳಾ ಮತ್ತು ಪುರುಷ ವೈದ್ಯರನ್ನು ನೇಮಿಸದ ಕಾರಣ ಈ ಭಾಗದ ರೋಗಿಗಳಿಗೆ ತೊಂದರೆಯಾಗಿದ್ದರು ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಸಗರಹಳ್ಳಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸುಮಾರು 40 ಹಳ್ಳಿಗಳ ಗ್ರಾಮಸ್ಥರು ಅವಲಂಬಿಸಿದ್ದಾರೆ. ವೈದ್ಯರು ಇಲ್ಲದ ಪರಿಣಾಮ ರೋಗಿಗಳು ಮದ್ದೂರು ಹಾಗೂ ಮಂಡ್ಯ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವ ದುಸ್ಥಿತಿ ನಿರ್ಮಾಣವಾಗಿದೆ. ಜತೆಗೆ ತುರ್ತು ಚಿಕಿತ್ಸೆಗೂ ತೊಂದರೆಯಾಗುತ್ತಿದೆ ಎಂದರು.
ಆಸ್ಪತ್ರೆಯಲ್ಲಿ ಮೂಲ ಸೌಕರ್ಯಗಳನ್ನು ಹೊಂದಿರುವುದರಿಂದ ನುರಿತ ಮಹಿಳಾ ವೈದ್ಯರು ಹಾಗೂ ಪುರುಷ ವೈದ್ಯರನ್ನು ನಿಯೋಜನೆ ಮಾಡಿ ಈ ಭಾಗದ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿದರು.
ರೈತ ಮುಖಂಡ ಗುಡಿದೊಡ್ಡಿ ಶಿವಲಿಂಗಯ್ಯ ಮಾತನಾಡಿ, ಬೆಸಗರಹಳ್ಳಿ ಗ್ರಾಮದ ಸರ್ಕಾರಿ ಬಸ್ ನಿಲ್ದಾಣ ಸಮೀಪ ಇರುವ ಶೌಚಗೃಹ ಸಮರ್ಪಕ ನಿರ್ವಹಣೆ ಇಲ್ಲದೆ ಗಬ್ಬೆದ್ದು ನಾರುತ್ತಿದೆ. ಇದರಿಂದ ಗ್ರಾಮಸ್ಥರಿಗೆ, ಪ್ರಯಾಣಿಕರಿಗೆ ಶೌಚಕ್ಕೆ ಹೋಗಲು ತೊಂದರೆಯಾಗುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮುಂದಾದರೂ ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಸುಸಜ್ಜಿತ ಶೌಚಗೃಹ ನಿರ್ಮಾಣ ಮಾಡಬೇಕು ಎಂದರು.
ರೈತ ಮುಖಂಡ ಸೊ.ಶಿ.ಪ್ರಕಾಶ್ ಮಾತನಾಡಿ, ಬಸ್ ನಿಲ್ದಾಣ ಸಮೀಪವಿರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹಲವಾರು ತಿಂಗಳು ಕಳೆದಿದ್ದರು ಸರಿಪಡಿಸಲಿಲ್ಲ. ಆದ್ದರಿಂದ ಈ ಕೂಡಲೇ ಕುಡಿಯುವ ನೀರಿನ ಘಟಕ ಸರಿಪಡಿಸುವಂತೆ ಅಧಿಕಾರಿಗಳನ್ನು ಆಗ್ರಹಿಸಿದರು.
ಶೀಘ್ರವಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸ್ಥಳಕ್ಕೆ ಆಗಮಿಸಿದ ಪ್ರಭಾರ ಜಿಲ್ಲಾ ವೈದಾಧಿಕಾರಿ ಡಾ.ಸೋಮಶೇಖರ್, ತಾಲೂಕು ಆರೋಗ್ಯ ಅಧಿಕಾರಿ ಡಾ.ರವಿಶಂಕರ್, ಪಿಡಿಒ ಬಾಲಾಜಿ ಅವರು ನಿಮ್ಮ ಬೇಡಿಕೆಗಳನ್ನು ಆದ್ಯತೆ ಮೇರೆಗೆ ಶೀಘ್ರವಾಗಿ ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ.ಲಿಂಗರಾಜು, ರೈತ ಮುಖಂಡ ಕೀಳಘಟ್ಟ ನಂಜುಂಡಯ್ಯ, ಸೊ.ಶಿ.ಪ್ರಕಾಶ್, ಗುಡಿದೊಡ್ಡಿ ಶಿವಲಿಂಗಯ್ಯ, ಅಣ್ಣೂರು ಮಹೇಂದ್ರ, ಶ್ರೀನಿವಾಸ, ವೆಂಕಟೇಶ, ಶಶಿಕುಮಾರ್, ಮಧು, ಶಿವರಾಮ, ಕರಿಯಪ್ಪ, ಕೃಷ್ಣ, ರಾಮೇಗೌಡ, ಮಂಜುನಾಥ, ಶಿವರಾಮು, ವೆಂಕಟೇಶ್, ಜಗದೀಶ್, ಕೆ.ಲಿಂಗರಾಜು, ಡಿ.ಶಿವರಾಮು, ಸರ್ವರ್, ಮರಲಿಂಗು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net